Advertisement

ಹಳ್ಳಿಗಳನ್ನು ತಲುಪಲಿದೆ KSRTC ಕೊರಿಯರ್‌! ಉದ್ಯೋಗ ಸೃಷ್ಟಿಯ ವಿನೂತನ ಯೋಜನೆ

06:31 PM Nov 21, 2020 | sudhir |

ಮಂಗಳೂರು: ಕೊರೊನಾದಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಕೆಎಸ್ಸಾರ್ಟಿಸಿ ಮತ್ತೆ ಹಳಿಯತ್ತ ಮರಳಲು ವಿನೂತನ ಯೋಜನೆಗಳನ್ನು ರೂಪಿಸುತ್ತಿದೆ. ಕರ್ನಾಟಕ ಮತ್ತು ಅನ್ಯ ರಾಜ್ಯಗಳಿಗೆ ಸರಕು ಮತ್ತು ಪತ್ರಗಳನ್ನು ಕೊಂಡೊಯ್ಯಲು ಕೊರಿಯರ್‌ ಸೇವೆ ಜಾರಿಗೆ ತರಲು ನಿರ್ಧರಿಸಿದ್ದು, ಹೊಸ ವರ್ಷಕ್ಕೆ ಈ ಯೋಜನೆ ಜಾರಿಗೊಳ್ಳಲಿದೆ.

Advertisement

ರಾಜ್ಯದಲ್ಲಿ ಈಗಾಗಲೇ ಹತ್ತಾರು ಖಾಸಗಿ ಕೊರಿಯರ್‌ ವ್ಯವಸ್ಥೆಗಳಿದ್ದು, ಕೆಎಸ್ಸಾರ್ಟಿಸಿಯು ಸ್ಪರ್ಧಾತ್ಮಕ ದರದಲ್ಲಿ ಕೊರಿಯರ್‌ ಸೇವೆ ಒದಗಿಸಲಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರರನ್ನು ಗುರಿಯಾಗಿರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಈವರೆಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ವಾರಸುದಾರರಿದ್ದರೆ ಮಾತ್ರ ಪಾರ್ಸೆಲ್‌ ಒಯ್ಯಲು ಅವಕಾಶ ಇತ್ತು. ಮುಂದೆ ಯಾರೂ ಕೊರಿಯರ್‌ ಕಳುಹಿಸಬಹುದು. ಸದ್ಯಕ್ಕೆ ರಾಜ್ಯದೊಳಗೆ ಸಂಚರಿಸುವ ಬಸ್‌ಗಳಲ್ಲಿ ಈ ಸೇವೆ ಜಾರಿಗೊಳ್ಳಲಿದೆ. ಈ ಬಗ್ಗೆ ಈಗಾಗಲೇ ಎಲ್ಲ ನಿಗಮಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಸದ್ಯದಲ್ಲೇ ರಾಜ್ಯದೆಲ್ಲೆಡೆ ಫ್ರಾಂಚೈಸಿ ಕಚೇರಿಗಳು ತೆರೆಯಲಿವೆ.
ಕೊರಿಯರ್‌ ಸೇವೆ ಆರಂಭಿಸುವ ಉದ್ದೇಶದಿಂದ ಕೆಎಸ್ಸಾರ್ಟಿಸಿಯು ಖಾಸಗಿ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಒಪ್ಪಂದ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಕೊರಿಯರ್‌ ಸೇವೆಗಾಗಿ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ.

ಉದ್ಯೋಗ ಸೃಷ್ಟಿ
ಕೆಎಸ್ಸಾರ್ಟಿಸಿಯ ಈ ವಿನೂತನ ಯೋಜನೆಯಿಂದ ಉದ್ಯೋಗ ಸೃಷ್ಟಿಯ ಗುರಿಯೂ ಇದೆೆ. ಕೊರಿಯರ್‌ ನಿರ್ವಹಣೆಗೆ ಸಂಬಂಧಪಟ್ಟಂತೆ ಸಿಬಂದಿ ನೇಮಕಾತಿಯನ್ನು ಆಯಾ ಫ್ರಾಂಚೈಸಿ ಮಾಡಿಕೊಳ್ಳುತ್ತದೆ. ಪ್ರತೀ ವಿಭಾಗ ಮಟ್ಟದಲ್ಲಿರುವ ಕಚೇರಿಯಿಂದ ನಗರ, ಗ್ರಾಮೀಣ ಪ್ರದೇಶದ ಮನೆ ಬಾಗಿಲಿಗೆ ತಲುಪಿಸಲು ಸಿಬಂದಿ ನೇಮಕಾತಿ ಕೆಲವು ದಿನಗಳಲ್ಲಿ ನಡೆಯಲಿದೆ.
ರಾಜ್ಯದ ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಕೊರಿಯರ್‌ ಸೇವೆ ಸಮರ್ಪಕವಾಗಿಲ್ಲ. ಕೊರಿಯರ್‌ ಸ್ವೀಕರಿಸಲು ಅಥವಾ ಕಳುಹಿಸಲು ಹತ್ತಿರದ ಪಟ್ಟಣ ಅಥವಾ ನಗರಕ್ಕೆ ಹೋಗಬೇಕು. ಕೆಎಸ್ಸಾರ್ಟಿಸಿ ಬಸ್‌ಗಳು ಸಾಮಾನ್ಯವಾಗಿ ಎಲ್ಲ ಹಳ್ಳಿಗಳನ್ನೂ ತಲುಪುತ್ತಿವೆ. ಈ ಜಾಲದ ಮೂಲಕ ಕೊರಿಯರ್‌ ಸೇವೆಯನ್ನು ಗ್ರಾಮೀಣ ಭಾಗಕ್ಕೂ ತಲುಪಿಸುವ ಯೋಜನೆ ಕೆಎಸ್ಸಾರ್ಟಿಸಿಯದ್ದು.

ಕೊರಿಯರ್‌ ವ್ಯವಸ್ಥೆಯು ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯು ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್‌ಇ ಕೆಎಸ್ಸಾರ್ಟಿಸಿ ನಿಗಮಗಳಲ್ಲಿ ಜಾರಿಗೊಳ್ಳಲಿದೆ. ಹೊರ ರಾಜ್ಯಗಳ ಸರಕಾರಿ ಸಾರಿಗೆ ನಿಗಮಗಳು ಯಾವ ರೀತಿ ಇಂತಹ ಸೇವೆಯನ್ನು ಅಳವಡಿಸಿಕೊಂಡಿವೆ ಎಂಬುದನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳ ತಂಡ ಅಧ್ಯಯನ ನಡೆಸಿದೆ. ತೆಲಂಗಾಣದ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಆ್ಯಪ್‌ ಮೂಲಕ ಟ್ರ್ಯಾಕ್‌
ಕೆಎಸ್ಸಾರ್ಟಿಸಿ ಕೊರಿಯರ್‌ ವ್ಯವಸ್ಥೆಯನ್ನು ಆ್ಯಪ್‌ ಟ್ರ್ಯಾಕ್‌ ಮಾಡಬಹುದಾಗಿದೆ. ಪಾರ್ಸೆಲ್‌ ನೀಡುವಾಗ ಯುನಿಕ್‌ ಐಡಿ ನೀಡಲಾಗುತ್ತದೆ. ಆ ಬಳಿಕ ಕೊರಿಯರ್‌ ಎಲ್ಲಿದೆ, ಯಾವಾಗ ತಲುಪುತ್ತದೆ ಮತ್ತಿತರ ಮಾಹಿತಿಗಳನ್ನು ಆ್ಯಪ್‌ ಮೂಲಕ ಪಡೆಯಬಹುದು.

Advertisement

ಹಸುರು ಬಸ್‌ ಸೇವೆಗೆ ಚಿಂತನೆ
ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ತರಕಾರಿ, ಹಣ್ಣುಗಳನ್ನು ಒಯ್ಯುವ “ಗ್ರೀನ್‌ ಬಸ್‌ ಸೇವೆ’ಯನ್ನು ಆರಂಭಿಸುವುದಕ್ಕೂ ಕೆಎಸ್ಸಾರ್ಟಿಸಿ ಚಿಂತನೆ ನಡೆಸುತ್ತಿದೆ. ಈಗಾಗಲೇ 10 ಲಕ್ಷ ಕಿ.ಮೀ. ಕ್ರಮಿಸಿರುವ ಹಳೆಯ ಬಸ್‌ಗಳನ್ನು ಈ ಸೇವೆಗಾಗಿ ಉಪಯೋಗಿಸಲು ಸಿದ್ಧತೆ ನಡೆಯುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

ಕೆಎಸ್ಸಾರ್ಟಿಸಿಯು ಕೆಲವೇ ತಿಂಗಳಲ್ಲಿ ಸ್ಪರ್ಧಾತ್ಮಕ ದರದ ಕೊರಿಯರ್‌ ಸೇವೆಯನ್ನು ಜಾರಿಗೆ ತರಲಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತೀ ವಿಭಾಗದಲ್ಲಿ ಪ್ರಾಂಚೈಸಿ ಕಚೇರಿ ತೆರೆಯಲಿದ್ದು, ಉದ್ಯೋಗ ಸೃಷ್ಟಿಗೂ ಇದು ಪ್ರಯೋಜನಕಾರಿ.
– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next