ಗದಗ: ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿದಿದ್ದು, ನಗರದ ಹೊಸ ಬಸ್ ನಿಲ್ದಾಣದಿಂದ ಮಂಗಳವಾರ ಸಂಚಾರ ಆರಂಭಗೊಂಡಿದೆ.
ಜಿಲ್ಲೆಯಿಂದ 136 ಜಿಲ್ಲಾ ವ್ಯಾಪ್ತಿಯೊಳಗೆ 98 ಅಂತರ ಜಿಲ್ಲೆ ಸೇರಿದಂತೆ ಒಟ್ಟು 228 ಬಸ್ ಗಳನ್ನು ರಸ್ತೆಗಿಳಿಸಲಾಗಿದೆ.
ಬೆಳಗ್ಗೆ 8 ಗಂಟೆಗೆ ಮೊದಲ ಬಸ್ ಹುಬ್ಬಳ್ಳಿ ಮಾರ್ಗದಲ್ಲಿ ಆರಂಭಗೊಂಡಿದ್ದು, ಬಸ್ ನಿಲ್ದಾಣದ ಅಧಿಕಾರಿಗಳು ಬಸ್ ಗೆ ಪೂಜೆ ನೆರವೇರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಬೆಂಗಳೂರು, ಕೊಪ್ಪಳ, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ ಮಾರ್ಗವಾಗಿ ಬಸ್ ಪ್ರಯಾಣ ಬೆಳೆಸಿದವು.
ಈ ವೇಳೆ 10 ವರ್ಷದ ಒಳಗಿನ ಹಾಗೂ ಹಿರಿಯ ನಾಗರಿಕರೊಂದಿಗೆ ಕೆಲವರು ಸಾರಿಗೆ ಬಸ್ ನಲ್ಲೇ ಪ್ರಯಾಣ ಬೆಳೆಸಿದರು. 10 ಗಂಟೆ ವೇಳೆಗೆ ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಿಭಾಗೀಯ ಸಾರಿಗೆ ನಿಯಂತ್ರಣ ಅಧಿಕಾರಿ ಎಫ್.ಸಿ.ಹಿರೇಮಠ ಅವರು, ಚಿಕ್ಕ ಮಕ್ಕಳು ಹಾಗೂ ಹಿರಿಯ ನಾಗರಿಕರನ್ನು ಕರೆದೊಯ್ಯದಂತೆ ಬಸ್ ನಿರ್ವಾಹಕರಿಗೆ ಸೂಚಿಸಿದರು.
ಆ ನಂತರ ಪುಟ್ಟ ಮಕ್ಕಳೊಂದಿಗೆ ಬಂದಿದ್ದ ಪ್ರಯಾಣಿಕರು ಪರದಾಡುವಂತಾಯಿತು.