Advertisement

ಕೆಆರ್‌ಎಸ್‌ ನೀರಿನ ಮಟ್ಟ ತೃಪ್ತಿದಾಯಕ

06:40 AM May 02, 2019 | Lakshmi GovindaRaj |

ಬಿರು ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿಗಾಗಿ ರಾಜ್ಯದ ಎಲ್ಲೆಡೆ ಹಾಹಾಕಾರ ಕೇಳಿ ಬರುತ್ತಿದೆ. ಭುವಿಗೆ ಸುರಿಯುವ ಮಳೆಯನ್ನು ತನ್ನ ಒಡಲಾಳದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ರಾಜ್ಯದ ಅಣೆಕಟ್ಟುಗಳೇ ಬೇಸಿಗೆಯ ಈ ದಿನಗಳಲ್ಲಿ ಜನರಿಗೆ ಕುಡಿಯುವ ನೀರಿನ ಮೂಲ ಆಸರೆ. ಜನರ ಪಾಲಿಗೆ ಆಪದ್ಭಾಂಧವ ಎನಿಸಿರುವ ರಾಜ್ಯದ ಜಲಾಶಯಗಳಲ್ಲಿನ ಇಂದಿನ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲುವ “ಉದಯವಾಣಿ’ಯ ಯತ್ನವಿದು.

Advertisement

ಮಂಡ್ಯ: ಜಿಲ್ಲೆಯ ರೈತರ ಬದುಕಿನ ಆಶಾಕಿರಣ, ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ತೃಪ್ತಿದಾಯಕವಾಗಿದೆ. 5 ಜಿಲ್ಲೆಗಳಿಗೆ ಅವಶ್ಯವಿರುವ ಕುಡಿಯುವ ನೀರಿನ ಹೊರತಾಗಿಯೂ ರೈತರು ಬೆಳೆದಿರುವ ಬೇಸಿಗೆ ಬೆಳೆಗಳಿಗೆ ಕೊಡುವಷ್ಟು ನೀರು, ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 87.22 ಅಡಿಗೆ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಬೇಸಿಗೆಯಲ್ಲಿ 14.35 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. 147 ಕ್ಯುಸೆಕ್‌ ಒಳಹರಿವಿದ್ದರೆ, 3,666 ಕ್ಯುಸೆಕ್‌ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿದೆ. 14.347 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 2018ರ ಏಪ್ರಿಲ್‌ನಲ್ಲಿ ಜಲಾಶಯದಲ್ಲಿ 72.87 ಅಡಿ ನೀರಿತ್ತು.

ಕೆಆರ್‌ಎಸ್‌ 2014 ರಿಂದ 2017ವರೆಗೆ ಭರ್ತಿ ಭಾಗ್ಯವನ್ನೇ ಕಾಣದೆ ಬರಡಾಗಿತ್ತು. ಸತತ 4 ವರ್ಷಗಳ ಬರಗಾಲದ ಬಳಿಕ 2018ರಲ್ಲಿ ಉತ್ತಮ ವರ್ಷಧಾರೆಯಾಗಿ, ಜೂ.17ರ ವೇಳೆಗೆ 100 ಅಡಿ ನೀರು ದಾಖಲಾಗಿತ್ತು. ಜುಲೈ ಮಧ್ಯಭಾಗದ ವೇಳೆಗೆ ಜಲಾಶಯ ಭರ್ತಿಯಾಗಿತ್ತು. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ತಮಿಳುನಾಡಿಗೆ ಸುಮಾರು 250 ಟಿಎಂಸಿಗೂ ಅಧಿಕ ನೀರು ಹರಿದು ಕಾವೇರಿ ವಿವಾದ ಭುಗಿಲೇಳದಂತೆ ಮಾಡಿತ್ತು.

ಕುಡಿವ ನೀರಿಗೆ ತೊಂದರೆ ಇಲ್ಲ: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಗಮನಿಸಿದರೆ ಈ ಬೇಸಿಗೆಯಲ್ಲಿ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರ ಪ್ರದೇಶಗಳಿಗೆ ಕುಡಿಯಲು ಸಾಕಾಗುವಷ್ಟು ನೀರು ಜಲಾಶಯದಲ್ಲಿದೆ. ಅಣೆಕಟ್ಟೆಯಿಂದ 1389 ಕ್ಯುಸೆಕ್‌ ನೀರನ್ನು ಈಗಾಗಲೇ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಏ.21ರಿಂದ ಮೇ ತಿಂಗಳ 8ರವರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

Advertisement

ಕೆಆರ್‌ಎಸ್‌ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ಮುಖ್ಯ ನಾಲೆ ಮತ್ತು ಅದರ ಉಪ ನಾಲೆಗಳು (ಸಂಪರ್ಕ ನಾಲೆ ಹೊರತುಪಡಿಸಿ), ಎಡದಂಡೆ ಕೆಳಮಟ್ಟದ ನಾಲೆ, ಕಾವೇರಿ ಶಾಖಾ ನಾಲೆ, ಹಳೆ ಮದ್ದೂರು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ, ಕೌಡ್ಲೆ ಉಪ ನಾಲೆ, (9ನೇ ವಿತರಣಾ ನಾಲೆವರೆಗೆ), ಕೆರಗೋಡು ಶಾಖಾ ನಾಲೆ (21ನೇ ವಿತರಣಾ ನಾಲೆವರೆಗೆ),

ಹೊಸ ಮದ್ದೂರು ಶಾಖೆ ನಾಲೆ (31ನೇ ವಿತರಣಾ ನಾಲೆವರೆಗೆ), ಲೋಕಸರ ಶಾಖಾ ನಾಲೆ, ಹೆಬ್ಬಕವಾಡಿ ಹಾಗೂ ತುರುಗನೂರು ಶಾಖಾ ನಾಲೆ (5ನೇ ವಿತರಣಾ ನಾಲೆವರೆಗೆ) ಎಂದು ಕೃಷ್ಣರಾಜ ಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ಮಂಡ್ಯ ವೃತ್ತದ (ಪ್ರಭಾರ) ಅಧೀಕ್ಷಕ ಎಂಜಿನಿಯರ್‌ ಬಿ.ಎನ್‌.ರಾಮಕೃಷ್ಣ ತಿಳಿಸಿದ್ದಾರೆ.

ಜಿಲ್ಲೆಯ 1310 ಹೆಕ್ಟೇರ್‌ನಲ್ಲಿ ಭತ್ತ, 333 ಹೆಕ್ಟೇರ್‌ನಲ್ಲಿ ರಾಗಿ, 128 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 67 ಹೆಕ್ಟೇರ್‌ನಲ್ಲಿ ಉದ್ದು, 67 ಹೆಕ್ಟೇರ್‌ನಲ್ಲಿ ನೆಲಗಡಲೆ, 150 ಹೆಕ್ಟೇರ್‌ನಲ್ಲಿ ಕಬ್ಬು (ತನಿ), 661 ಹೆಕ್ಟರ್‌ನಲ್ಲಿ ಕಬ್ಬು (ಕೂಳೆ) ಸೇರಿ 2717 ಹೆಕ್ಟೇರ್‌ನಲ್ಲಿ ಬೇಸಿಗೆ ಬೆಳೆ ಬೆಳೆಯಲಾಗಿದೆ. ಈ ಬೆಳೆಗಳ ರಕ್ಷಣೆಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.

ಜಲಾಶಯ ಮಟ್ಟ (1.5.2019)
-ಇಂದಿನಮಟ್ಟ (ಅಡಿಗಳಲ್ಲಿ) – ಒಳ ಹರಿವು (ಕ್ಯೂಸೆಕ್‌) – ಹೊರ ಹರಿವು(ಕ್ಯೂಸೆಕ್‌)
-87.22 – 147 – 3,666

ಜಲಾಶಯದಲ್ಲಿ ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದು. ಕಳೆದ ವರ್ಷಕ್ಕಿಂತಲೂ 14 ಅಡಿ ನೀರು ಹೆಚ್ಚಿದೆ. ಬೇಸಿಗೆ ಬೆಳೆಗಳಿಗೂ ನೀರು ಹರಿಸಲಾಗುತ್ತಿದೆ. ಹವಾಮಾನ ಇಲಾಖೆ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜಲಾಶಯ ಶೀಘ್ರ ತುಂಬುವ ನಿರೀಕ್ಷೆ ಇದೆ.
-ರಾಮಕೃಷ್ಣ, ಅಧೀಕ್ಷಕರು, ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ಮಂಡ್ಯ ವೃತ್ತ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next