Advertisement

ಕೆಆರ್‌ಎಸ್‌, ಕಬಿನಿ ಕುಡಿಯಲು ಫ‌ಸ್ಟ್‌, ಕೃಷಿಗೆ ನೆಕ್ಸ್ಟ್

11:43 AM Jul 30, 2017 | Team Udayavani |

ಮೈಸೂರು: ನಾನೂ ಕೂಡ ರೈತ. ಈ ವರ್ಷವೂ ಮಳೆ ಇಲ್ಲದ್ದರಿಂದ ಜಲಾಶಯಗಳಲ್ಲಿ ನೀರಿಲ್ಲ. ಕಾವೇರಿ ಕಣಿವೆಯ ಕೆಆರ್‌ಎಸ್‌, ಕಬಿನಿ, ಹೇಮಾವತಿ ಜಲಾಶಯಗಳು ಶೇ.50ರಷ್ಟು ತುಂಬಿಲ್ಲ. ಪರಿಸ್ಥಿತಿ ಹೀಗಿರುವಾಗ ಕುಡಿಯಲು ಅಗತ್ಯವಾದ ನೀರು ಕಾಯ್ದಿಟ್ಟುಕೊಳ್ಳಬೇಕಾಗಿದೆ.

Advertisement

ಆ ನಂತರ ವ್ಯವಸಾಯ, ಕೆರೆ ತುಂಬಿಸಲು ಆದ್ಯತೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶನಿವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜಕೀಯ ಬೇಡ: ನಾಲೆಗಳಿಗೆ ನೀರು ಬಿಡುವಂತೆ ಜೆಡಿಎಸ್‌ನವರು ಪ್ರತಿಭಟನೆ ಮಾಡುತ್ತಾರೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದವರು ಇಂತದ್ದನ್ನೆಲ್ಲ ತಿಳಿದುಕೊಂಡು ಮಾತನಾಡಬೇಕು. ಈ ವಿಷಯದಲ್ಲಿ ರಾಜಕೀಯ ಮಾಡಬಾರದು. ನ್ಯಾಯಾಧಿಕರಣದ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿಯಿಂದ ಸಮಾಜ ಒಡೆಯುವ ಕಾರ್ಯ: ಬಿಜೆಪಿಯವರದು ಸಮಾಜ ಒಡೆಯುವ ಕೆಲಸ. ನಮ್ಮದು ಸಮಾಜವನ್ನು ಕಟ್ಟುವ ಕೆಲಸ, ಆದರೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಅವರು ಮಾಡುವುದನ್ನು ನಮ್ಮ ಮೇಲೆ ಹೇಳುತ್ತಾ ಹೊರಟಿದ್ದಾರೆ ಎಂದು ದೂಷಿಸಿದರು.

ಪ್ರತ್ಯೇಕ ಧರ್ಮಕ್ಕೆ ಸಚಿವರ ಪ್ರವಾಸ: ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮವಾಗಲಿ ಎಂದು ನಾವು ಹೇಳಿಲ್ಲ. ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ಮಾತೆ ಮಹಾದೇವಿ ಅವರು ಪ್ರತ್ಯೇಕ ಧರ್ಮ ಮಾನ್ಯತೆ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರಿಂದ ಎಲ್ಲರೂ ಒಟ್ಟಾಗಿ ಬನ್ನಿ ಎಂದು ಹೇಳಿದ್ದೇನಷ್ಟೆ, ಈ ಸಂಬಂಧ ಸಚಿವರ ಸಮಿತಿಯನ್ನೂ ಮಾಡಿಲ್ಲ.

Advertisement

ಅವರೇ ಪ್ರವಾಸ ಹೊರಟಿದ್ದಾರೆ. ಲಿಂಗಾಯಿತ ಪ್ರತ್ಯೇಕ ಧರ್ಮವಾಗಲಿ ಎಂದು ಹಿಂದೆ ಬಿ.ಎಸ್‌.ಯಡಿಯೂರಪ್ಪ ಕೂಡ ಅಖೀಲ ಭಾರತ ವೀರಶೈವ ಮಹಾಸಭಾದ ಮನವಿಗೆ ಸಹಿಹಾಕಿದ್ದಾರೆ. ಈಗ ಪ್ರತ್ಯೇಕ ಧರ್ಮವಾದರೆ ಅವರೆಲ್ಲ ಸನಾತನ ಧರ್ಮದಿಂದ ಹೊರಹೋಗುತ್ತಾರೆ ಎಂಬ ಭಯದಿಂದ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ವರದಿ ಕೇಳಿಲ್ಲ: ಮಂಗಳೂರು ಗಲಭೆ ಸಂಬಂಧ ಕೇಂದ್ರಸರ್ಕಾರ ಯಾವುದೇ ವರದಿ ಕೇಳಿಲ್ಲ. ಅಷ್ಟಕ್ಕೂ ವರದಿಕೇಳಲು ಏನಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಮಾಹಿತಿ ಇಲ್ಲ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲ ಭೀತಿಯಿಂದ ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತ.ನಾಡಿನಲ್ಲಿಲ್ಲದ ತ್ರಿಭಾಷೆ ನಮ್ಮಲ್ಲೇಕೆ?
ಮೈಸೂರು:
ತಮಿಳುನಾಡಿನಲ್ಲಿ ಇಂಗ್ಲಿಷ್‌ ಮತ್ತು ತಮಿಳು ಭಾಷೆಗೆ ಮಾತ್ರ ಅವಕಾಶವಿದೆ. ಕರ್ನಾಟಕದಲ್ಲಿ ಮಾತ್ರ ತ್ರಿಭಾಷಾ ಸೂತ್ರ ಏಕೆ ಅನುಸರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರಬರೆದಿರುವುದಾಗಿ ಅವರು ತಿಳಿಸಿದರು.

ಪ್ರಧಾನಿ ಮೋದಿ ಮಧ್ಯಪ್ರವೇಶದಿಂದ ಮಾತ್ರ ಮಹಾದಾಯಿ ವಿವಾದ ನ್ಯಾಯಾಲಯದ ಹೊರಗೆ ಬಗೆಹರಿಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಮನೆಯ ಯಜಮಾನರಾಗಿರುವ ಪ್ರಧಾನಮಂತ್ರಿಯವರು ಎಲ್ಲಾ ರಾಜ್ಯಗಳನ್ನು ಕರೆದು ಮಾತನಾಡಿ ಒಪ್ಪಿಸಬೇಕು. ಹಿಂದೆ ಇಂದಿರಾ ಗಾಂಧಿಯವರು ಮಾತುಕತೆಯ ಮೂಲಕ ತೆಲಗು ಗಂಗಾ ಯೋಜನೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.

ಮಹಾದಾಯಿ ವಿಚಾರ ಕುರಿತು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದರೆ, ಅಲ್ಲಿನ ನೀರಾವರಿ ಸಚಿವರು ಉತ್ತರ ಬರೆಯುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಬರೆದ ಪತ್ರಕ್ಕೆ ಆ ರಾಜ್ಯದ ಮುಖ್ಯಮಂತ್ರಿಯೇ ಉತ್ತರ ಬರೆಯುವುದು ಸೌಜನ್ಯ. ಆದರೆ, ಗೋವಾ ಸರ್ಕಾರ ಈ ವಿಚಾರದಲ್ಲಿ ಉದ್ಧಟತನ ತೋರಿದೆ ಎಂದರು.

ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದಾಗಿ ನ್ಯಾಯಮಂಡಳಿ ಮುಂದೆ ಒಪ್ಪಿಕೊಂಡು ಬಂದ ಗೋವಾ ಸರ್ಕಾರ, ಈಗ ಕ್ಯಾತೆ ತೆಗೆಯುತ್ತಿದೆ. ಹೀಗಾಗಿ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿದರೆ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ. ಕರ್ನಾಟಕದಲ್ಲಿ ಬಿಜೆಪಿಯ 17 ಜನ ಸಂಸದರಿದ್ದಾರೆ.

ಅವರೆಲ್ಲ ಪ್ರಧಾನಮಂತ್ರಿ, ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿಯವರ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಬೇಕು. ಪ್ರಧಾನಿಯವರ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ದಾಗ ಬಿಜೆಪಿ ಸಂಸದರು ಬಾಯಿ ಬಿಡುವುದಿಲ್ಲ. ಇಲ್ಲಿ ಬಂದು ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ ಎನ್ನುತ್ತಾರೆ ಎಂದರೆ ಬಿಜೆಪಿಯವರಿಗೆ ರಾಜ್ಯದ ಹಿತ ಬೇಕಿಲ್ವಾ? ಅವರು ಭಾಷಣ ಮಾಡಲು ಮಾತ್ರ ಇದ್ದಾರಾ ಎಂದು ಕಿಡಿಕಾರಿದರು.

ಹೊಸ ಮಾರ್ಗಸೂಚಿಯ ಪ್ರಕಾರ ಶೇ.50ರಷ್ಟು ಬೆಳೆಹಾನಿಯಾಗಿದ್ದರೆ ಮಾತ್ರ ಪರಿಹಾರ ನೀಡಲು ಸಾಧ್ಯ. ಕಳೆದ ವರ್ಷ ಹಿಂಗಾರು ಬೆಳೆ ಹಾನಿಯ ಪರಿಣಾಮ ರಾಜ್ಯದ 160 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲಾಗಿತ್ತು. ಹೊಸ ಮಾರ್ಗಸೂಚಿ ಅನುಸರಿಸಿದರೆ 20 ತಾಲೂಕುಗಳನ್ನು ಕೂಡ ಬರ ಘೋಷಣೆ ಮಾಡಲಾಗಲ್ಲ, ಹೀಗಾಗಿ ಹಳೆ ಮಾರ್ಗಸೂಚಿಯನ್ನೇ ಮುಂದುವರೆಸಿ ಎಂದು ಪತ್ರ ಬರೆದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next