ಮಂಡ್ಯ: ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಹೇಳಿಕೆಯಿಂದಲೇ ಸಾಕಷ್ಟು ವಿವಾದ ಸೃಷ್ಟಿಯಾಗಿ ಡ್ಯಾಂನ ಬಳಿಯ ಸುರಕ್ಷತೆ ಗೋಡೆಯ ಕಲ್ಲು ಕುಸಿತಗೊಂಡಿತ್ತು. ಇದರಿಂದ ಡ್ಯಾಂಗೆ ವಕ್ರ ದೃಷ್ಟಿ ಬಿದ್ದಿರುವ ಬಗ್ಗೆ ಆರೋಪಿಸಿ ಶ್ರೀರಂಗಪಟ್ಟಣ ಶಾಸಕ ರವೀಂದ್ರಶ್ರೀಕಂಠಯ್ಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಜಲಾಶಯಕ್ಕೆ ದೃಷ್ಟಿದೋಷ ಪೂಜೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಜು.26ರ ಸೋಮವಾರ ಬೆಳಿಗ್ಗೆ 9ಕ್ಕೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಜಲಾಶಯದ ಮಧ್ಯ ಭಾಗದ ಬೃಂದಾವನದಲ್ಲಿರುವ ಕಾವೇರಿ ಪ್ರತಿಮೆಗೆ ಅಭಿಷೇಕ, ದೃಷ್ಟಿದೋಷ ನಿವಾರಣೆ ಹಾಗೂ ಶಾಂತಿ ಪೂಜೆ ನಡೆಯಲಿದೆ.
ಸಂಸದೆ ಸುಮಲತಾಅಂಬರೀಷ್, ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೆ, ಸುಮಲತಾ ಹಾಗೂ ದಳಪತಿಗಳ ನಡುವಿನ ಮತ್ತೊಂದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು.
ಇದರ ನಡುವೆ ಶಾಸಕ ರವೀಂದ್ರಶ್ರೀಕಂಠಯ್ಯ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಲಾಶಯಕ್ಕೆ ವಕ್ರದೃಷ್ಟಿ ಬೀರಿದೆ.
ಇದನ್ನೂ ಓದಿ :“ಬರೋದಾದ್ರೆ ಏಳು ಗಂಟೆ ಒಳಗೆ ಬನ್ನಿ”: ಚಾರ್ಮಾಡಿ ಘಾಟಿಯಲ್ಲಿ ಸಂಚಾರ ದುಸ್ತರ
ಶೀಘ್ರದಲ್ಲಿಯೇ ದೃಷ್ಟಿದೋಷ ನಿವಾರಣೆ ಪೂಜೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸುಮಲತಾ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ಜಲಾಶಯದ ಬೃಂದಾವನಕ್ಕೆ ಹೋಗುವ ರಸ್ತೆ ಸುರಕ್ಷತೆಯ ಗೋಡೆಯ ಕಲ್ಲುಗಳು ಕುಸಿತ ಕಂಡಿತ್ತು. ಇದರಿಂದ ಸಾಕಷ್ಟು ಆತಂಕ ಎದುರಾಗಿತ್ತು.
ಸೋಮವಾರ ನಡೆಯಲಿರುವ ದೃಷ್ಟಿ ದೋಷ ಪೂಜೆಯಲ್ಲಿ ಜಿಲ್ಲೆಯ ಎಲ್ಲ ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.