Advertisement

ಭಕ್ತಿ, ಜ್ಞಾನ, ಮುಕ್ತಿ ಪರ್ಯಾಯ ಪೂಜೆಯ ಸಂದೇಶ; ನಿರ್ಗಮನ ಅದಮಾರು ಶ್ರೀಗಳು

01:29 AM Jan 19, 2022 | Team Udayavani |

ಉಡುಪಿ: ನಮ್ಮೆಲ್ಲರನ್ನು ರಕ್ಷಿಸುವ ಭಗವಂತ ಸರ್ವೋತ್ತಮನಾಗಿದ್ದಾನೆ ಎಂಬ ಪ್ರೀತಿ ಇರಬೇಕು. ಪೂಜೆ, ಸೇವೆಯ ತುಡಿತದ ಜತೆ ಭಕ್ತರ ಸೇವೆಯೂ ಭಗವಂತನ ಸೇವೆ ಯಾಗಿದೆ. ಶಾಶ್ವತನಾದ ಭಗವಂತನ ಮೇಲಿನ ಪ್ರೀತಿ ಮತ್ತು ಹೊರ ಜಗತ್ತಿನಲ್ಲಿ ತೋರಿಸುವ ಅಶಾಶ್ವತ ಪ್ರೀತಿ (ಒಂದು ದಿನ ಇಲ್ಲವಾಗುವಂಥದ್ದು) ಇವೆರಡರ ವ್ಯತ್ಯಾಸವನ್ನು ಆಚಾರ್ಯ ಮಧ್ವರು ಜಗತ್ತಿಗೆ ಕೊಡಬಯಸಿದರು. ಭಗವದ್ಭಕ್ತಿ, ಜ್ಞಾನಸಂಪತ್ತು, ಮುಕ್ತಿ ಹೊಂದುವ ಮಾರ್ಗ ಇದುವೇ ಪರ್ಯಾಯ ಕ್ರಮದ ಸಂದೇಶ ಎಂದು ನಿರ್ಗಮನ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.

Advertisement

ಮಂಗಳವಾರ ಬೆಳಗ್ಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಅವರು ಸಂದೇಶ ನೀಡಿದರು.

ತ್ಯಾಗ ಮಾಡಿದ ಜೀವನವೇ ಶ್ರೇಷ್ಠ.ಪೇಜಾವರ ಶ್ರೀಗಳು ಇಂತಹ ಜೀವನ ನಡೆಸಿದ ಮಹಾನುಭಾವರು. ಸಂಪ್ರದಾಯದ ಚೌಕಟ್ಟಿನಲ್ಲಿರುವ ಕೃಷ್ಣಾಪುರ ಶ್ರೀಗಳ ಸಾಧನೆ ಕಣ್ಣಿಗೆ ಕಾಣ ಸಿಗದು. ಇಂತಹ ಶ್ರೀಗಳಿಗೆ ಆಚಾರ್ಯರ ಕಾಲದ ಅಕ್ಷಯ ಪಾತ್ರೆ ಯನ್ನು ಕೊಡುವ ಭಾಗ್ಯವನ್ನು ನಮ್ಮ ಗುರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನನಗೆ ಕೊಟ್ಟರು ಎಂದು ಶ್ರೀ ಈಶಪ್ರಿಯತೀರ್ಥರು ಹೇಳಿದರು.

ಭಗವಂತ ಕರ್ಮಕ್ಕೆ ಸರಿಯಾದ ಫ‌ಲ ಕೊಡುತ್ತಾನೆ. ಸಾರ್ಥಕ ಬದುಕು ನಡೆಸಿದ ಕೃಷ್ಣಾಪುರ ಶ್ರೀಗಳಿಗೆ ಭಗವಂತನ ಅನುಗ್ರಹದಿಂದ ಕೃಷ್ಣಪೂಜೆಯ ಅವಕಾಶ ದೊರಕಿದೆ ಎಂದು ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ನುಡಿದರು.

ಶೀರೂರು ಶ್ರೀಗಳಿಗೆ
ಮೊದಲ ದರ್ಬಾರ್‌
ಶೀರೂರು ಮಠದ ಯುವ ಯತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಇದೇ ಮೊದಲ ಬಾರಿ ಪರ್ಯಾಯ ದರ್ಬಾರ್‌ ಸಭೆ ಅಲಂಕರಿಸಿದರು. ನಂದಗೋಕುಲದಲ್ಲಿ ನೀರನ್ನು ವಿಷಪೂರಿತ ಮಾಡಿದ್ದ ಕಾಲೀಯನನ್ನು ಮರ್ದನ ಮಾಡಿದ ಶ್ರೀಕೃಷ್ಣನ ರೂಪ ಕೃಷ್ಣಾಪುರ ಮಠದ ಪಟ್ಟದ ದೇವರು.

Advertisement

ಇದು ದ್ವಿಭುಜ ಕಾಲೀಯಮರ್ದನ ನಾದರೆ, ನಿರ್ಗಮನ ಅದಮಾರು ಮಠದ ಪಟ್ಟದ ದೇವರು ಚತುಭುìಜ ಕಾಲೀಯಮರ್ದನ. ಕಾಮಕ್ರೋಧಾದಿಗಳನ್ನು ಮರ್ದಿಸುವ ಎಂಬರ್ಥವನ್ನೂ ವಾದಿರಾಜರು ರುಗ್ಮಿಣೀಶ ವಿಜಯದಲ್ಲಿ ಸಾರಿದ್ದಾರೆ. ತಪಸ್ವೀ ಶ್ರೀ ವಿದ್ಯಾಸಾಗರತೀರ್ಥ ರಿಂದ ಅರ್ಚಿತನಾಗಿ ಭಗವಂತನ ಅನುಗ್ರಹ ದೊರಕುವಂತಾಗಬೇಕು ಎಂದು ಹಾರೈಸಿದರು.

ಒಳಗೆ ಪೂಜೆ, ಹೊರಗೆ ದರ್ಶನ!
ಒಳಗೆ ನಿರ್ಮಾಲ್ಯ ವಿಸರ್ಜನೆ ಪೂಜೆಯನ್ನು ಐಕ್ಯಮತ್ಯ ಸೂಕ್ತ ಪಠನಪೂರ್ವಕ ನಿರ್ಗಮನ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಡೆಸುತ್ತಿದ್ದರೆ ಪರ್ಯಾಯ ಮೆರವಣಿಗೆಯಲ್ಲಿ ಬಂದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೊರಗೆ ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದರು.

ಮೊಬೈಲ್‌ ಬಳಸದ ಕೃಷ್ಣಾಪುರ ಶ್ರೀಗಳು
“ನಾಹಂ ಕರ್ತಾ ಹರಿಃ ಕರ್ತಾ.. ಎಂಬ ಮಾತಿನಂತೆ ನಮ್ಮಿಂದ ಭಗವಂತ ಎಲ್ಲ ಕೆಲಸಗಳನ್ನು ಮಾಡಿಸಿ ನಮಗೆ ಕೀರ್ತಿಯನ್ನು ಕೊಡುತ್ತಿದ್ದಾನೆ. ತಾಯಿಗೆ ಅಧೀನವಾದ ಮಗು ಅಕ್ಷರ ಬರೆದರೆ ತಾಯಿ ಸಂತೋಷಪಡುವಂತೆ ಭಗವಂತನ ಮಕ್ಕಳಾದ ನಮ್ಮಿಂದ ಕೆಲಸ ಮಾಡಿಸಿ ಭಗವಂತ ಸಂತೋಷ ಪಡುತ್ತಾನೆ. ನಮ್ಮೊಳಗಿದ್ದು ಮಾಡಿಸುತ್ತಿದ್ದಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಪರ್ಯಾಯ ಪೂಜಾ ಹಸ್ತಾಂತರದಲ್ಲಿ ತ್ಯಾಗ ಮತ್ತು ಸ್ವೀಕಾರದ ಪ್ರತೀಕಗಳಿವೆ. ಇದಾವುದೂ ನಮ್ಮ ಸಂಪತ್ತಲ್ಲ, ಕೃಷ್ಣನ ಸಂಪತ್ತು. ಖರ್ಚು ಮಾಡುವ ಅಧಿಕಾರವೂ ನಮ್ಮದಲ್ಲ. ವ್ಯರ್ಥವಾಗಿ ಯಾವುದನ್ನೂ ಮಾಡಬಾರದು ಎಂಬುದನ್ನು ಕೃಷ್ಣಾಪುರ ಶ್ರೀಗಳು ತೋರಿಸಿಕೊಡುತ್ತಿದ್ದಾರೆ. ಮೊಬೈಲ್‌ ದೂರವಾಣಿ ಇಲ್ಲದೆ ಬದುಕಿಲ್ಲ ಎಂಬ ಈ ಕಾಲಘಟ್ಟದಲ್ಲಿ ಮೊಬೈಲ್‌ ಬಳಸದೆ ಬದುಕಬಹುದು ಎಂಬುದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಎಂದು ಕಾಣಿಯೂರು ಶ್ರೀಗಳು ಹೇಳಿದರು.

“ಕೃಷ್ಣನ ಗುಣ ಪೀಠಾಧಿಪತಿಗಳಲ್ಲಿ ಸಂಕ್ರಾಂತ’
ಕಂಸನನ್ನು ಸಂಹರಿಸಿದಾಗ ಉಗ್ರಸೇನನನ್ನು ರಾಜನನ್ನಾಗಿ ಮಾಡಿದ ಕೃಷ್ಣ, ನರಕಾಸುರನ ಬಳಿಕ ಮಗ ಭಗದತ್ತನನ್ನು, ಜರಾಸಂಧನ ಬಳಿಕ ಮಗ ಸಹದೇವನನ್ನು ಅಧಿಕಾರದಲ್ಲಿ ಕುಳ್ಳಿರಿಸಿದ. ಕೃಷ್ಣನ ಈ ಗುಣ ಪೀಠಾಧಿಪತಿಗಳಲ್ಲಿ ಸಂಕ್ರಾಂತವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಸಮಾಜದಲ್ಲಿ ಈಗ ಗೊಂದಲ ತೋರಿಬರುತ್ತಿದೆ. ಕಂಡದ್ದೆಲ್ಲ ಬೇಕು ಎಂಬುದು ಜರಾಸಂಧನ ಸಂಸ್ಕೃತಿ. ಕೃಷ್ಣನ ಸಂಸ್ಕೃತಿ ಇದಲ್ಲ. ಯಾರಿಗೆ ಸುಖ ಶಾಂತಿ ಬೇಕೋ ಅವರೆಲ್ಲ ಕೃಷ್ಣನ ಆರಾಧನೆ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಪ್ರೀತಿಯ ಅಧಿಕಾರ ಹಸ್ತಾಂತರ: ಪಲಿಮಾರು ಶ್ರೀ
ಸರ್ವೋತ್ತಮನಾದ ಶ್ರೀಕೃಷ್ಣ, ವಾಯುಜೀವೋತ್ತಮನ ನಾಡಿನಲ್ಲಿ ಪರ್ಯಾಯ ವೈಭವ ಹೇಳತೀರದು. ಪೂಜೆಯನ್ನು ಅಧಿಕಾರವನ್ನು ಪ್ರೀತಿಯಿಂದ ಕೊಡುವುದು ಇಲ್ಲಿನ ವೈಶಿಷ್ಟé. ಅಧಿಕಾರ ಹಸ್ತಾಂತರ ಮಾಡುವ ವೈಭವ ಬೇರೆಲ್ಲೂ ಕಾಣದು. ಒಬ್ಬರು ತ್ಯಾಗಿ ಇನ್ನೊಬ್ಬರು ತ್ಯಾಗಿಗೆ ಬಿಟ್ಟುಕೊಡುತ್ತಾರೆ. ಕೃಷ್ಣಾ ಎಂದರೆ ದ್ರೌಪದಿ. ಕಷ್ಟದಲ್ಲಿದ್ದ ದ್ರೌಪದಿ ಕೃಷ್ಣನನ್ನು ನೆನೆದಾಗ ಅಕ್ಷಯಾಂಬರವನ್ನು ನೀಡಿ ಅನುಗ್ರಹಿಸಿದ. ಹೀಗೆ ಇದು ಕೃಷ್ಣನಪುರವೂ, ಕೃಷ್ಣಾಪುರದ ಪರ್ಯಾಯವೂ ಆಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ವರ್ಣಿಸಿದರು.

ಮಂಥಪಾಶಧರನ ವೈಶಿಷ್ಟ್ಯ: ಸೋದೆಶ್ರೀ
ತಿರುಪತಿ, ಕಂಚಿ ಮೊದಲಾದೆಡೆ ಇರುವ ವಿಗ್ರಹದಲ್ಲಿ ಭಗವಂತ ಶಂಖಚಕ್ರ, ಗದಾಪದ್ಮ ಧಾರಿಯಾಗಿದ್ದರೆ ಉಡುಪಿ ಕೃಷ್ಣ ಮಾತ್ರ ಮಂಥಪಾಶ ಧಾರಿಯಾಗಿ ದ್ದಾನೆ. ಇದು ಸಾಧಕರ ಅನುಕೂಲಕ್ಕಾಗಿ. ಪ್ರಪಂಚ ಇಂದು ಕೊರೊನಾದಿಂದ ತತ್ತರಿಸಿರುವಾಗ ಹುಳಿ ಮೊಸರಿನಿಂದ ಬೆಣ್ಣೆ ಕೊಡುವಂತೆ ಮಂಥಪಾಶಧರನ ಅನುಗ್ರಹವಾಗಲಿ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು. ಕೃಷ್ಣನಲ್ಲಿ ಸುದರ್ಶನಚಕ್ರವಿದ್ದು ದುಷ್ಟರನ್ನು ಶಿಕ್ಷಿಸಿ ದರೂ ಸ್ವಯಂ ಭಗವಂತನಿಗೆ ಎಷ್ಟು ಶಕ್ತಿ ಇರಲಿಕ್ಕಿಲ್ಲ? ಸಂಸಾರವು ಉಗ್ರ ಸಮುದ್ರವಿದ್ದಂತೆ. ಇದನ್ನು ಮಥನ ಮಾಡಿ ಭಕ್ತರಿಗೆ ಬೆಣ್ಣೆ ಕೊಡಲು ಸಿದ್ಧನಿದ್ದೇನೆ ಎಂಬರ್ಥವೂ ಇದೆ ಎಂದರು. ಪ್ರಪಂಚದ ಅಧಿಕಾರ ಸ್ವಾರ್ಥಕ್ಕಾಗಿದ್ದರೆ ಇಲ್ಲಿ ತ್ಯಾಗಕ್ಕಾಗಿದೆ. ಒಬ್ಬ ವ್ಯಕ್ತಿಗೆ ಅಧಿಕಾರ ಸ್ಥಾನ ಮತ್ತೆ ಮತ್ತೆ ಸಿಗದು, ಇಲ್ಲಿ ಮತ್ತೆ ಅಧಿಕಾರ ಸಿಗುವುದು ಇನ್ನೊಂದು ವೈಶಿಷ್ಟ್ಯ. ಪ್ರಪಂಚದ ಅಧಿಕಾರದಲ್ಲಿ ಚುನಾವಣೆ ಇದ್ದರೆ, ಇಲ್ಲಿ ನೀತಿ ಸಂಯಮ, ತ್ಯಾಗವೇ ಮಾನದಂಡ ಎಂದು ಪರ್ಯಾಯ ಪೂಜೆಯ ಅಧಿಕಾರದ ಕುರಿತು ಬಣ್ಣಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next