Advertisement

ಕೃಷ್ಣಾಪುರ ಶ್ರೀಗಳ ಚತುರ್ಥ ಪರ್ಯಾಯ ಆರಂಭ

01:44 AM Jan 19, 2022 | Team Udayavani |

ಉಡುಪಿ: ಲೋಕದಲ್ಲಿ ಚಳಿ ಇದ್ದರೆ ಉಡುಪಿ ನಗರದಲ್ಲಿ ಪರ್ಯಾಯೋತ್ಸವವು ಚಳಿಯ ಬಾಧೆಯನ್ನು ದೂರೀಕರಿಸಿತು.

Advertisement

ಶ್ರೀಕೃಷ್ಣ ಮಠದಲ್ಲಿ 251ನೇ ದ್ವೈವಾರ್ಷಿಕ ಪರ್ಯಾಯ ಮತ್ತು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯ ಪೂಜೆ ಮಂಗಳವಾರ ಶುಭಾರಂಭಗೊಂಡಿತು.

ಪೀಠಾರೋಹಣಕ್ಕೆ ಮುನ್ನ ಮುಂಜಾವ ಕಾಪು ಬಳಿಯ ದಂಡತೀರ್ಥದಲ್ಲಿ ಸ್ನಾನ ಮಾಡಿ ಬಂದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಇತರ ಮಠಾಧೀಶರಿಗೆ ಗೌರವ ಸಲ್ಲಿಸಲಾಯಿತು.

ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಮಠಾಧೀಶರು ರಥಬೀದಿಯಲ್ಲಿ ಹಾಸಿದ ಶ್ವೇತವಸ್ತ್ರದ ಮೇಲೆ ನಡೆದು ಬಂದರು. ಮೊದಲು ಪರ್ಯಾಯ ಪೀಠವೇರುವ ಸ್ವಾಮಿಗಳು ಆಗಮಿಸಿದರೆ ಅವರ ಹಿಂದೆ ಆಶ್ರಮ ಜ್ಯೇಷ್ಠತೆಯಲ್ಲಿ ವಿವಿಧ ಸ್ವಾಮೀಜಿಯವರು ಸಾಗಿದರು. ಕನಕನ ಕಿಂಡಿಯ ಹೊರಗೆ ದೇವರ ದರ್ಶನ ಮಾಡಿ ಅಲ್ಲಿ ನವಗ್ರಹ ದಾನ ನೀಡಿದರು. ಅಲ್ಲಿಂದ ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಶ್ರೀಕೃಷ್ಣಮಠಕ್ಕೆ ಪ್ರವೇಶಿಸುವಾಗ ನಿರ್ಗಮನ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಗಮನ ಪೀಠಾಧೀಶರನ್ನು ಸ್ವಾಗತಿಸಿದರು.

ದೇವರ ದರ್ಶನದ ಬಳಿಕ ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಹಸ್ತಾಂತರಿಸಲಾಯಿತು. ಬೆಳಗ್ಗೆ 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣ ನೆರವೇರಿತು. ಬಡಗು ಮಾಳಿಗೆಯಲ್ಲಿ ಅರಳು ಗದ್ದಿಗೆಯಲ್ಲಿ ಗಂಧಾ ದ್ಯುಪಚಾರ, ಪಟ್ಟಕಾಣಿಕೆ ಸಮರ್ಪಣೆ ನಡೆ ಯಿತು. 6.20ಕ್ಕೆ ದರ್ಬಾರ್‌ ಸಭೆ ನಡೆಯಿತು.

Advertisement

ಬೆಳಗ್ಗೆ 10 ಗಂಟೆಗೆ ನೂತನ ಪೀಠಾಧೀಶರು ನಾಲ್ಕನೇ ಪರ್ಯಾಯ ಅವಧಿಯ ಮೊದಲ ದಿನದ ಮಹಾಪೂಜೆ ನಡೆಸಿದರು. ಬಳಿಕ ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.

ಅದಮಾರು ಶ್ರೀಗಳಿಂದ ಪೂಜೆ
ಅದಮಾರು ಕಿರಿಯ ಶ್ರೀಪಾದರು ಸೋಮವಾರ ರಾತ್ರಿಯಿಂದ ಸರ್ವಜ್ಞ ಪೀಠದಲ್ಲಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸಿದರು. ಪ್ರಾತಃಕಾಲ ಶ್ರೀಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನಡೆಸಿದರು. ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಹಕರಿಸಿದರು.

ಪರ್ಯಾಯ ದರ್ಬಾರ್‌ ಸಭೆ ಮುಗಿಸಿದ ಬಳಿಕ ಕೃಷ್ಣಾಪುರ ಶ್ರೀಪಾದರು ಚತುರ್ಥ ಪರ್ಯಾಯದ ಮೊದಲ ದಿನದ ಮಹಾಪೂಜೆ ನಡೆಸಿದರು. ಸಂಜೆ ಪರ್ಯಾಯ ಪೀಠಸ್ಥರೇ ನಡೆಸುವ ಇನ್ನೊಂದು ಪೂಜೆ ಚಾಮರಸೇವೆಯನ್ನು ನೆರವೇರಿಸಿದರು.

ಸರ್ವಜ್ಞ ಪೀಠಾರೋಹಣ
ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದ ರನ್ನು ಸರ್ವಜ್ಞ ಪೀಠದಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕುಳ್ಳಿರಿಸಿ ಶುಭ ಕೋರಿದರು. ಇದಾದ ಬಳಿಕ ಅರಳು ಗದ್ದಿಗೆ ದರ್ಬಾರ್‌ನಲ್ಲಿ ಮತ್ತು ಪರ್ಯಾಯ ದರ್ಬಾರ್‌ ಸಭೆಯಲ್ಲಿ ನೂತನ, ನಿರ್ಗಮನ ಪೀಠಾಧೀಶರಲ್ಲದೆ ಪಲಿಮಾರು ಹಿರಿಯ, ಕಿರಿಯ, ಪೇಜಾವರ, ಸೋದೆ, ಕಾಣಿಯೂರು, ಶೀರೂರು ಶ್ರೀಪಾದರು ಪಾಲ್ಗೊಂಡರು. ಸಂಜೆ ನಿರಂತರ ಧಾರ್ಮಿಕ ಪ್ರವಚನವನ್ನು ಕೃಷ್ಣಾಪುರ ಮತ್ತು ಕಾಣಿಯೂರು ಮಠಾಧೀಶರು ಉದ್ಘಾಟಿಸಿದರು. ಕಾಣಿಯೂರು ಮಠಾಧೀಶರು ಪ್ರಥಮ ದಿನದ ಉಪನ್ಯಾಸ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೂ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next