ಉಡುಪಿ : ಇದು ಐಟಿ ದಾಳಿಯೂ ಅಲ್ಲ, ಎಸಿಬಿ ದಾಳಿಯೂ ಅಲ್ಲ.ಬದಲಾಗಿ ಸ್ವಾಮೀಜಿಯೊಬ್ಬರು ಉಡುಪಿಯಲ್ಲಿ ದಾಳಿ ನಡೆಸಿ ಎಲ್ಲರಲ್ಲೂ ನಡುಕ ಹುಟ್ಟಿಸಿದ ಘಟನೆ ಶುಕ್ರವಾರ ಸಂಜೆ ನಡೆಯಿತು.
ಮಠಕ್ಕೆ ಸಲ್ಲಬೇಕಾದ ಬಾಡಿಗೆ ಹಣವನ್ನು ನೀಡದೆ ವಂಚಿಸುತ್ತಿದ್ದ ವ್ಯಾಪಾರಿಗಳ ವಿರುದ್ಧ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ಕಾರ್ಯಾಚರಣೆಗಿಳಿದು ಜೆಸಿಬಿ ಸಮೇತ ಬಂದು ಮಠದ ಪಾರ್ಕಿಂಗ್ ಪ್ರದೇಶದಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳನ್ನು ಧ್ವಂಸಗೈಯುವಂತೆ ಮಾಡಿದ್ದಾರೆ.
ಯಾತ್ರಿ ನಿವಾಸ ವಸತಿಗೃಹಕ್ಕೆ ತೆರಳಿದ ಶ್ರೀಗಳು ಅಲ್ಲಿದ್ದ ದಾಖಲೆ ಪುಸ್ತಕಗಳನ್ನುಪರಿಶೀಲಿಸಿ ಸಂಬಂಧ ಪಟ್ಟವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೃಷ್ಣ ಮಠದ ಸುತ್ತಮುತ್ತಲಿನ ಅಂಗಡಿ ಮತ್ತು ಪಾರ್ಕಿಂಗ್ ನಿಂದ ಬರುವ ಹಣವನ್ನು ಮಠಕ್ಕೆ ಸಂದಾಯ ಮಾಡಬೇಕು, ಆದರೆ ಇವರೆಲ್ಲಾ ಕಳೆದ ಕೆಲ ವರ್ಷಗಳಿಂದ ಹಣ ನೀಡದೆ ವಂಚಿಸುತ್ತಿದ್ದರು ಎಂದು ಕಿಡಿ ಕಾರಿದರು.
ನನಗೆ ಕೃಷ್ಣನ ಪೂಜೆ ಮಾಡಲು ಗೊತ್ತಿದೆ. ಅಕ್ರಮಗಳನ್ನು ತಡೆಯಲು ಗೊತ್ತಿದೆ. ಸುಮ್ಮನೆ ಕೈ ಕಟ್ಟಿ ಕೂರುವವನು ನಾನಲ್ಲ ಎಂದು ಗುಡುಗಿದರು.