Advertisement

Udupi; ಶ್ರೀಕೃಷ್ಣ ಜನ್ಮಾಷ್ಟಮಿ ಮಾಸೋತ್ಸವ: ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು

01:16 AM Aug 17, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ, ಶ್ರೀಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು ರಾಜಾಂಗಣದಲ್ಲಿ ಆ. 27ರ ಸಂಜೆ 4ರಿಂದ ನಡೆಯಲಿವೆ.

Advertisement

ಈ ಬಾರಿ ಹುಲಿವೇಷ ಸ್ಪರ್ಧೆ, ಜಾನಪದ ಸ್ಪರ್ಧೆ ಹಾಗೂ ಪೌರಾಣಿಕ ನೃತ್ಯ ಸ್ಪರ್ಧೆಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ನಾವು ಶ್ರೀ ಕೃಷ್ಣ ದೇವರಿಗೆ ಕೊಡಬಹುದಾದ ಬಹುದೊಡ್ಡ ಕೊಡುಗೆ ಅಂದರೆ, ಕೋಟಿಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನಮ್ಮಿಂದಾಗಿ ಕನಿಷ್ಠ ಒಬ್ಬರಾದರೂ ಪಡೆಯವಂತೆ ಪ್ರೇರೇಪಿಸುವುದು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಎಲ್ಲ ಕಾರ್ಯಕ್ರಮ, ಸ್ಪರ್ಧೆಗಳಲ್ಲೂ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಹಲವು ಕಾರ್ಯಕ್ರಮ, ಸ್ಪರ್ಧೆಗಳು ನಡೆದಿವೆ. ಆ.27ರ ಸಂಜೆ 4 ಗಂಟೆಯಿಂದ ಸಾಂಪ್ರದಾಯಿಕ ಸ್ಪರ್ಧೆಗಳು ನಡೆಯಲಿವೆ. ಆಯ್ದ ಸ್ಪರ್ಧೆಗಳಿಗೆ ಪ್ರಪ್ರಥಮ ಬಾರಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದೆ ಎಂದರು.

ಶ್ರೀಮಠದ ದಿವಾನರಾದ ನಾಗಾರಾಜ ಆಚಾರ್ಯ ಮಾತನಾಡಿ, ಹುಲಿವೇಷ ಸ್ಪರ್ಧೆಗೆ ಪ್ರಥಮ-1.15 ಲಕ್ಷ ರೂ. ಅಥವಾ ಟಿವಿಎಸ್‌ ಟ್ಯೂಬ್‌ ಎಲೆಕ್ಟ್ರಿಕಲ್‌ ಸ್ಕೂಟರ್‌, ದ್ವಿತೀಯ-50 ಸಾ. ರೂ., ತೃತೀಯ-25 ಸಾ. ರೂ. ನಗದು ಬಹುಮಾನ ಇರಲಿದೆ.

Advertisement

ಜಾನಪದ ಸ್ಪರ್ಧೆಗೆ ಪ್ರಥಮ-25 ಸಾ. ರೂ., ದ್ವಿತೀಯ-15 ಸಾ. ರೂ., ತೃತೀಯ-10 ಸಾ. ರೂ. ಹಾಗೂ ಪೌರಾಣಿಕ ನೃತ್ಯ ಸ್ಪರ್ಧೆಗೆ ಪ್ರಥಮ-30 ಸಾ. ರೂ., ದ್ವಿತೀಯ 20 ಸಾ. ರೂ., ತೃತೀಯ-10 ಸಾ. ರೂ. ಬಹುಮಾನ ಇರಲಿದೆ.

ಸಾಂಪ್ರದಾಯಿಕ ಕುಣಿತ ಮತ್ತು ವೇಷಕ್ಕೆ ಹೆಚ್ಚಿನ ಪಾಶಸ್ತ್ಯ ಕೊಡಲಾಗುವುದು. ಆಸಕ್ತರು ಬಡಗುಮಾಳಿಗೆಯಲ್ಲಿರುವ ಸ್ವಾಗತ ಕಾರ್ಯಾಲಯದಲ್ಲಿ ಆ. 25ರ ಮೊದಲು ನೋಂದಾಯಿಸಿಕೊಳ್ಳಬೇಕು.

ಭಾಗವಹಿಸುವ ತಂಡಗಳು ನಿಯಮ, ಷರತ್ತು ಮತ್ತು ಮಾಹಿತಿಗೆ ಶ್ರೀ ಮಠದ ಕೇಶವ ಆಚಾರ್ಯ (9932287917) ಅವರನ್ನು ಸಂಪರ್ಕಿಸಲು ತಿಳಿಸಿದರು.

ಆ.22ರಿಂದ ವಿವಿಧ ಸಭಾ ಕಾರ್ಯಕ್ರಮ ನಡೆಯಲಿದೆ. ಕರಕುಶಲ ಮೇಳದ ಉದ್ಘಾಟನೆ, ಆ.23ರಂದು ಲಡ್ಡುತ್ಸವ ಉದ್ಘಾಟನೆ, ಆ.26ರಂದು ಡೋಲೋತ್ಸವ, ಧಾರ್ಮಿಕ ಪ್ರವಚನಗಳು ನಡೆಯಲಿವೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಎಚ್‌.ಡಿ. ಕುಮಾರಸ್ವಾಮಿ, ರಾಜ್ಯ ಸಚಿವರಾದ ರಾಮಲಿಂಗಾ ರೆಡ್ಡಿ, ಎಚ್‌.ಕೆ.ಪಾಟೀಲ್‌ ಹೀಗೆ ರಾಜಕೀಯ ಕ್ಷೇತ್ರದ ಪ್ರಮುಖರು ಉಭಯ ಜಿಲ್ಲೆಯ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರಮೇಶ್‌ ಭಟ್‌ ಮಾತನಾಡಿ, ಆ.17ರಿಂದ ಕಾರ್ಯಕ್ರಮ ಗಳು ಅಧಿಕೃತವಾಗಿ ಆರಂಭವಾಗಲಿದೆ. ಆ.18ರಂದು ರಥ ಬೀದಿಯಲ್ಲಿ ದೇಸಿ ಆಟಗಳ ಸೊಬಗು ಇರಲಿದೆ ಎಂದರು.

ಆ.18ರಿಂದ ರಾಜಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಿ| ಪಸಗಿ ವಿಜಯೀಂದ್ರಾಚಾರ್ಯ, ಡಾ| ಪ್ರಜ್ಞಾ ಮಾರ್ಪಳ್ಳಿ, ಚಕ್ರವರ್ತಿ ಸೂಲಿಬೆಲೆ, ಡಾ| ಎಚ್‌.ಎಸ್‌. ಪ್ರೇಮಾ, ಎಸ್‌.ಎನ್‌.ಸೇತುರಾಮ್‌, ಡಾ| ಎಸ್‌.ಎಲ್‌. ಬೈರಪ್ಪ ಮೊದಲಾದವರು ಭಾಗವಹಿಸಿ ವಿಚಾರ ಮಂಥನ ಮಾಡಲಿದ್ದಾರೆ ಎಂದು ಮಹಿತೋಷ್‌ ಆಚಾರ್ಯ ಹೇಳಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್‌, ಶ್ರೀ ಮಠದ ರವೀಂದ್ರ ಆಚಾರ್ಯ, ಶ್ರೀಪಾದ್‌ ಹೆಗಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next