ಮಂಗಳೂರು: ಸುರತ್ಕಲ್ ನ ಕೃಷ್ಣಾಪುರದ 9ನೇ ಬ್ಲಾಕ್ ನಿವಾಸಿ, ದಿನಸಿ ಅಂಗಡಿ ವ್ಯಾಪಾರಿ ಜಲೀಲ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ ಪ್ರಕರಣದ ನೈಜ ಆರೋಪಗಳನ್ನು ಶೀಘ್ರ ಬಂಧಿಸಿ, ಆರೋಪಿಗಳ ವಿರುದ್ಧ UAPA ಅಡಿ ಪ್ರಕರಣ ದಾಖಲಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ರಾಜ್ಯ ಗೃಹ ಇಲಾಖೆಯನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ ವಾರಗಳಿಂದ ನಿರಂತರವಾಗಿ ನೈತಿಕ ಪೋಲಿಸ್ ಗಿರಿ ಪ್ರಕರಣಗಳು ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಪೋಲಿಸ್ ಇಲಾಖೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದೆ ಇರುವುದೇ ದುಷ್ಕರ್ಮಿಗಳಿಗೆ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದೆ ಹಾಗೂ ಇಂತಹ ದುಷ್ಕೃತ್ಯಗಳನ್ನು ಎಸಗಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಸಮಾಜಘಾತುಕರು ಯಾರೇ ಇರಲಿ, ಅಂತಹವರು ಇಡೀ ನಾಗರಿಕ ಸಮಾಜಕ್ಕೆ ಅಪಮಾನ ಹಾಗೂ ಇಂತಹ ಅಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರನ್ನು ಸಮಾಜ ಪಕ್ಷಾತೀತವಾಗಿ ಒಕ್ಕೊರಲಿನಿಂದ ಬಹಿಷ್ಕರಿಸಬೇಕಾಗಿದೆ ಎಂದರು.
ಇದನ್ನೂ ಓದಿ:ನಟಿ ತುನಿಶಾ ಶರ್ಮಾ ಪ್ರಕರಣ: ʼʼಲವ್ ಜಿಹಾದ್ ಕೋನದಲ್ಲೂ ತನಿಖೆ ಆಗಬೇಕು”; ಬಿಜೆಪಿ ಶಾಸಕ
ಸರಕಾರ ಈ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಶೀಘ್ರದಲ್ಲೇ ಈ ಹಿಂದೆ ಹತ್ಯೆಯಾದ ಮಸೂದ್, ಫಾಝಿಲ್ ಹಾಗೂ ಜಲೀಲ್ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡುವ ಮೂಲಕ ನೈತಿಕತೆ ತೋರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸುವಂತೆ ಪಕ್ಷದ ಉನ್ನತ ಮಟ್ಟದ ನಾಯಕರಲ್ಲಿ ಕೋರಿಕೆ ಸಲ್ಲಿಸಿದ್ದೇನೆ ಎಂದರು.