ಮಂಡ್ಯ: ನಾನು ದೇವರಾಣೆಗೂ ಲಂಚ ಪಡೆದಿಲ್ಲ. ಲಂಚ ಪಡೆದಿದ್ದರೆ ನನಗೆ ದೇವರು ಉಗ್ರವಾದ ಶಿಕ್ಷೆ ನೀಡಲಿ ನನ್ನ ವಂಶ ನಿರ್ವಂಶವಾಗಲಿ ಎಂದು ಕೆ.ಆರ್.ಪೇಟೆ ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿರುವ ನವಗ್ರಹ ದೇವಸ್ಥಾನದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೆ.ಆರ್.ಪೇಟೆ ತಾಲ್ಲೂಕು ವಿಸ್ತರಣಾಧಿಕಾರಿ ಕೃಷ್ಣಪ್ಪ ಪ್ರಮಾಣ ಮಾಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸಾರಾಂಶ:
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಯುವಕ ಹರೀಶ್ ಮಾತನಾಡಿ, ನಾನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯವನ್ನು ಪಡೆಯಲು ಚಿನ್ನದ ಆಭರಣಗಳನ್ನು ಗಿರವಿಯಿಟ್ಟು ಒಂದು ಲಕ್ಷ ರೂ. ಹಣವನ್ನು ಲಂಚವಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿ ಕೃಷ್ಣಪ್ಪ ನೀಡಿದ್ದೇನೆ. ಅವರು ಹಣ ವಾಪಸ್ ನೀಡಬೇಕು. ಇಲ್ಲದಿದ್ದರೆ ಸಾಲಸೌಲಭ್ಯದ ಫಲಾನುಭವಿಯಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಕೃಷ್ಣಪ್ಪನೇ ಕಾರಣ ಎಂದು ಪತ್ರ ಬರೆದಿಟ್ಟು ಸಾಯುತ್ತೇನೆ ಎಂದು ದೇವರ ವಿಗ್ರಹಕ್ಕೆ ಹಾರ ಹಾಕಿ ಪ್ರಮಾಣ ಮಾಡಿದರು.
ಇದನ್ನೂ ಓದಿ:ಕೋವಿಡ್: ಈ ಬಾರಿಯ ದೀಪಾವಳಿಗೆ ಪಟಾಕಿ ನಿಷೇಧವಾಗುತ್ತಾ? ಅಧಿಕಾರಿಗಳು ಏನು ಹೇಳುತ್ತಾರೆ
ನಂತರ ಕೃಷ್ಣಪ್ಪ ಮಾತನಾಡಿ, ನಾನು ಕಳೆದ ೮ ವರ್ಷಗಳಿಂದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೆ.ಆರ್.ಪೇಟೆ ತಾಲ್ಲೂಕಿನ ವಿಸ್ತರಣಾಧಿಕಾರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ೮ ವರ್ಷಗಳಿಂದ ತಾಲ್ಲೂಕಿನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಗಳಿಸಿದ್ದೇನೆ. ರಾಜಕೀಯ ದುರುದ್ದೇಶದಿಂದ ಹರೀಶ್ ಕಟ್ಟುಕಥೆ ಸೃಷ್ಟಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮನೆ ದೇವರಾಣೆಗೂ ನಾನು ಲಂಚ ಪಡೆದಿಲ್ಲ. ಅರ್ಧ ಲೋಟ ಟೀ ಕುಡಿದಿಲ್ಲ ಇಲ್ಲವೇ ಜೊತೆಯಲ್ಲಿ ಒಂದು ಹೊತ್ತು ಊಟ ಮಾಡಿಲ್ಲ ಎಂದು ಪ್ರತಿ ಪ್ರಮಾಣ ಮಾಡಿದರು.
ಪ್ರಕರಣ ಗಂಭೀರವಾಗಿದ್ದು, ಭ್ರಷ್ಟಾಚಾರ ನಿಯಂತ್ರಿಸಬೇಕು ಎಲ್ಲೆಡೆ ಜಾಗೃತಿ ನಡೆಯುತ್ತಿದ್ದು, ಈ ಹೊತ್ತಿನಲ್ಲಿಯೇ ಈ ರೀತಿಯ ಘಟನೆ ನಡೆದಿರುವುದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಆದ್ದರಿಂದ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸತ್ಯ ಹೊರಗೆಳೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.