Advertisement
ಈ ಸಂಬಂಧ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಯ ಮುಂದೆ ಬೇಡಿಕೆ ಮಂಡಿಸಿದೆ. ಈ ಬಗೆಗಿನ ವಿಚಾರಣೆ ಫೆ. 12ರಿಂದ ಕೆಇಆರ್‌ಸಿಯಲ್ಲಿ ವಿವಿಧ ಹಂತಗಳಲ್ಲಿ ನಡೆಯಲಿದೆ. ಒಂದು ವೇಳೆ ಕೆಇಆರ್‌ಸಿಯು ಕೆಪಿಟಿಸಿಎಲ್‌ನ ಮನವಿಗೆ ಅಂಕಿತ ಮುದ್ರೆ ಒತ್ತಿದರೆ ಬರುವ ಹಣಕಾಸು ವರ್ಷದಿಂದ ವಿದ್ಯುತ್ ಬಿಲ್ ಜತೆಗೆ ಸಿಬಂದಿ ಪಿಂಚಣಿ ಭರಿಸುವ ಹೊಣೆ ಗ್ರಾಹಕರ ಹೆಗಲೇರಲಿದೆ. ಕೆಪಿಟಿಸಿಎಲ್ ನೌಕರರಿಗೆ ನೀಡುವ ಪಿಂಚಣಿ ಮತ್ತು ಇತರ ನಿವೃತ್ತಿ ಸವಲತ್ತುಗಳನ್ನು ಗ್ರಾಹಕರೇ ಭರಿಸಬೇಕೆಂದು ಸರಕಾರ ಈಗಾಗಲೇ ಆದೇಶಿಸಿದೆ. ಆದರೆ ಈ ಆದೇಶದಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿದ್ದರೂ, ಈ ಅಂಶವನ್ನು ಮರೆಮಾಚಿ ಕೆಪಿಸಿಟಿಸಿಎಲ್ ಸಿಬಂದಿಯ ಪಿಂಚಣಿಯನ್ನು ಗ್ರಾಹಕರ ತಲೆಗೆ ಕಟ್ಟುವ ಹುನ್ನಾರ ನಡೆಯುತ್ತಿದೆ.
ಈ ರೀತಿ ಗ್ರಾಹಕರ ತಲೆ ಮೇಲೆ ನೌಕರರ ಪಿಂಚಣಿ ವೆಚ್ಚವನ್ನು ಹೇರಿರುವ ಉದಾಹರಣೆ ಎಲ್ಲೂ ಇಲ್ಲ. ಗ್ರಾಹಕರು ತಾವು ಬಳಸಿದ ವಿದ್ಯುತ್‌ನ ಶುಲ್ಕ ನೀಡುತ್ತಾರೆಯೇ ಹೊರತು ನೌಕರರ ಪಿಂಚಣಿ ಭರಿಸಲು ಬರುವುದಿಲ್ಲ. ಈಗಾಗಲೇ ಖಾಸಗಿ ರಂಗದವರು ವಿದ್ಯುತ್ ರಂಗದಲ್ಲಿದ್ದಾರೆ. ಅವರ ನೌಕರರೂ ಇದೇ ರೀತಿ ಬೇಡಿಕೆ ಇಟ್ಟರೆ ಗ್ರಾಹಕರು ಭರಿಸಲು ಸಾಧ್ಯವಿಲ್ಲ ಎಂದು ವಿದ್ಯುತ್ ಗ್ರಾಹಕರ ವೇದಿಕೆಗಳು ತೀವ್ರವಾಗಿ ವಿರೋಧಿಸಿವೆ.
Related Articles
ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆ (ಎಎಫ್ಕೆಸಿಸಿಐ) ಈ ಪ್ರಸ್ತಾವನೆಗೆ ಈಗಾಗಲೇ ತನ್ನ ವಿರೋಧವನ್ನು ಲಿಖೀತ ರೂಪದಲ್ಲಿ ಸರಕಾರಕ್ಕೆ ಸಲ್ಲಿಸಿದೆ. ಗ್ರಾಹಕರೊಬ್ಬರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ತಡೆಯಾಜ್ಞೆ ಈಗಲೂ ಜಾರಿಯಲ್ಲಿದೆ. ಆದರೂ ಸೋಮವಾರ ಆರಂಭಗೊಳ್ಳುವ ಸಾರ್ವಜನಿಕ ವಿಚಾರಣೆಯಲ್ಲಿ ಕೆಪಿಟಿಸಿಎಲ್ ನೌಕರರ ಪಿಂಚಣಿಯ ಭಾಗವನ್ನೂ ವಿದ್ಯುತ್ ದರ ಪರಿಷ್ಕರಣೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸಲು ತೀರ್ಮಾನಿಸಿದೆ. ಇದರಿಂದ 2021-22 ಮತ್ತು 2023-24 ಅವಧಿಯ ಬಾಕಿ 3353.27 ಕೋಟಿ ರೂ. ಹಾಗೂ ಮುಂಬರುವ ದಿನಗಳಲ್ಲಿ ಬರುವ ಎಲ್ಲ ನೌಕರರ ಪಿಂಚಣಿ ವೆಚ್ಚವನ್ನು ಗ್ರಾಹಕರು ಭರಿಸಬೇಕಾಗುತ್ತದೆ.
Advertisement