Advertisement

KPSC ಬಿಕ್ಕಟ್ಟು: 2,500 ಹುದ್ದೆಗಳು ಅತಂತ್ರ

12:52 AM Jan 05, 2024 | Team Udayavani |

ಬೆಂಗಳೂರು: ಪರೀಕ್ಷಾ ಅಕ್ರಮ, ನೇಮಕಾತಿ ವಿಳಂಬ ಆರೋಪಗಳಿಂದ ಹೊರಬರಲು ಹೆಣಗುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಕ್ಕೆ ಈಗ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು “ಕಾನೂನು’ ಅಡ್ಡಿ ಬರುತ್ತಿದೆ. ನೇಮಕಾತಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಹಾಗೂ ಹೈಕೋರ್ಟ್‌ ಮೆಟ್ಟಿಲೇರುತ್ತಿರುವುದು ಈ ಕಾನೂನು ಅಡ್ಡಿಗೆ ಕಾರಣವಾಗಿದೆ.

Advertisement

ಎರಡು ವರ್ಷಗಳಲ್ಲಿ ಪ್ರಾರಂಭಿಸಲಾದ ನೇಮಕಾತಿ ಪ್ರಕ್ರಿಯೆಗಳ ಪೈಕಿ ಬಹುಪಾಲು ನೇಮಕಾತಿ ಪ್ರಕರಣಗಳು ಒಂದಿಲ್ಲೊಂದು ಕಾನೂನು ಸಮಸ್ಯೆಯನ್ನು ಎದುರಿಸುತ್ತಿವೆ. ಇದು ನೇಮಕಾತಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ 2021 ಮತ್ತು 2022ರಲ್ಲಿ ಅಧಿಸೂಚನೆ ಹೊರಡಿಸಿ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿತ್ತು. ಇದಲ್ಲದೇ 2018ರಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿನ 1,400ಕ್ಕೂ ಹೆಚ್ಚು ಸಿ ಗ್ರೂಪ್‌ ಹುದ್ದೆಗಳ ನೇಮಕಾತಿ ಸಹಿತ ಎರಡು ವರ್ಷಗಳಲ್ಲಿ 3,800ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿತ್ತು. ಅದರಲ್ಲಿ 2,500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ವಿಚಾರವಾಗಿ ಕೆಎಸ್‌ಎಟಿ ಹಾಗೂ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ. ಹಾಗಾಗಿ ಇಷ್ಟು ಹುದ್ದೆಗಳ ಸ್ಥಿತಿ ಅತಂತ್ರವಾಗಿದೆ.

ಕೆಲವು ಪ್ರಕರಣಗಳಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೆಟ್ಟಿಲೇರಿದ್ದರಿಂದ ತಡೆಯಾಜ್ಞೆ ಎದುರಾಗಿದೆ. ಕೆಲವು ಪ್ರಕರಣಗಳಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಗೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಅಂತಿಮಪಟ್ಟಿ ಪ್ರಕಟನೆಗೆ ತಡೆ ಇದೆ. ಈ ಪ್ರಕರಣಗಳು ಹೈಕೋರ್ಟ್‌ ಮೆಟ್ಟಿಲೇರಿ ಅಲ್ಲಿ ಕೆಲವು ಪ್ರಕರಣಗಳಲ್ಲಿ ಕೆಎಸ್‌ಎಟಿ ಆದೇಶವನ್ನು ಎತ್ತಿಹಿಡಿಯಲಾಗಿದ್ದರೆ, ಕೆಲವು ಪ್ರಕರಣಗಳಲ್ಲಿ ಕೆಎಸ್‌ಎಟಿ ಆದೇಶಕ್ಕೆ ತಡೆ ಇದೆ. ಅಂಥ ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ನೇರವಾಗಿ ಹೈಕೋರ್ಟ್‌ ತಡೆ ನೀಡಿರುವ ಉದಾಹರಣೆಗಳೂ ಇವೆ. ನೇಮಕಾತಿ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಲು ಪ್ರಮುಖ ಕಾರಣಗಳಲ್ಲಿ ಮೀಸಲಾತಿ ವಿಚಾರವೂ ಸೇರಿಕೊಂಡಿದೆ.

ಮುಖ್ಯವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 288 ಸಹಾಯಕ ಎಂಜಿನಿಯರ್‌ ಗ್ರೇಡ್‌-1 ಹುದ್ದೆಗಳು, 133 ಕಿರಿಯ ಅಭಿಯಂತರರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 23 ನಗರ ಯೋಜಕರು, 60 ಸಹಾಯಕ ನಗರ ಯೋಜಕರು, ಪೌರಾಡಳಿತ ನಿರ್ದೇಶನಾಲಯದ 89 ಕಿರಿಯ ಸಿವಿಲ್‌ ಅಭಿಯಂತರರು, 57 ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗಳ ನೇಮಕಾತಿ ಕೆಎಸ್‌ಎಟಿ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 288 ಸಹಾಯಕ ಎಂಜಿನಿಯರ್‌ ಗ್ರೇಡ್‌-1 ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಯೋಜಕರ 23 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಹೈದರಾಬಾದ್‌ ಕರ್ನಾಟಕ ಮೀಸಲಾತಿ ಸುತ್ತೋಲೆಯನ್ನು ಕೆಎಸ್‌ಎಟಿ ರದ್ದುಪಡಿಸಿದ್ದು, ಈ ವಿಷಯವೂ ಹೈಕೋರ್ಟ್‌ ಮೆಟ್ಟಿಲೇರಿದೆ.

ಅದೇ ರೀತಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 60 ಸಹಾಯಕ ನಗರ ಯೋಜಕರು, ಪೌರಾಡಳಿತ ನಿರ್ದೇಶನಾಲಯದ 89 ಕಿರಿಯ ಅಭಿಯಂತರರು, 57 ಕಿರಿಯ ಆರೋಗ್ಯ ನಿರೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 136 ಕಿರಿಯ ಅಭಿಯಯಂತರರ ಹುದ್ದೆಗಳ ನೇಮಕ ವಿಚಾರದಲ್ಲಿ ಕೆಎಸ್‌ಎಟಿ ಆದೇಶದ ವಿರುದ್ಧ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲು ಕೆಪಿಎಸ್‌ಸಿ ತೀರ್ಮಾನಿಸಿದೆ.

Advertisement

5 ವರ್ಷಗಳಿಂದ ಬಾಕಿ
ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವಿವಿಧ 23 ವೃತ್ತಿಗಳ 1,520 ಸಿ ಗ್ರೂಪ್‌ ಹುದ್ದೆಗಳ ನೇಮಕಾತಿಗೆ 2018ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿ ವಿಚಾರ ಹೈಕೋರ್ಟ್‌ ನಲ್ಲಿತ್ತು. ಅಂತಿಮವಾಗಿ 2023ರ ಜುಲೈ 24ರಂದು ಹೈಕೋರ್ಟ್‌ ಆದೇಶ ನೀಡಿದ್ದು, ಅದರಂತೆ ಕೆಪಿಎಸ್‌ಸಿ ಕ್ರಮ ಕೈಗೊಳ್ಳುತ್ತಿದೆ. ಉಳಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ವಿವಿಧ 9 ಹುದ್ದೆಗಳ ನೇಮಕಾತಿಗೆ 2018ರಿಂದ ಹೈಕೋರ್ಟ್‌ ತಡೆಯಾಜ್ಞೆ ಇದೆ.

1,600 ಹುದ್ದೆಗಳ ಭರ್ತಿಗೆ ಪ್ರಸ್ತಾವನೆ
2023ರಲ್ಲಿ ವಿವಿಧ ಇಲಾಖೆಗಳ 1,600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಆಯಾ ಇಲಾಖೆಗಳಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅವುಗಳು ಸದ್ಯ ಆಯೋಗದ ಪರಿಶೀಲನೆಯಲ್ಲಿವೆ. ಈ ಪೈಕಿ 400 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ, ಪಶುಸಂಗೋಪನೆ ಇಲಾಖೆ ಕಳೆದ ವರ್ಷದ ಜೂನ್‌ನಲ್ಲಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ತಡೆ ಇದ್ದು, ಮಾಹಿತಿ ಕೋರಿ ಆಯೋಗ ಸರಕಾರಕ್ಕೆ ಪತ್ರ ಬರೆದಿದೆ.

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next