Advertisement
ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಚಾ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Related Articles
Advertisement
ನಮ್ಮ ಪಕ್ಷ ಇಡೀ ರಾಜ್ಯದ ಉದ್ದಗಲಕ್ಕೂ ಕೋವಿಡ್‌ನಿಂದ ಯಾರ್ಯಾರು ಪ್ರಾಣ, ಉದ್ಯೋಗ, ವೃತ್ತಿ ಕಳೆದುಕೊಂಡಿದ್ದಾರೆ. ಯಾರು ನಷ್ಟ ಅನುಭವಿಸುತ್ತಿದ್ದಾರೆ ಅವರೆಲ್ಲರನ್ನೂ ಭೇಟಿ ಮಾಡುತ್ತಿದೆ. ನಮ್ಮ ಮುಖಂಡರು, ಕಾರ್ಯಕರ್ತರು ಕೋವಿಡ್ ಸಂತ್ರಸ್ತರನ್ನು ಮಾಡುತ್ತಿದೆ. ಕಾಂಗ್ರೆಸ್ ಕೋವಿಡ್ ವಾರಿಯರ್ಸ್ ಎಂಬ ತಂಡ ರಚನೆ ಮಾಡಿ, ಸಹಾಯ ಹಸ್ತ ಎಂದು ಹೆಸರಿನಲ್ಲಿ ಸರ್ಕಾರದ ಗಮನ ಸೆಳಯಲು ಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ಆಕ್ಸಿಜನ್ ದುರಂತದಲ್ಲಿ ಸುಮಾರು 60ಕ್ಕೂ ಹೆಚ್ಚು ಸತ್ತಿದಾರೆ. 36 ಜನರು ಸತ್ತಿರುವುದು ಖಚಿತ ಎಂದು ನ್ಯಾಯಾಲಯ ಸಮಿತಿ ಹೇಳಿದೆ. ಆದರೆ ಕೇವಲ 24 ಜನರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಇನ್ನುಳಿದವರಿಗೆ ಪರಿಹಾರ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಸತ್ತ ಕುಟುಂಬದವರನ್ನು ಭೇಟಿ ಮಾಡುತ್ತಿದ್ದೇನೆ. ಸತ್ತ ಕುಟುಂಬದವರ ನೋವು, ಹೇಳಲಿಕ್ಕೆ ಸಾಧ್ಯವಿಲ್ಲ. ಮುಡಿಗುಂಡದ ಒಬ್ಬ ಹೆಣ್ಣು ಮಗಳಿಗೆ, ಇನ್ನೂ ಪತಿಯ ಡೆತ್ ಸರ್ಟಿಫಿಕೇಟ್ ನೀಡಿಲ್ಲ. ಪರಿಹಾರ ನೀಡಿಲ್ಲ. ಇಬ್ಬರು ಚಿಕ್ಕ ಮಕ್ಕಳು, ದಿನಾ ಅಲೆಯುತ್ತಿದ್ದಾರೆ. ಆಕೆಗೆ ಮರಣ ಪ್ರಮಾಣ ಪತ್ರ ನೀಡಲು, ಪರಿಹಾರ ನೀಡಲು ನಿಮಗೆ ಏನು ಬಂದಿದೆ? ಯಾಕ್ರಿ ಇರಬೇಕು ಈ ಸರ್ಕಾರ? ಈ ಕುರಿತು 3-4 ವಿಡಿಯೋಗಳನ್ನು ಸಿಎಂ ಅವರಿಗೆ ಟ್ಯಾಗ್ ಮಾಡುತ್ತೇನೆ ಎಂದರು.
ನಾನು ಇಂದು 36 ಜನರ ಕುಟುಂಬವನ್ನೂ ಭೇಟಿ ಮಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸಂಗ್ರಹಿಸಿದ ಹಣದಿಂದ, ತಲಾ 1 ಒಂದೊಂದು ಲಕ್ಷವನ್ನು ಒಂದೊಂದು ಕುಟುಂಬಕ್ಕೆ ನೀಡಿದ್ದೇವೆ ಎಂದರು.
ಇದನ್ನೂ ಓದಿ: ಕಾಸರಗೋಡು ಕನ್ನಡಿಗರ ಪರಂಪರಾಗತ ಭಾವನೆಗಳನ್ನುಕಾಪಾಡುವುದು ಎರಡೂ ರಾಜ್ಯಗಳ ಕರ್ತವ್ಯ: ಎಚ್ ಡಿಕೆ
ನಮ್ಮ ಪಕ್ಷ ರಾಜ್ಯದ ಉದ್ದಗಲಕ್ಕೂ, ಕೋವಿಡ್ ಸಂತ್ರಸ್ತರ ನೆರವಿಗೆ ನಿಲ್ಲುತ್ತಿದೆ. ಡೆತ್ ಆಡಿಟನ್ನು ಪಕ್ಷವೇ ಮಾಡಿ, ಕೋವಿಡ್ ನಿಂದ ತೊಂದರೆಯಾಗಿದೆ, ಯಾರಿಗೆ ಪರಿಹಾರ ಸಿಕ್ಕಿಲ್ಲ, ಯಾರಿಗೆ ಅನ್ಯಾಯವಾಗಿದೆ ಅದೆಲ್ಲವನ್ನೂ ಅಧ್ಯಯನ ಮಾಡಿ, ಸರ್ಕಾರಕ್ಕೆ, ಜಿಲ್ಲಾಧಿಕಾರಿಯವರಿಗೆ, ತಹಶೀಲ್ದಾರ್‌ಗೆ ಮನವಿ ಮಾಡಿ, ಅವರ ಪರವಾಗಿ ಹೋರಾಟ ನಡೆಸಲಿದೆ ಎಂದರು.
ಕೋವಿಡ್‌ನಿಂದ ಸತ್ತವರಿಗೆ ನಾರ್ಮಲ್ ಡೆತ್ ಸರ್ಟಿಫಿಕೇಟ್ ನೀಡಿದ್ದಾರೆ. ಕೋವಿಡ್ ಎಂದು ನಮೂದಿಸಿಲ್ಲ. ಕೋವಿಡ್ ಎಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗುತ್ತದೆಯೇ ಮುಖ್ಯಮಂತ್ರಿಯವರೇ? ಎಂದು ಪ್ರಶ್ನಿಸಿದರು. ಎರಡನೇ ಅಲೆಯನ್ನು ಹರಡಿದವರೇ ನೀವು. ಕೋವಿಡ್ ನಿಂದ ಸತ್ತವರ ಮರಣ ಪ್ರಮಾಣ ಪತ್ರ ನೀಡಬೇಕು. ಪರಿಹಾರ ನೀಡಬೇಕು. ಮುಖ್ಯಮಂತ್ರಿಯವರು 29 ಸಾವಿರ ಜನ ಮಾತ್ರ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ 3 ಲಕ್ಷಕ್ಕಿಂತಲೂ ಅಧಿಕ ಜನ ಸತ್ತಿದ್ದಾರೆ ಎಂದು ಅಧಿಕೃತ ಮಾಹಿತಿ ಇದೆ. ಇವರು ಕೇವಲ 29 ಸಾವಿರ ಜನ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಡೆತ್ ಆಡಿಟ್ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಧರ್ಮಸೇನ, ಡಿಸಿಸಿ ಅಧ್ಯಕ್ಷ ಪಿ. ಮರಿಸ್ವಾಮಿ, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಸಿಎಂ ಗೆ ಕುರ್ಚಿ ಮಾತ್ರ ಮುಖ್ಯ: ಮುಖ್ಯಮಂತ್ರಿಯವರಿಗೆ ಅವರ ಕುರ್ಚಿ ಬಹಳ ಮುಖ್ಯ. ಈ ಜನರಲ್ಲ. ಜನ ಎಲ್ಲಿ ರೊಚ್ಚಿಗೆದ್ದುಬಿಡುತ್ತಾರೋ ,ಎಲ್ಲಿ ಹೊಡೆದು ಬಿಡುತ್ತಾರೋ ಎಂಬ ಭಯ ಹಾಗಾಗಿ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದ ಜನ ಆಕ್ರೋಶದಲ್ಲಿದ್ದಾರೆ. ಟಿವಿಗಳಲ್ಲೇ ಹೆಣ್ಣು ಮಕ್ಕಳು ಮುಖ್ಯಮಂತ್ರಿಯವರಿಗೆ, ಪ್ರಧಾನಮಂತ್ರಿಯವರಿಗೆ ಯಾವ ರೀತಿ ಪ್ರಶ್ನೆ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಜನರ ಈ ಆಕ್ರೋಶವನ್ನು ಸಿಎಂ ಗೆ ಇಂಟಲಿಜೆನ್ಸ್ ನವರು ತಿಳಿಸಿದ್ದಾರೆ. ಹಾಗಾಗಿ ಅವರು ಜನರ ಬಳಿ ಬರುತ್ತಿಲ್ಲ ಎಂದರು.
ಅಧಿಕಾರದಲ್ಲಿ ಇರುವವರಿಗೆ ಜನರು ಬೈಯುತ್ತಾರೆ. ಬೈಸಿಕೊಳ್ಳಬೇಕು. ಅಧಿಕಾರ ಇಲ್ಲದವರಿಗೆ ಯಾರ ಮಾತನಾಡುತ್ತಾರೆ? ಅವರು ಬರುವ ಧೈರ್ಯ ಮಾಡಿಲ್ಲ. ಹಾಗಾಗಿ ವಿರೋಧ ಪಕ್ಷವಾದರೂ ನಾವು ಬಂದಿದ್ದೇವೆ ಎಂದು ಹೇಳಿದರು.
ಮೂಢನಂಬಿಕೆಗೆ ಕಟ್ಟುಬಿದ್ದು ಸಿಎಂ ಬಂದಿಲ್ಲವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಅದು ಅವರಿಗೆ ಬಿಟ್ಟಿದ್ದು. ನಾನಂತೂ ಬಂದಿದ್ದೇನೆ ಎಂದರು.