Advertisement

ಕೊಯ್ಯೂರು: ಕಿರಿಯಾಡಿ-ಮಲಬೆಟ್ಟು ಸಂಪರ್ಕ ರಸ್ತೆ ಅವ್ಯವಸ್ಥೆ

09:21 PM Aug 18, 2020 | mahesh |

ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದ ಕಿರಿಯಾಡಿ-ಮಲೆಬೆಟ್ಟು 3 ಕಿ. ಮೀ. ಸಂಪರ್ಕ ರಸ್ತೆಗೆ ಕಳೆದ ಮೂವತ್ತು ವರ್ಷಗಳಿಂದ ಡಾಮರು ಕಾಮಗಾರಿಯಾಗದೆ ತೀರಾ ಹದಗೆಟ್ಟಿದ್ದು, ಕೃಷಿಕರು, ಹೈನುಗಾರರ ಬದುಕು ಅತಂತ್ರವಾಗಿದೆ. ಪ್ರಸಕ್ತ ಮಲೆಬೆಟ್ಟುನಿಂದ ಅರ್ಧ ಕಿ.ಮೀ. ಸಾಗಿದಾಗ ಸಿಗುವ ಮಣ್ಣಿನ ರಸ್ತೆ ಕೆಸರು ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳಿಂದಾಗಿ ರಸ್ತೆಯಲ್ಲಿ ಸಂಚಾರ ಮತ್ತಷ್ಟು ದುಸ್ತರವಾಗಿದೆ ಎಂಬುವುದು ಸ್ಥಳೀಯರ ಆರೋಪ.

Advertisement

ಉಜಿರೆ, ಬೆಳಾಲಿಗೆ ಸಂಪರ್ಕ
ಕೊಯ್ಯೂರು ಗ್ರಾಮದ ಮಲೆಬೆಟ್ಟು ಆಸುಪಾಸು 300ಕ್ಕೂ ಹೆಚ್ಚು ಮನೆಗಳಿಗೆ ಉಜಿರೆ, ಬೆಳಾಲು ಸಂಪರ್ಕಕ್ಕೆ ಈ ರಸ್ತೆ ಅತ್ಯವಶ್ಯವಾಗಿದೆ. ಕಿರಿಯಾಡಿಯಿಂದ ಉಜಿರೆಗೆ ತೆರಳಲು 2 ಕಿ. ಮೀ. ಅಂತರವಿದ್ದು, ರಸ್ತೆ ದುರವಸ್ಥೆಯಿಂದ 10 ಕಿ. ಮೀ. ಸುತ್ತಿ ಬಳಸಿ ತೆರಳಬೇಕಿದೆ. ಕಳೆದ 30 ವರ್ಷಗಳ ಹಿಂದೆ ಜಿ.ಪಂ. ರಸ್ತೆಯಾಗಿ ಡಾಮರು ಕಂಡಿತ್ತು. ಬಳಿಕ ಡಾಮರು ಕಾಮಗಾರಿ ನಡೆದಿಲ್ಲ. ಈ ಬಾರಿ ಶಾಸಕ ಹರೀಶ್‌ ಪೂಂಜ ಅವರು ಕಾಂಕ್ರೀಟ್‌ ರಸ್ತೆಗೆ 1 ಕೋ. ರೂ. ಅನುದಾನ ಮೀಸಲಿರಿಸಿದ್ದು, ಕಾಮಗಾರಿ ತಡವಾಗಿದ್ದರಿಂದ ಸಮಸ್ಯೆ ಜಟಿಲವಾಗಿದೆ. ಶೀಘ್ರ ಡಾಮರು ಕಾಮಗಾರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಎಂಎಲ್‌ಸಿ ಪ್ರತಾಪಸಿಂಹ, ತಹಶೀಲ್ದಾರ್‌ ಭೇಟಿ
ರಸ್ತೆ ದುರವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಗ್ರಾ.ಪಂ.ನ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಸೋಮವಾರ ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ್‌ ಎಂ. ಕಲ್ಮಂಜ, ತಹಶೀಲ್ದಾರ್‌ ಮಹೇಶ್‌ ಜೆ., ಕೊಯ್ಯೂರು ಪಿಡಿಒ ರಾಜೀವಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶೀಘ್ರದಲ್ಲಿ ಕಾಮಗಾರಿ
ಬಹುಬೇಡಿಕೆಯ ಕಿರಿಯಾಡಿ-ಮಲೆಬೆಟ್ಟು ಸಂಪರ್ಕ ರಸ್ತೆಗೆ ಈಗಾಗಲೇ 1 ಕೋ. ರೂ.ನ ಟೆಂಡರ್‌ ಕರೆಯಲಾಗಿದೆ. 2 ಕಿ. ಮೀ. 100 ಮೀ. ರಸ್ತೆಯನ್ನು 3.30 ಮೀಟರ್‌ ಅಗಲವಾಗಿ ಕಾಂಕ್ರೀಟ್‌ ಕಾಮಗಾರಿ ಮಾಡಲಾಗುವುದು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಸೂಚಿಸಲಾಗುವುದು.
– ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next