Advertisement

ಕೋಳ್ಯೂರು ರಾಮಚಂದ್ರ ರಾವ್‌: ಕಲಾಕೋವಿದನಿಗೆ 85

06:00 AM Jun 08, 2018 | |

ತೆಂಕುತಿಟ್ಟು ವೇಷಧಾರಿಯಾಗಿ ಅರ್ಥದಾರಿಯಾಗಿ ಮತ್ತು ನಾಟ್ಯ ಗುರುಗಳಾಗಿ ಶ್ರೇಷ್ಠತೆಯನ್ನು ಹೊಂದಿದವರು ಡಾ| ಕೋಳ್ಯೂರು ರಾಮಚಂದ್ರ ರಾವ್‌. ಪ್ರಸ್ತುತ ಅವರಿಗೆ 85 ಸಂವತ್ಸರ ಕಳೆಯಿತು. ಹತ್ತಾರು ಮೇಳಗಳಲ್ಲಿ ಸೇವೆಗೈದ ಲೋಕ ಸಂಚಾರಿ. ಸರಳ- ಸಾತ್ವಿಕ ಗುಣಸಂಪನ್ನ. ವಿಶ್ವವಿದ್ಯಾಲಯ ಹಂತದಿಂದ ರಾಷ್ಟ್ರಪತಿ ಭವನದವರೆಗೆ ವಿಸ್ತರಿಸಿದ ಕೀರ್ತಿದಾವಳ್ಯ.

Advertisement

    ಕಳೆದ ವರ್ಷದವರೆಗೂ ಕರಾವಳಿಯ ಆಟ-ಕೂಟಗಳ ಪಟ್ಟಿಯಲ್ಲಿ ರಾಯರ ಹೆಸರು ಪ್ರಚಲಿತವಿತ್ತು, ಇತ್ತೀಚಿನ ಕೆಲ ತಿಂಗಳಿನಿಂದ ವಯೋಸಹಜವಾಗಿ ಅವರನ್ನು ಕಾಡುವ ಮರೆವು ರಂಗದಿಂದ ವಿರಮಿಸುವಂತೆ ಮಾಡಿದೆ. ಕಾರ್ಯಕ್ರಮಗಳಿಗೆ ಸ್ವತಂತ್ರವಾಗಿ ಸಂಚರಿಸುವ ಚೈತನ್ಯ ಸಾಲದು. ಉಳಿದಂತೆ ಉತ್ತಮ ಆರೋಗ್ಯ. ಕುಂದದ ಜೀವನೋತ್ಸಾಹ. ಮನೆಗೆ ಬಂದವರಲ್ಲಿ ಕುಶಲೋಪರಿ. ಹಿಂದಿನ ಕಾಲದ ಕಲಾಯಾನದ ವರ್ಣನೆ. ಕಲಾ ಚಟುವಟಿಕೆಯಲ್ಲಿ ತಾನಿನ್ನೂ ಪಾಲ್ಗೊಳ್ಳಬೇಕೆಂಬ ತುಡಿತ. ವಿರಾಮದ ವೇಳೆ ಪುರಾಣದ ಅಧ್ಯಯನ. ಪಾತ್ರಗಳ ಅಭಿವ್ಯಕ್ತಿಯ ಕುರಿತು ಮರು ಚಿಂತನೆ. ಒಟ್ಟಿನಲ್ಲಿ ಯಕ್ಷಗಾನವೇ ಉಸಿರು. ಅದೇ ಅವರಿಗೆ ಹಸಿವು. ಸ್ವತಃ ಅವರೇ ಹೇಳಿಕೊಳ್ಳುವಂತೆ, ವಿಪುಲವಾದ ಸ್ಥಾನ- ಮಾನಗಳ ಸಂಪ್ರಾಪ್ತಿ. ಬಣ್ಣದ ಬದುಕಿನಲ್ಲಿ ಪರಿಪೂರ್ಣ ಸಂತೃಪ್ತಿ.

    ಪುರುಷ ಪ್ರಧಾನವೆನಿಸಿದ ಯಕ್ಷಗಾನ ವಲಯದಲ್ಲಿ ಅಗರಿ, ಬಲಿಪ, ಸಾಮಗದ್ವಯರು, ಶೇಣಿ, ತೆಕ್ಕಟ್ಟೆ, ಗೋವಿಂ¨ ಭಟ್‌,ಚಿಟ್ಟಾಣಿ, ಜಲವಳ್ಳಿ…ಬಲುದೊಡ್ಡ ಹೆಸರು. ಸ್ತ್ರೀ ಭೂಮಿಕೆಯಲ್ಲಿ ಕೋಳ್ಯೂರರೇ ಅಂದಿನ ರಂಗದ ಪಟ್ಟದರಸಿ. ಕತೆಯ ಮೂಲದ ಆಳವನ್ನು ಸ್ಪಷ್ಟವಾಗಿ ಅರಿತವರು. ಪುರಾಣ ಲೋಕವನ್ನು ಮರು ಸೃಷ್ಟಿಗೊಳಿಸುವವರು. ಜನರ ಮನಮುಟ್ಟುವ ಸರಳವಾದ ಅರ್ಥಶುದ್ಧಿ. ಸತ್ವಯುತ ಸಂದೇಶ ಬಿತ್ತರಿಸುವ ಸ್ವಭಾವ ಸಿದ್ಧಿ. ಭಾವ-ಶುೃತಿಗೆ ಚ್ಯುತಿ ಬರದಂತೆ, ಸದಾ ಜಾಗೃತಬುದ್ಧಿ. ಅಶೋಕವನದ ಸೀತೆ, ಅಕ್ಷಯಾಂಬರದ ದ್ರೌಪದಿ, ಅಂಬೆ, ತಾರೆ, ಮಂಡೋದರಿ… ಬೇರೆ ಇಲ್ಲವೆಂಬಷ್ಟು ಪಾತ್ರಚಿತ್ರಣ ಪ್ರಸಿದ್ಧಿ. ಪಂಚವಟಿಯ ಶೂರ್ಪನಖೀಯಿಂದ ತುಳುನಾಡಿನ ಸಿರಿಯವರೆಗೆ ರಾಯರ ದೃಷ್ಟಿಯಲ್ಲಿ ಎಲ್ಲವೂ ಮೌಲ್ಯಾಧಾರಿತ. ಸ್ತ್ರೀ ವೇಷದ ರೂಪ ಲಾವಣ್ಯವನ್ನು ಕಂಡು “ನಿಜವಾಗಿ ಆಕೆ ಮಹಿಳಾ ಕಲಾವಿದೆ ಆಗಿರಬೇಕು’ ಎಂಬುದಾಗಿ ಪ್ರೇಕ್ಷಕರು ಪಂಥಾಹ್ವಾನ ಮಾಡುತ್ತಿದ್ದರಂತೆ. ಆರು ದಶಕಗಳ ತಿರುಗಾಟದಲ್ಲಿ ಚೌಕಿ ಹಾಗೂ ವೇದಿಕೆಯ ಶಿಸ್ತನ್ನು ಕಾಯ್ದುಕೊಂಡ ಮೇರು ಕಲಾವಿದ.

ಅವರ ಸಾಧನೆಯ ಸಂಕೇತವಾಗಿ ಕಾಸರಗೋಡು ಜಿಲ್ಲೆಯ ಕೋಳ್ಯೂರು ಪ್ರದೇಶ ಕಲಾವಲಯದಲ್ಲಿ ಹೆಸರಾಂತವಾಯಿತು. 

 ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next