Advertisement

ಕೋಟತಟ್ಟು ಗ್ರಾ.ಪಂ.ದ‌ಲ್ಲೀಗ ಶೇ.100 ಕ್ಯಾಶ್‌ಲೆಸ್‌ ವ್ಯವಹಾರ

06:00 AM Jul 22, 2018 | Team Udayavani |

ಕೋಟ: ದೇಶದಲ್ಲಿ  ಐದು ನೂರು, ಸಾವಿರ ಮುಖ ಬೆಲೆಯ ನೋಟು ಅಪಮೌಲ್ಯದ ಅನಂತರ ಡಿಜಿಟಲ್‌ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು ಹಾಗೂ ಇದರ ಭಾಗವಾಗಿ  ಸ್ಥಳೀಯಾಡಳಿತಗಳಲ್ಲಿ ನಗದುರಹಿತ ವ್ಯವಹಾರ ಅಳವಡಿಸಿಕೊಳ್ಳುವಂತೆ ಕರೆ ನೀಡಲಾಗಿತ್ತು. 

Advertisement

ಆದರೆ ಅದು ಅಷ್ಟೇನು ಯಶಸ್ವಿ ಯಾಗದಿದ್ದರೂ ಕರ್ನಾಟಕದಲ್ಲಿ  ಪ್ರಥಮ ಬಾರಿಗೆ ಈ ವ್ಯವಸ್ಥೆ  ಅಳವಡಿಸಿಕೊಂಡ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾ.ಪಂ. ಇದೀಗ ಶೇ. 100 ಕ್ಯಾಶ್‌ಲೆಸ್‌ ಎಂಬ  ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಗ್ರಾಮ ಪಂಚಾಯತ್‌ ಕಡಲ 
ತೀರದ ಭಾರ್ಗವ ಡಾ| ಕೋಟ ಶಿವರಾಮ ಕಾರಂತರು ಹಾಗೂ ಪ್ರಸ್ತುತ ವಿಧಾನ ಪರಿಷತ್‌ ವಿಪಕ್ಷ ನಾಯಕನಾಗಿರುವ ಕೋಟ ಶ್ರೀನಿವಾಸ್‌ ಪೂಜಾರಿಯವರ ಹುಟ್ಟೂರಿನಲ್ಲಿದೆ ಹಾಗೂ ಪೂಜಾರಿಯವರ ಮಾರ್ಗದರ್ಶನದಲ್ಲಿ  ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಕಾರಂತ ಹುಟ್ಟೂರು ಪ್ರಶಸ್ತಿ, ಜನಪ್ರತಿನಿಧಿಗಳ ಕ್ರೀಡಾಕೂಟ ಆಯೋಜಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಈ ಪಂಚಾಯತ್‌ ಹೆಸರು ಗಳಿಸಿದೆ. ಅಂತೆಯೇ 15-01-2017ರಂದು ಅಂದಿನ ಆರೋಗ್ಯ ಸಚಿವ ಕೆ. ರಮೇಶ ಕುಮಾರ್‌ ಮೂಲಕ ನಗದುರಹಿತ ವ್ಯವಹಾರಕ್ಕೆ ಚಾಲನೆ ನೀಡಿ ಮತ್ತೂಂದು ಮೈಲಿಗಲ್ಲು  ಸಾಧಿಸಿದೆ.

ಒಂದೇ ಒಂದು ರೂ.ನಗದು ವ್ಯವಹಾರವಿಲ್ಲ 
ನಗದುರಹಿತ ವ್ಯವಹಾರ ಜಾರಿಗೊಂಡ ಮೇಲೆ ಇಲ್ಲಿನ ಎಲ್ಲ ವ್ಯವಹಾರ ಎ.ಟಿ.ಎಂ. ಕಾರ್ಡ್‌  ಮೂಲಕ ನಡೆಯು ತ್ತದೆ. ಕಾರ್ಡ್‌ ಇಲ್ಲದವರು ಚೆಕ್‌ ಮೂಲಕ ನೀಡಬಹುದು ಅಥವಾ ಹತ್ತಿರದಲ್ಲಿರುವ ಕಾರ್ಪೋರೇಷನ್‌ ಬ್ಯಾಂಕ್‌ಗೆ  ತೆರಳಿ ಪಂಚಾಯತ್‌ ಖಾತೆಗೆ ಹಣ ಪಾವತಿಸಬಹುದು. ಇದಲ್ಲದೆ ಮೊಬೈಲ್‌ ಬ್ಯಾಂಕಿಂಗ್‌ ಮುಂತಾದ ಡಿಜಿಟಲ್‌ ವಿಧಾನಗಳಿಗೂ ಅವಕಾಶವಿದೆ.

ರಾಜ್ಯದಲ್ಲೇ  ಅಪರೂಪ
ಕೋಟತಟ್ಟುವಿನ ಅನಂತರ  ಜಿಲ್ಲೆಯ  ಎರಡು-ಮೂರು ಕಡೆ  ಈ ವ್ಯವಸ್ಥೆ ಅಳವಡಿಸಲಾಯಿತು. ಆದರೆ ಬೇರೆ-ಬೇರೆ ಸಮಸ್ಯೆಯಿಂದ ಮುಂದುವರಿಯಲಿಲ್ಲ.  ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತ್‌ನಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಇಲ್ಲ. ರಾಜ್ಯದಲ್ಲಿ ಒಂದೆರಡು ಗ್ರಾ.ಪಂ.ಗಳಲ್ಲಿ ಮಾತ್ರ  ಈ ವ್ಯವಸ್ಥೆ ಇದೆ.

Advertisement

ಯಶಸ್ಸಿಗೆ ಕಾರಣಗಳು
– ಸಾಧಕ-ಭಾದಕಗಳ ಕುರಿತು ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹಂತ -ಹಂತದ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದು.
–  ಗ್ರಾ.ಪಂ. ವ್ಯಾಪ್ತಿಯ  1,032 ಕುಟುಂಬದ 5,263 ಮಂದಿಯ ಪಟ್ಟಿ ತಯಾರಿಸಿ, ಆಯಾಯ ವಾರ್ಡ್‌ ಸದಸ್ಯರ ಮೂಲಕ ಮನೆಗೆ ಭೇಟಿ ನೀಡಿ ಸರ್ವೆ ನಡೆಸಿ ಕಾರ್ಪೊರೇಷನ್‌ ಬ್ಯಾಂಕ್‌ನ  ಅಭಿಯಾನದ ಮೂಲಕ ಖಾತೆ ಇಲ್ಲದವರಿಗೆ ಖಾತೆ, ಎ.ಟಿ.ಎಂ. ಇಲ್ಲದವರಿಗೆಎ.ಟಿ.ಎಂ. ಮಾಡಿಸಿಕೊಡಲಾಗಿತ್ತು.
– ನಗದು ರಹಿತ ವ್ಯವಹಾರದ ಕುರಿತು ಜನರನ್ನು ಮನವೊಲಿಸಿದ್ದು.

ಸಮಸ್ಯೆಗಳು
– ಕೆಲವೊಮ್ಮೆ  ವ್ಯವಹಾರದ ಮೇಲೆ ಬ್ಯಾಂಕ್‌ಗಳು ಶುಲ್ಕ ವಿಧಿಸುವುದರಿಂದ, ಜನರಿಂದ ಪಡೆದ ಹಣಕ್ಕಿಂತ ಕಡಿಮೆ ಸಂದಾಯವಾಗಿ ನಷ್ಟವಾಗುತ್ತದೆ. ಇಂತಹ ಸಂದರ್ಭ  ಲೆಕ್ಕವಿಡಲು ಸಮಸ್ಯೆಯಾಗುತ್ತದೆ. 
–  ನೆಟ್‌ವರ್ಕ್‌ ಸಮಸ್ಯೆ ಇದ್ದಾಗ ಹಣ ಪಾವತಿಸಿಕೊಳ್ಳುವುದು ಕಷ್ಟ ಹಾಗೂ ಬ್ಯಾಂಕ್‌ಗಳಿಗೇ ಎಷ್ಟೇ ಬೇಡಿಕೆ ಸಲ್ಲಿಸಿದರು ಒಂದೇ ಮಿಶನ್‌ ನೀಡುವುದರಿಂದ ಸಮಸ್ಯೆ ಯಾಗುತ್ತದೆ.
–  ಬ್ಯಾಂಕ್‌ ಗ್ರಾಮ ಪಂಚಾಯತ್‌ನಿಂದ ದೂರವಿದ್ದಲ್ಲಿ ಎ.ಟಿ.ಎಂ.ಕಾರ್ಡ್‌ ಇಲ್ಲದವರು ಬ್ಯಾಂಕ್‌ಗೆ ತೆರಳಿ ಹಣ ಪಾವತಿಸುವುದು ಕಷ್ಟವಾಗುತ್ತದೆ. 
( ಆದರೆ ಕೋಟತಟ್ಟು ಗ್ರಾ.ಪಂ.ನಿಂದ ನೂರು ಮೀಟರ್‌ ದೂರದಲ್ಲಿ ಬ್ಯಾಂಕ್‌ ಇರುವುದರಿಂದ ಈ ಸಮಸ್ಯೆ ಇಲ್ಲ )

 ಬೇರೆ ಗ್ರಾ.ಪಂ.ಗಳಿಗೆ ವಿಸ್ತರಿಸಲು ಪ್ರಯತ್ನ 
ಕೋಟತಟ್ಟು ಗ್ರಾಮ  ಪಂಚಾಯತ್‌ ನಗದುರಹಿತ ವ್ಯವಹಾರದಲ್ಲಿ ಸಂಪೂರ್ಣ ಯಶಸ್ವಿ ಯಾಗಿದೆ. ಜಿಲ್ಲೆಯಲ್ಲಿ ಬೇರೆ ಕಡೆ ಈ ವ್ಯವಸ್ಥೆ ಇಲ್ಲ. ಮುಂದೆ ಬೇರೆ ಗ್ರಾ.ಪಂ.ಗಳಿಗೆ ವಿಸ್ತರಿಸಲು ಕ್ರಮಕೈಗೊಳ್ಳ ಲಾಗುವುದು.       
– ರುದ್ರೇಶ್‌, 
ಲೀಡ್‌ ಬ್ಯಾಂಕ್‌  ಮ್ಯಾನೇಜರ್‌, ಉಡುಪಿ

 ಎಲ್ಲ ಪಂ.ಗಳು ಅಳವಡಿಸಿ ಕೊಳ್ಳಬಹುದು
ಆರಂಭದಲ್ಲಿ ಈ ವ್ಯವಸ್ಥೆ  ಬಗ್ಗೆ ಸ್ವಲ್ಪ ಭಯವಿತ್ತು. ಆದರೆ ಇದುವರೆಗೆ ಯಾವುದೇ ಸಮಸ್ಯೆಯಾಗಿಲ್ಲ ಮತ್ತು  ಒಂದೇ-ಒಂದು ರೂ. ನಗದು ವ್ಯವಹಾರ ನಡೆಸಿಲ್ಲ. ಪ್ರತಿಯೊಂದು ಗ್ರಾ.ಪಂ.ಗಳು ಈ ವ್ಯವಸ್ಥೆಯನ್ನುಅಳವಡಿಸಿಕೊಂಡರೆ  ಸುಲಭ ಮತ್ತು ಪಾರದರ್ಶಕ ಆಡಳಿತಕ್ಕೆ ಸಹಕಾರಿ.   
– ಪ್ರಮೋದ್‌ ಹಂದೆ, ಅಧ್ಯಕ್ಷರು,ಕೋಟತಟ್ಟು  ಗ್ರಾಮ ಪಂಚಾಯತ್‌

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next