Advertisement

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

03:39 PM Dec 28, 2024 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಟಿ.ಟಿ. ರೋಡ್‌ನ‌ಲ್ಲಿ ನಾಲ್ಕು ಬಾವಿಗಳಿವೆ. ಅದರಲ್ಲಿ ಸಾಕಷ್ಟು ನೀರಿದೆ. ಆದರೆ, ನಿರ್ವಹಣೆಯಿಲ್ಲದೇ ಉಪಯೋಗಶೂನ್ಯವಾಗಿದೆ.

Advertisement

ಸುತ್ತ ಕಳೆ ಬೆಳೆದಿರುವ ಕಾರಣ ಬಾವಿ ಇದೆ ಎಂದೇ ತಿಳಿಯದಂತಾಗಿದೆ. ಜಲಸಿರಿ ಯೋಜನೆ ಬರುವ ಮೊದಲು ಇಲ್ಲಿನ ಆಶ್ರಯ ಕಾಲನಿಗೆ ಪರ್ಯಾಯ ನೀರಿನ ವ್ಯವಸ್ಥೆಯೂ ಇರಲಿಲ್ಲ. ಆಗೆಲ್ಲ ನೀರುಣಿಸಿದ ಬಾವಿಗಳಿವು. ಪಾರ್ಕ್‌ ಬಳಿ, ಬಿರುಗೋಳಿ ಬಾವಿಗಳು ದೊಡ್ಡದಿದ್ದು ಇನ್ನೆರಡು ಸಣ್ಣ ಬಾವಿಗಳಿವೆ. ಈಗೇನೋ ಪುರಸಭೆಯಿಂದಲೇ ನೀರಿನ ಪೂರೈಕೆ ನಡೆಯುತ್ತಿದೆ. ಆದರೆ, ಈ ಸಂಪರ್ಕಗಳಿಗೆ ಯಾವಾಗ ಗರ ಬಡಿಯುತ್ತದೆ ಎಂದು ಹೇಳಲಾಗದು. ಹೀಗಾಗಿ, ಇವುಗಳ ನಿರ್ವಹಣೆ ಮಾಡಿದರೆ ತುರ್ತು ಸಂದರ್ಭದಲ್ಲಿ ನೀರಿನ ಆವಶ್ಯಕತೆಗೆ ನೆರವಾಗಲಿದೆ ಎನ್ನುವುದು ಜನರ ಅಭಿಪ್ರಾಯ.

ನೀರಿನ ಸಮಸ್ಯೆಯಿಲ್ಲ
ಕುಂದಾಪುರಕ್ಕೆ ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇಲ್ಲ. ತಾಂತ್ರಿಕ ಸಮಸ್ಯೆ ಹೊರತುಪಡಿಸಿದರೆ ವಾರಾಹಿಯಿಂದ ಹರಿದು ಬರುವ ನೀರು ಜಪ್ತಿ ಸ್ಥಾವರ ಘಟಕದಲ್ಲಿ ಶುದ್ಧೀಕರಣಗೊಂಡು ಕುಂದಾಪುರಕ್ಕೆ ಅನಿಯತವಾಗಿ ಸರಬರಾಜು ಆಗುತ್ತಿದೆ. ಈಗ ಹೆಚ್ಚುವರಿಯಾಗಿ ಜಲಸಿರಿಯಡಿ 24 ಗಂಟೆ ನಿರಂತರ ನೀರು ಪೂರೈಕೆ ಆಗುತ್ತಿದೆ. ಇದನ್ನು ನಿರ್ವಹಿಸುವ ಖಾಸಗಿ ಕಂಪೆನಿಗೆ ಪುರಸಭೆ ವಾರ್ಷಿಕ 1.5 ಕೋ.ರೂ. ಪಾವತಿಸುತ್ತಿದೆ. ಇಲ್ಲಿಗೆ ಬರುವ ನೀರಿನಲ್ಲಿ 8 ಪಂಚಾಯತ್‌ಗಳ ನೀರಿನ ಸಮಸ್ಯೆ ನಿಭಾವಣೆಯಾಗಿದೆ.

ಕಳೆದ ವರ್ಷ ಗುಲ್ವಾಡಿ ಕಿಂಡಿ ಅಣೆಕಟ್ಟಿನ ಹಲಗೆ ಸಮಸ್ಯೆಯಿಂದಾಗಿ ಕುಡಿಯುವ ನೀರಿಗೆ ಉಪ್ಪು ನೀರು ಮಿಶ್ರಣವಾಗಿತ್ತು. ಇದರಿಂದ ಒಂದು ವಾರ ಕಾಲ ಸಮಸ್ಯೆ ಎದುರಾಗಿತ್ತು. ಹೀಗಾಗಿ ಎಷ್ಟೋ ವರ್ಷದ ಬಳಿಕ ಎಂಬಂತೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾಗಿ ಬಂದಿತ್ತು. ಆಗ ಬಾವಿ, ಕೆರೆಗಳ ಮಹತ್ವ ಅರಿವಾಗಿತ್ತು.

Advertisement

ಈ ಬಾರಿಯೂ ಕೆರೆ, ಬಾವಿ ನಿರ್ವಹಣೆ
ಈ ಬಾರಿ ಬೇಸಗೆಯಲ್ಲಿ ವಿಟ್ಠಲವಾಡಿ ರಸ್ತೆಯಲ್ಲಿರುವ ಚಟ್‌ ಕೆರೆ, ಹುಂಚಾರಬೆಟ್ಟು ಕೆರೆ, ಬಹದೂರ್‌ಶಾ ವಾರ್ಡ್‌ನ ಕೆರೆ, ಜೈಹಿಂದ್‌ ಹೋಟೆಲ್‌ ಬಳಿಯ ಕೆರೆ ದುರಸ್ತಿಯಾಗಿದೆ. ಇನ್ನೂ 2 ಕೆರೆಗಳ ಪುನಶ್ಚೇತನಕ್ಕೆ ಅನುದಾನ ಇಡಲಾಗಿತ್ತು. ಎಲ್‌ಐಸಿ ರಸ್ತೆ, ನಾರಾಯಣಗುರು ಮಂದಿರ ಬಳಿ, ಗಾಂಧಿ ಪಾರ್ಕ್‌ ಒಳಗೆ, ಭಂಡಾರ್‌ಕಾರ್ಸ್‌ ಕಾಲೇಜು ಬಳಿಯ ಬಾವಿಗಳನ್ನು ರಿಂಗ್‌, ಮೆಶ್‌ ಅಳವಡಿಕೆ ಸಹಿತ 10 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು.

ಈ ಬಾರಿಯೂ ಕೆರೆ, ಬಾವಿ, ಕುಡಿಯುವ ನೀರಿನ ಮೂಲಗಳ ನಿರ್ವಹಣೆಗೆ ಮೀಸಲಾದ ಅನುದಾನ ಇದೆ. ಇದನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ.

ಬಾವಿ ದುರಸ್ತಿಯಿಂದ ಏನು ಉಪಯೋಗ?
ಎರಡು ಮೂರು ವರ್ಷಗಳ ಹಿಂದೆ ಕೆಲವು ಬಾವಿಗಳ ನಿರ್ವಹಣೆ ಮಾಡಲಾಗಿತ್ತು.ಅಗ್ನಿ ಶಾಮಕ ದಳಕ್ಕೆ ತುರ್ತು ನೀರಿನ ಆವಶ್ಯಕತೆಯಿದ್ದರೆ ಹಾಗೂ ಸಭೆ ಸಮಾರಂಭಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರಿನ ಆವಶ್ಯಕತೆಯಿದ್ದರೆ ಪುರಸಭೆಯ ಕುಡಿಯುವ ನೀರಿನ ಪೈಪ್‌ಲೈನ್‌ನ ನೀರು ಬಳಸುವ ಬದಲು ಟ್ಯಾಂಕರ್‌ ಮೂಲಕ ಈ ಬಾವಿಗಳ ನೀರು ಕೊಂಡೊಯ್ದು ಬಳಸಬಹುದು ಎಂದು ಅಭಿಪ್ರಾಯದಿಂದ ಪಂಪ್‌ ಅಳವಡಿಸಲಾಗಿತ್ತು. ಆಗ ಪುರಸಭೆ ನೀರು ಮಾರಾಟ ಮಾಡುತ್ತಿದೆ ಎಂದು ಕೆಲವರು ಆಪಾದನೆ ಮಾಡಿದ ಕಾರಣ ಈ ಯೋಜನೆ ನನೆಗುದಿಗೆ ಬಿತ್ತು. ಅಸಲಿಗೆ ಈ ಚಿಂತನೆ ಚೆನ್ನಾಗೇ ಇತ್ತು. ಬಾವಿ ನೀರು ಬಳಕೆ ಮಾಡಿದರೆ ಕುಡಿಯುವ ನೀರು ಉಳಿಯುತ್ತಿತ್ತು. ಪುರಸಭೆಗೆ ಬಾವಿಗೆ ಖರ್ಚು ಮಾಡಿದ ವೆಚ್ಚಕ್ಕೆ ಒಂದಿಷ್ಟು ಆದಾಯ ಬರುತ್ತಿತ್ತು.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next