ನಿಯತ್ತಾಗಿ ಈ ಸಿಟಿಯಲ್ಲಿ ಒಂದು ಕೋಟಿ ದುಡಿಯೋಕೆ ಸಾಧ್ಯನೇ ಇಲ್ವಾ? -ಕೋಟಿ ಈ ಪ್ರಶ್ನೆಯನ್ನು ಕೇಳಿಕೊಂಡೇ ಹೊಸ ಬದುಕಿನ ಕನಸು ಕಾಣುತ್ತಾನೆ. ಕಷ್ಟಪಟ್ಟು ದುಡಿಯಬೇಕು, ಅಡ್ಡ ದಾರಿಯ ನಯಾಪೈಸೆ ತನಗೆ ಬೇಡ ಎಂಬ ಗಟ್ಟಿ ನಿರ್ಧಾರದ ಹುಡುಗ ಆತ. ಆ ಹಾದಿಯಲ್ಲೇ ಆತನ ಕಾಯಕ. ಹೀಗಿರುವಾಗ ಕೋಟಿಗೆ “ಲಕ್ಷ ಲಕ್ಷ’ ಸಮಸ್ಯೆ… ಸಣ್ಣದೊಂದು ಗೊಂದಲ.. ಶೀಘ್ರವೇ “ಕೋಟಿ’ಯಾಟ ಶುರು.
ನಿರ್ದೇಶಕ ಪರಮ್ ಒಂದು ಸಾದಾಸೀದಾ ಹುಡುಗನ ಕಥೆಯನ್ನು ಎಷ್ಟು ನೈಜವಾಗಿ ಹೇಳಬಹುದು ಅಷ್ಟನ್ನೂ “ಕೋಟಿ’ಯಲ್ಲಿ ಹೇಳಿದ್ದಾರೆ. ಇಲ್ಲಿ ಅಬ್ಬರವಿಲ್ಲ, ಮಾಸ್ ಡೈಲಾಗ್‌ಗಳ ಶಿಳ್ಳೆ ಇಲ್ಲ, ನಾಯಕನಿಗೊಂದು ಸ್ಪೆಷಲ್ ಎಂಟ್ರಿಯ ಅಗತ್ಯವೂ ಇಲ್ಲ.. ಏಕೆಂದರೆ ಇದು ನಮ್ಮ-ನಿಮ್ಮ ನಡುವಿನ ಕೋಟಿ. ಒಬ್ಬ ಸಾಮಾನ್ಯ ವ್ಯಕ್ತಿಯ ಕಥೆಯನ್ನು ಹೇಗೆ ಹೇಳಬೇಕೆಂಬ ಸ್ಪಷ್ಟತೆ ನಿರ್ದೇಶಕರಿಗಿದ್ದ ಕಾರಣದಿಂದಲೇ ಇಲ್ಲಿ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳ “ಸೂತ್ರ’ಗಳನ್ನು ಹುಡುಕಿರುವಂತಿಲ್ಲ. ಒಂದು ಮಧ್ಯಮ ವರ್ಗದ ಕನಸಿನ ಹುಡುಗ ಆ ಕನಸಿನ ಬೆನ್ನತ್ತಲು ಏನೆಲ್ಲಾ ಮಾಡುತ್ತಾನೆ ಮತ್ತು ಅದನ್ನು ಕೆಲವು ವ್ಯಕ್ತಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ಒನ್‌ಲೈನ್. ಇಡೀ ಸಿನಿಮಾ “ಜನತಾ ಸಿಟಿ’ ಎಂಬ ನಗರದೊಳಗೆ ನಡೆಯುತ್ತದೆ.
ಸಿನಿಮಾ ನೋಡ ನೋಡುತ್ತಲೇ ಹೆಚ್ಚು ಆಪ್ತವಾಗುತ್ತದೆ ಎಂದರೆ ಅದಕ್ಕೆ ಕಾರಣ ನಿರೂಪಣೆ. ನಮ್ಮ ಪಕ್ಕದ ಮನೆಯ ಹುಡುಗನ ಕಥೆಯನ್ನು ತೆರೆಮೇಲೆ ನೋಡುತ್ತಿದ್ದೇವೋ ಎಂಬಂತೆ ಪರಮ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕೋಟಿ ಬಾಳಿನ ಪ್ರತಿಯೊಂದು ಅಂಶವನ್ನು ತುಂಬಾ ವಿಸ್ತೃತವಾಗಿ ಹಾಗೂ ಸಾವಧಾನವಾಗಿ ಹೇಳಬೇಕು ಎಂಬ ನಿರ್ದೇಶಕ ಪರಮ್ ಬಯಕೆ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಇಲ್ಲಿ ಯಾವುದನ್ನೂ ಅವರು “ಪಾಸಿಂಗ್ ಶಾಟ್’ನಲ್ಲಿ ಹೇಳಿಲ್ಲ. ಇವತ್ತಿನ ಪ್ರೇಕ್ಷಕನ “ಅವಸರ’ವನ್ನು ಕಥೆಯ ಆಶಯಕ್ಕೆ ತಂದಿಲ್ಲ. ಅದೇ ಕಾರಣದಿಂದ ಸಿನಿಮಾದ ಅವಧಿಯೂ ಕೊಂಚ ಹೆಚ್ಚೇ ಇದೆ. ಆದರೆ, ಪ್ರತಿ ದೃಶ್ಯದಲ್ಲೂ ಒಂದೊಂದು ವಿಚಾರವನ್ನು ಕಟ್ಟಿಕೊಡುತ್ತಾ, ಸುಂದರ ಹಾಡುಗಳಿಗೆ ಜಾಗ ಬಿಡುತ್ತಾ ಕೋಟಿ ಮುಂದೆ ಸಾಗುತ್ತಾನೆ.
ಮೊದಲೇ ಹೇಳಿದಂತೆ ಇದೊಂದು ಜನತಾ ಸಿಟಿ ಎಂಬ ನಗರ. ಹಾಗಾಗಿ, ಇಲ್ಲಿನ ಕಥೆ, ನೇಟಿವಿಟಿ ಯಾವ ಊರಿನದ್ದು ಎಂಬ ಚರ್ಚೆಯೇ ಬರುವುದಿಲ್ಲ. ಅತಿಯಾದ ಕುತೂಹಲವನ್ನಾಗಲೀ, ತೀರಾ ಬೇಸರವನ್ನಾಗಲೀ ನೀಡದೇ ಸಮಚಿತ್ತದಿಂದ ಸಾಗುವ ಸಿನಿಮಾ ಕೋಟಿ ಎಂದರೆ ತಪ್ಪಲ್ಲ. ಇಲ್ಲಿ ಹೆಚ್ಚು ಪಾತ್ರಗಳಿಲ್ಲ, ಅತಿಯಾದ ಮಾತುಗಳಿಲ್ಲ. ಆದರೆ, ಬರುವ ಪಾತ್ರಗಳಿಗೆ ಹಾಗೂ ಅವುಗಳ ಮಾತಿಗೊಂದು ತೂಕವಿದೆ.
ವಿಭಿನ್ನ ಪ್ರಯತ್ನಗಳಿಗೆ ಸಾಥ್ ನೀಡುವ ಧನಂಜಯ್ ಇಲ್ಲಿ ಕೋಟಿಯಾಗಿ ಕಥೆಗೆ ಹೆಗಲು ಕೊಟ್ಟಿದ್ದಾರೆ. ಡಾಲಿಯ ಛಾಯೆ ಎಲ್ಲೂ ಬಾರದೇ, ಪಕ್ಕದ್ಮನೆ ಕೋಟಿಯಾಗಿ ಇಷ್ಟವಾಗುತ್ತಾರೆ. ಮುಖ್ಯವಾಗಿ ಕಷ್ಟಗಳನ್ನು ಮನೆಮಂದಿ ಮೇಲೆ ತೋರಿಸದೇ, ತಾನೇ ನಿಭಾಹಿಸುವ ಜವಾಬ್ದಾರಿಯುತ ಮಗನಾಗಿ, ಅಣ್ಣನಾಗಿ ಅವರು ಮೆಚ್ಚುಗೆ ಪಡೆಯುತ್ತಾರೆ.
ನಾಯಕಿ ಮೋಕ್ಷಾ ಕುಶಾಲ್‌ಗೆ ಚಿತ್ರದಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ. ತೆರೆಮೇಲೆ ಇದ್ದಷ್ಟು ಹೊತ್ತು ಲವಲವಿಕೆಯ ಹುಡುಗಿ. ರಮೇಶ್ ಇಂದಿರಾ ದೀನು ಸಾಹುಕಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾವಭಾವ ಎಲ್ಲವೂ “ಸಾಹುಕಾರ್’ನನ್ನು ಎತ್ತಿ ಹಿಡಿದಿದೆ. ನಟಿ ತಾರಾ ತಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ಪೃಥ್ವಿ ಶ್ಯಾಮನೂರ್, ಸರ್ದಾರ್ ಸತ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ. “ಕೋಟಿ’ ಕಂಗಳ ಕನಸಿಗೆ ನೀವು ಸಾಥ್ ನೀಡಲು ಚಿತ್ರಮಂದಿರದತ್ತ ಮುಖ ಮಾಡಲು ಅಡ್ಡಿಯಿಲ್ಲ
ರವಿಪ್ರಕಾಶ್ ರೈ