Advertisement

ಮಂಗಳೂರು ಪ್ರಾರ್ಥನ ಮಂದಿರ ಧ್ವಂಸ; ಕಠಿನ ಕ್ರಮ: ಶ್ರೀನಿವಾಸ ಪೂಜಾರಿ

12:06 AM Mar 23, 2022 | Team Udayavani |

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ವಾರ್ಡ್‌ನಲ್ಲಿ “ಪ್ರಾರ್ಥನ ಮಂದಿರ ಧ್ವಂಸ’ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಮಂಗಳವಾರ ನಿಯಮ 72ರಡಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ವಾರ್ಡ್‌ನ 59ನೇ ಕಾವೂರು ಗ್ರಾಮದ ಸರ್ವೇ ನಂಬರ್‌ 133ರಲ್ಲಿ ನಿರ್ಮಿಸಿರುವ ಪ್ರಾರ್ಥನ ಮಂದಿರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ದೇವರ ಮೂರ್ತಿ ಸೇರಿದಂತೆ ಮಂದಿರದಲ್ಲಿದ್ದ ಸಾಮಗ್ರಿಗಳನ್ನು ಲೂಟಿ ಮಾಡಿದ್ದಾರೆ ಎಂದು ಸದನದ ಗಮನ ಸೆಳೆದರು.

ಕಳೆದ 40 ವರ್ಷಗಳಿಂದ ಆ ಪ್ರಾರ್ಥನ ಮಂದಿರ ಇದೆ. ಪೊಲೀಸ್‌, ಕಂದಾಯ ಸೇರಿದಂತೆ ಸರಕಾರದ ಯಾವುದೇ ಇಲಾಖೆ ಈ ಕಟ್ಟಡ ಧ್ವಂಸಗೊಳಿಸಿಲ್ಲ. ಮೂರನೇ ವ್ಯಕ್ತಿ ಧ್ವಂಸಗೊಳಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಅಂಗನವಾಡಿ ನಿರ್ಮಾಣಕ್ಕೆ ಎಂದು ಸಬೂಬು ನೀಡಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ

ಆರೋಪಿಯೋರ್ವನ ಬಂಧನ
ಪ್ರತಿಕ್ರಿಯಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಸರಕಾರವು ಪ್ರಾರ್ಥನಮಂದಿರ ಸೇರಿದಂತೆ ಯಾವುದೇ ಕಟ್ಟಡ ತೆರವುಗೊಳಿಸಬೇಕಾದರೆ ಮೊದಲೇ ನೋಟಿಸ್‌ ನೀಡಿರುತ್ತದೆ. ಜತೆಗೆ ಕಂದಾಯ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳದಲ್ಲಿ ಹಾಜರಿರುತ್ತಾರೆ. ಆದರೆ, ಉದ್ದೇಶಿತ ಮಂಗಳೂರು ಪಾಲಿಕೆ ವ್ಯಾಪ್ತಿಯ ಕಾವೂರು ವಾರ್ಡ್‌ನಲ್ಲಿ ಪ್ರಾರ್ಥನ ಮಂದಿರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲತೀಶ್‌ ಎನ್ನುವಾತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next