Advertisement

Kota-kundapur: ಕಾಡುಕೋಣಗಳ ಉಪಟಳ; ರಾತ್ರಿ ನಿದ್ದೆ ಬಿಟ್ಟು ಗದ್ದೆ ಕಾಯುವ ಸ್ಥಿತಿ

06:40 PM Sep 14, 2023 | Team Udayavani |

ಕೋಟ: ಪ್ರಕೃತಿ ವೈಪರೀತ್ಯ ದಿಂದಾಗಿ ಸರಿಯಾದ ಮಳೆ ಇಲ್ಲದೆ ರೈತ ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ.
ಈ ಸಂದಿಗ್ಧ ಪರಿಸ್ಥಿತಿಯ ನಡುವೆ ಗ್ರಾಮೀಣ ಭಾಗವಾದ ಬಿಲ್ಲಾಡಿ ಗ್ರಾ.ಪಂ. ವ್ಯಾಪ್ತಿಯ ವಂಡಾರು ಹಾಗೂ ಆವರ್ಸೆ ಗ್ರಾ.ಪಂ. ಕಿರಾಡಿ, ಆವರ್ಸೆ ಮುಂತಾದ ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿ ಮೀರುತ್ತಿದ್ದು ರೈತರು ಬೆಳೆದ ಭತ್ತದ ಬೆಳೆ ನಾಶವಾಗುತ್ತಿದೆ.

Advertisement

ಈ ಭಾಗದಲ್ಲಿ ನೂರಾರು ಎಕ್ರೆ ಭತ್ತದ ಗದ್ದೆ ಇದ್ದು ಸುಮಾರು ಹತ್ತು-ಹನ್ನೆರಡು ಕಾಡು ಕೋಣಗಳು ನಿರಂತರವಾಗಿ ಗದ್ದೆಗೆ ದಾಳಿ ಮಾಡಿ ಭತ್ತದ ಸಸಿಯನ್ನು ತಿಂದು ನಾಶಪಡಿಸುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಗದ್ದೆಯಲ್ಲಿದ್ದ ಸಸಿ ಸಂಪೂರ್ಣ ಮಾಯವಾಗುತ್ತಿದೆ.

ಹೊಸ ಸಮಸ್ಯೆ
ಈ ಭಾಗದಲ್ಲಿ ಹಿಂದೆ ಹಂದಿ, ಜಿಂಕೆ, ನವಿಲು ಮುಂತಾದ ಕಾಡು ಪ್ರಾಣಿಗಳ ಹಾವಳಿ ಇತ್ತು. ಆದರೆ ಕಳೆದ ಎರಡು ವರ್ಷದಿಂದ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದು ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ವೃದ್ಧಿಸುತ್ತಿದೆ. ಅರಣ್ಯ ಇಲಾಖೆಯ ಪ್ರಕಾರ
ಈ ಪ್ರದೇಶ ಅಮಾಸೆಬೈಲು, ಹೆಬ್ರಿ ಮುಂತಾದ ದಟ್ಟಾರಣ್ಯಗಳಿಗೆ ಹೊಂದಿಕೊಂಡಿರುವುದರಿಂದ ಅಲ್ಲಿಂದ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿದೆ ಎನ್ನುತ್ತಾರೆ.

ನಿದ್ದೆ ಬಿಟ್ಟು ಗದ್ದೆ ಕಾಯಬೇಕು 
ಬೆಳೆಯನ್ನು ಉಳಿಸಿಕೊಳ್ಳಬೇಕಾದರೆ ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಗದ್ದೆಗೆ ಕಾವಲು ಕಾಯಬೇಕಾದ ಸ್ಥಿತಿ ಇದೆ. ಆದರೆ ಇವುಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಒಬ್ಬೊಬ್ಬರು ಗದ್ದೆಗೆ ತೆರಳಲು ಭಯಪಡುತ್ತಿದ್ದಾರೆ. ಹೀಗಾಗಿ ಮನೆ-ಮಂದಿಯೆಲ್ಲ ಜಾಗರಣೆ ಮಾಡಬೇಕಾದ ಸ್ಥಿತಿ ಇದೆ.

ಪರಿಹಾರ ಕ್ರಮಗಳೇನು?
ಇವುಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮೂಲಕ ಪರಿಹಾರ ಕ್ರಮಗಳು ಜಾರಿಯಾಗಬೇಕು ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎನ್ನುವುದು ರೈತರು ಆಗ್ರಹವಾಗಿದೆ. ಆದರೆ ಇದು ಜನ ನಿಬಿಡ ಪ್ರದೇಶಗಳಾದ್ದರಿಂದ ಕಾಡು
ಕೋಣಗಳನ್ನು ಸಂಪೂರ್ಣವಾಗಿ ಭಯಪಡಿಸಿ ಕಾಡಿಗೆ ಅಟ್ಟಲು ಸಾಧ್ಯವಿಲ್ಲ. ಹೀಗಾಗಿ ಬೇಲಿ ಅಳವಡಿಕೆ, ಸಣ್ಣ ಪ್ರಮಾಣದಲ್ಲಿ ಪ್ರತಿರೋಧಗಳನ್ನು ತೋರುವ ಮೂಲಕ ನಾಡಿಗೆ ಬಾರದಂತೆ ನೋಡಿಕೊಳ್ಳಬೇಕಿದೆ. ಅರಣ್ಯ ಇಲಾಖೆ ವತಿಯಿಂದ ಶೇ.50 ಅನುದಾನದಲ್ಲಿ ಲಭ್ಯವಿರುವ ಸೋಲಾರ್‌ ಬೇಲಿ ಅಳವಡಿಸುವ ಕುರಿತು ರೈತರು ಗಮನಹರಿಸಬೇಕು ಎನ್ನುವುದು ಇಲಾಖೆಯ ಅಧಿಕಾರಿಗಳ ಸಲಹೆಯಾಗಿದೆ.

Advertisement

ಪರಿಹಾರ ಕ್ರಮಗಳ ಚಿಂತನೆ
ಸಮಸ್ಯೆ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು, ಸ್ಥಳ ಪರಿಶೀಲಿಸಿದಾಗ ಕಾಡು ಕೋಣಗಳ ಓಡಾಟದ ಕುರುಹು ಕಂಡು ಬಂದಿದೆ. ಆದರೆ ಜನ ನಿಬಿಡ ಪ್ರದೇಶವಾದ್ದರಿಂದ ಪ್ರಾಣಿಗಳನ್ನು ಭಯಪಡಿಸಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಮತ್ತು ಹಂತ-ಹಂತವಾಗಿ
ನಿಯಂತ್ರಣ ಮಾಡಬೇಕು. ಬೆಳೆ ನಾಶಕ್ಕೆ ಇಲಾಖೆಯಿಂದ ಕ್ವಿಂಟಾಲ್‌ ಭತ್ತಕ್ಕೆ 2,640 ರೂ. ರೀತಿಯಲ್ಲಿ ಎಕ್ರೆ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಎರಡು ಅರ್ಜಿಗಳು ಬಂದಿದ್ದು ಇನ್ನೂ ಹೆಚ್ಚಿನ ರೈತರಿಗೆ ಹಾನಿಯಾಗಿದ್ದರೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು.
ಮಂಜುನಾಥ ಜಿ.ನಾಯ್ಕ, ಡಿ.ವೈ.ಆರ್‌.ಎಫ್‌. ಬಿದ್ಕಲ್‌ಕಟ್ಟೆ

ಕೃಷಿ ಕಾಪಾಡುವುದೇ ಕಷ್ಟ
ಮೊದಲೇ ಮಳೆ ಇಲ್ಲದೆ ಕಂಗಾಲಾಗಿದ್ದೇವೆ. ಇದೀಗ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮತ್ತಷ್ಟು ಸಂಕಷ್ಟ ಎದುರಾಗಿದೆ. ಇವುಗಳ ಉಪಟಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಕೃಷಿ ನಡೆಸುವುದೇ ಕಷ್ಟವಾಗಲಿದೆ.
ಕೊರಗಯ್ಯ ಶೆಟ್ಟಿ,ಸ್ಥಳೀಯ ಕೃಷಿಕರು

*ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next