Advertisement
ಸಭೆಯ ಆರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಗೈರಾದ ಕುರಿತು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಭೆ ರದ್ದುಪಡಿಸುವಂತೆ ಆಗ್ರಹಿಸಿದರು. ಆದರೆ ಇವರ ಬೇಡಿಕೆಯನ್ನು ಪುರಸ್ಕರಿಸದೆ ಸಭೆ ಮುಂದುವರಿಸಲಾಯಿತು. ಅನಂತರ ದಲಿತರ ವಿಶೇಷ ಸವಲತ್ತುಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಫಲಾನುಭವಿಗಳಿಗೆ ವಿವಿಧ ಸೌಕರ್ಯ ವಿತರಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ವಕೀಲ ಟಿ. ಮಂಜುನಾಥ ಅವರು ಕಾನೂನು ಕುರಿತು ಮಾಹಿತಿ ನೀಡುವ ಸಂದರ್ಭ ದಲಿತ ದೌರ್ಜನ್ಯದ ಕುರಿತು ಪೀಠಿಕೆಯ ಮಾತುಗಳನ್ನಾಡಿದರು. ಈ ಸಂದರ್ಭ ದಲಿತ ಸಂಘಟನೆಯ ಮುಖಂಡ ಶ್ಯಾಮ್ ಅವರು ನೀವು ಬೇರೆ ವಿಚಾರ ಮಾತನಾಡಬೇಡಿ. ಕೇವಲ ಕಾನೂನಿನ ಮಾಹಿತಿ ನೀಡಿ ಎಂದು ಆಕ್ಷೇಪಿಸಿದರು. ಇದರಿಂದ ಅಸಮಾಧಾನಗೊಂಡ ಟಿ.ಮಂಜುನಾಥ ನಿಮ್ಮ ಬಳಿ ಕೇಳಿಕೊಂಡು ನಾನು ಮಾಹಿತಿ ನೀಡಬೇಕಾದ ಅಗತ್ಯವಿಲ್ಲ ಎಂದು ಸಭಾ ವೇದಿಕೆಯಿಂದ ಮುಂದೆ ಬಂದು ಉತ್ತರಿಸಿದರು. ಈ ಸಂದರ್ಭ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ವನಿತಾ ಎಸ್. ಆಚಾರ್ಯ, ಸಮನ್ವಯಾಧಿಕಾರಿ ಅರುಣ್ ಕುಮಾರ್ ಮುಂತಾದವರು ಅವರನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಸಭೆಯಲ್ಲಿ ಉಪಸ್ಥಿತರಿದ್ದ ದಲಿತ ಮುಖಂಡರ ನಡುವೆ ಎರಡು ಗುಂಪುಗಳಾಗಿ ವಾದ-ಪ್ರತಿವಾದ ತೀವ್ರಗೊಂಡು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅನಂತರ ಪರಿಸ್ಥಿತಿಯನ್ನು ಕೊಂಚ ತಿಳಿಗೊಳಿಸಿ ಸಭೆ ಮುಂದುವರಿಸಲಾಯಿತು. ಈ ನಡುವೆ ದಲಿತ ಸಂಘಟನೆಯೊಂದರ ಮುಖಂಡೆ ಆರತಿ ಅವರು ಗ್ರಾ.ಪಂ. ವಿರುದ್ಧ ಹರಿಹಾಯ್ದರು. ಸಭೆಯ ಅನಂತರ ಠಾಣೆಗೆ ತೆರಳಿ ಅಧ್ಯಕ್ಷರ ವಿರುದ್ಧ ದಲಿತ ನಿಂದನೆ ಪ್ರಕರಣ ದಾಖಲಿಸಲು ಮುಂದಾದರು. ಠಾಣೆಯಲ್ಲಿ ಮಾತುಕತೆ ನಡೆಸಿ ಮನವೊಳಿಸಲಾಯಿತು. ಅನಂತರ ಸಂಜೆ ಇದೇ ವಿಚಾರವಾಗಿ ಕೋಟ ಠಾಣೆಯ ಎದುರು ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆಯಿತು.