Advertisement

ಕೊರಿಯಾ ತಾರಕ ಬಿಕ್ಕಟ್ಟು; ಸಮರ ಕಟ್ಟಕಡೆಯ ಆಯ್ಕೆಯಾಗಬೇಕು

10:19 AM Apr 26, 2017 | |

ಒಬಾಮಾ ಅಧ್ಯಕ್ಷರಾಗಿದ್ದಾಗ ಉ.ಕೊರಿಯಾ ಅಣ್ವಸ್ತ್ರ ಕಾರ್ಯಕ್ರಮ ಭಂಗಕ್ಕೆ ಸೈಬರ್‌ ಯುದ್ಧ ನಡೆಸಲು ಯೋಚಿಸಿದ್ದರು. ಇಂಥ ವಿಧಾನಗಳು ಮತ್ತು ಕಠಿನ ನಿರ್ಬಂಧಗಳನ್ನು ಹೇರುವ ಮೂಲಕ ಯಾವುದೇ ಉದ್ಧಟ ದೇಶಗಳನ್ನು ಮಣಿಸಬೇಕೇ ಹೊರತು ಸಮರವನ್ನು ಕಟ್ಟಕಡೆಯ ಆಯ್ಕೆಯಾಗಿ ಇರಿಸಿಕೊಳ್ಳಬೇಕು. 

Advertisement

ದಕ್ಷಿಣ ಮತ್ತು ಉತ್ತರ ಕೊರಿಯಾ ದೇಶಗಳನ್ನು ಹೊಂದಿರುವ ಪೂರ್ವ ಏಶ್ಯಾದ ಕೊರಿಯಾ ಪರ್ಯಾಯ ದ್ವೀಪ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನ ಸ್ಥಿತಿಯನ್ನು ಮುಟ್ಟಿದೆ. ಪರಮ ಶತ್ರು ಅಮೆರಿಕ, ಮಿತ್ರ ಚೀನ ಮಾತನ್ನು ಕಿಂಚಿತ್ತೂ ಕಿವಿಗೆ ಹಾಕಿಕೊಳ್ಳದ ಉತ್ತರ ಕೊರಿಯಾ ಇನ್ನೊಂದು ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಪರೀಕ್ಷೆಯಿಲ್ಲದೆ ಮಿಲಿಟರಿ ಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆಯಾದರೂ ಉದ್ಧಟ ವರ್ತನೆಯನ್ನು ಮುಂದುವರಿಸಿದೆ. ಅದನ್ನು ಶತಾಯಗತಾಯ ಬಗ್ಗುಬಡಿಯಬೇಕು ಎಂಬ ಹಠದಲ್ಲಿರುವ ಅಮೆರಿಕ ತನ್ನ ಶಸ್ತ್ರಾಸ್ತ್ರ ಸಜ್ಜಿತ ಪರಮಾಣು ಶಕ್ತಿ ಚಾಲಿತ ಸಬ್‌ಮೆರೀನನ್ನು ಇದೀಗ ದ.ಕೊರಿಯಾದ ನೌಕಾನೆಲೆಗೆ ತಲುಪಿಸಿದೆ. ಮಣಿಯಲೊಲ್ಲದ ಉ. ಕೊರಿಯಾ ಮತ್ತು ದೊಡ್ಡಣ್ಣನ ವರ್ತನೆಯ ಅಮೆರಿಕ‌ ಇವುಗಳ ಮುಸುಕಿನ ತಿಕ್ಕಾಟ ಯಾವ ಕ್ಷಣದಲ್ಲಿ ಯುದ್ಧವಾಗಿ ಸ್ಫೋಟಗೊಳ್ಳುವುದೋ, ಅದರ ಪರಿಣಾಮವೇನಾಗಬಹುದೋ ಅನ್ನುವ ಭಯ ಹರಡಿದೆ.

1950ರ ದಶಕದಿಂದ ಈಚೆಗೆ ಧಗಧಗಿಸುತ್ತಿರುವ ಕೊರಿಯಾ ಪರ್ಯಾಯ ದ್ವೀಪದ ಬಿಕ್ಕಟ್ಟು ಆಗೀಗ ತಾರಕಕ್ಕೇರುವುದು, ಮತ್ತೆ ತಣ್ಣಗಾಗುವುದು ನಡೆಯುತ್ತಲೇ ಬಂದಿದೆ. ಆದರೆ, ಕೆಲವು ವರ್ಷಗಳಲ್ಲಿ ಯುವ ಸರ್ವಾಧಿಕಾರಿ ಕಿಮ್‌ ಜೊಂಗ್‌ ಉನ್‌ ನಾಯಕತ್ವದಲ್ಲಿ ಉತ್ತರ ಕೊರಿಯಾ ಯಾರ ಮಾತಿಗೂ ತಲೆಬಾಗುತ್ತಿಲ್ಲ, ಯಾವುದೇ ಬೆದರಿಕೆ, ನಿರ್ಬಂಧಗಳಿಗೆ ಮಣಿಯುತ್ತಿಲ್ಲ. ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಪರೀಕ್ಷೆಗಳನ್ನು, ಅಣ್ವಸ್ತ್ರ ಪರೀಕ್ಷೆಗಳನ್ನು ಒಂದರ ಮೇಲೊಂದರಂತೆ ನಡೆಸುತ್ತಿದೆ. ಉತ್ತರ ಕೊರಿಯಾ ಉದ್ಧಟವಾಗಿ ವರ್ತಿಸುತ್ತಿದ್ದರೂ ಇದುವರೆಗೆ ಜಗತ್ತಿನ ಎಲ್ಲಿ ಏನೇ ಆದರೂ ಮೂಗು ತೂರಿಸುವ ಸ್ವಭಾವವುಳ್ಳ ದೊಡ್ಡಣ್ಣ ಅಮೆರಿಕದ ನೇತಾರಿಕೆ ರಾಜಕೀಯ ಅನುಭವವುಳ್ಳ ವಿವೇಚನಾಶೀಲರ ಕೈಯಲ್ಲಿತ್ತು. ಈಗ ಮುನ್ನುಗ್ಗುವ ಸ್ವಭಾವದ ಟ್ರಂಪ್‌ ಅಧ್ಯಕ್ಷರಾಗಿದ್ದಾರೆ ಮತ್ತು ಜಾಗತಿಕ ಶಕ್ತಿ ಧ್ರುವೀಕರಣದ ಸಮೀಕರಣಗಳು ಈಗ ಹಿಂದಿನಂತಿಲ್ಲ ಎಂಬುದೇ ಯುದ್ಧದ ಭಯ ಹೆಚ್ಚಲು ಮತ್ತು ಅಪಾರ ಆತಂಕಕ್ಕೆ ಕಾರಣ. 
  
ಉಗ್ರವಾದ, ಭಯೋತ್ಪಾದನೆ, ಸರ್ವಾಧಿಕಾರಗಳನ್ನು ಸದೆಬಡಿಯುವ ಇರಾಕ್‌ ಮೇಲಿನ ಯುದ್ಧ, ತಾಲಿಬಾನ್‌ ವಿರುದ್ಧದ ಸಮರ, ಈಚೆಗಿನ ಸಿರಿಯಾ ಮೇಲಿನ ಕ್ಷಿಪಣಿ ದಾಳಿಯಂತಹ ಸನ್ನಿವೇಶಗಳಲ್ಲಿ ಸಣ್ಣಪುಟ್ಟ ಅಪಸ್ವರಗಳನ್ನು ಹೊರತುಪಡಿಸಿದರೆ ಜಾಗತಿಕ ರಾಷ್ಟ್ರಗಳು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಬೆಂಬಲಕ್ಕೆ ನಿಂತಿದ್ದವು. ಆದರೆ, ಕೊರಿಯಾ ಪರ್ಯಾಯ ದ್ವೀಪದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಚೀನ, ರಶ್ಯಗಳೊಂದಿಗೆ ಅದು ಗಡಿಗಳನ್ನು ಹಂಚಿಕೊಂಡಿದೆ. ತಾನೇ ಪರಮ ಶತ್ರುಗಳಾದ ದ. ಕೊರಿಯಾ ಮತ್ತು ಉ. ಕೊರಿಯಾ ಆಗಿ ಇಬ್ಭಾಗವಾಗಿದೆ. ಅಲ್ಲದೆ, ಅನೇಕ ದೇಶಗಳ ವ್ಯಾಪಾರ, ಮಿಲಿಟರಿ ಹಿತಾಸಕ್ತಿಗಳನ್ನು ಹೊಂದಿರುವ ಸಮುದ್ರ ಕಿನಾರೆಗಳಿಂದ ಸುತ್ತುವರಿದಿದೆ. ಹೀಗಾಗಿ ಅಲ್ಲಿ ಉದ್ಭವಿಸುವ ಯುದ್ಧದಂತಹ ಬಿಕ್ಕಟ್ಟು ಯಾವ ಬಗೆಯ ಜಾಗತಿಕ ಶಕ್ತಿ ಧ್ರುವೀಕರಣಗಳಿಗೆ ಕಾರಣವಾಗಬಹುದು ಅನ್ನುವುದನ್ನು ಊಹಿಸುವುದು ಸುಲಭವಲ್ಲ. ಈಗ ಈ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಮಧ್ಯಸ್ಥಿಕೆದಾರನ ಪಾತ್ರ ವಹಿಸುವುದಾಗಿ ಹೇಳುತ್ತಿರುವ ಚೀನ, ಟ್ರಂಪ್‌ ಅಧ್ಯಕ್ಷರಾದ ಬಳಿಕ ಅಮೆರಿಕದ ಜತೆಗೆ ಸೌಹಾರ್ದಸಂಬಂಧ ಹೊಂದಿಲ್ಲದ ರಶ್ಯ ಯಾವ ನಿಲುವು ತಾಳಬಹುದು ಅನ್ನುವುದು ಅನೂಹ್ಯ. 

ತಾರಕ ಸ್ಥಿತಿಯಲ್ಲಿರುವ ಕೊರಿಯಾ ಬಿಕ್ಕಟ್ಟು ಕಳವಳ ಉಂಟುಮಾಡಿರುವುದು ಹೀಗೆ. ಅತ್ಯಾಧುನಿಕ ಅಣ್ವಸ್ತ್ರ ಸಹಿತ ಶಸ್ತ್ರಾಸ್ತ್ರಗಳಿದ್ದರೂ ಈಗಿನ ಸನ್ನಿವೇಶದಲ್ಲಿ ಯಾವುದೇ ದೇಶದ ಮೇಲೆ ಯುದ್ಧ ಸಾರುವುದು ಬಿಕ್ಕಟ್ಟಿಗೆ ಪರಿಹಾರವಾಗದು. ಅದು ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತದೆ. ಈ ಅಂಶವನ್ನು ಮನಗಂಡು ಅಮೆರಿಕ ಸಹಿತ ಜಾಗತಿಕ ರಾಷ್ಟ್ರಗಳು ಅನ್ಯ ರೀತಿಗಳಲ್ಲಿ ಉ. ಕೊರಿಯಾವನ್ನು ಮಣಿಸುವ ಪ್ರಯತ್ನ ಮಾಡಬೇಕು. ಹಿಂದೆ ಒಬಾಮಾ ಅಧ್ಯಕ್ಷರಾಗಿದ್ದಾಗ ಉ. ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮಗಳನ್ನು ಭಂಗಗೊಳಿಸುವ ಸೈಬರ್‌ ಯುದ್ಧಕ್ಕೆ ಮುಂದಾಗಿದ್ದರು. ಪ್ರಾಯಃ ಇಂತಹ ವಿಧಾನಗಳಿಗೆ ಮತ್ತು ಇನ್ನಷ್ಟು ಕಠಿಣ ನಿರ್ಬಂಧಗಳಿಗೆ ಮುಂದಾಗಬೇಕೇ ಹೊರತು ಯುದ್ಧವನ್ನು ಕಟ್ಟಕಡೆಯ ಆಯ್ಕೆಯಾಗಿ ಇರಿಸಿಕೊಳ್ಳಬೇಕು. ಅದು ಮನಕುಲದ ಹಿತದೃಷ್ಟಿಯಿಂದ ಅತ್ಯಗತ್ಯ. 

Advertisement

Udayavani is now on Telegram. Click here to join our channel and stay updated with the latest news.

Next