ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಚುನಾವಣೆ ವೇಳೆ ವಿಶೇಷ ಬೇಡಿಕೆಯನ್ನಿಟ್ಟಿದ್ದು, ಪ್ರತಿ ಗುಡಿಸಲಿನಲ್ಲೂ ಭೂಮಿ, ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಕರಪತ್ರವನ್ನು ಅಳವಡಿಸಿದ್ದಾರೆ.
ಅನೇಕ ವರ್ಷಗಳಿಂದ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಸೇರಿದಂತೆ ತಾಲೂಕಿನ ಇತರೆ ಹೋಬಳಿಯ ಅಲೆಮಾರಿ ಕುಟುಂಬಗಳು ನಿವೇಶನ ವಸತಿಗಾಗಿ ಜನಪ್ರತಿನಿಧಿಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸೂರು ಕಲ್ಪಿಸಿಕೊಡಲು ಅಲೆದು ಕಂಗಾಲಾಗಿದ್ದೇವೆ, ಹಾಗಾಗಿ ಈ ಬಾರಿ 2023 ನೇ ಮೇ 10 ನೇ ದಿನಾಂಕದಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಅಥವಾ ಮುಖಂಡರುಗಳು ನಮ್ಮಲ್ಲಿ ಮತ ಕೇಳಲು ಬಂದಾಗ ನಾವುಗಳು ನಮ್ಮ ಮತಗಳನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬಾರದೆಂದು ತೀರ್ಮಾನಿಸಿದ್ದು, ಜೊತೆಗೆ ಭೂಮಿ ವಸತಿ ಕೊಡದೆ ನಾವು ನಮ್ಮ ಮತಗಳನ್ನು ನೀಡಬಾರದೆಂದು ನಿರ್ಧರಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.
ನಾವುಗಳು ವಾಸವಿರುವ ಜಾಗಗಳಲ್ಲಿ ಫ್ಲೆಕ್ಸ್ ಮತ್ತು ಮನೆಗಳ ಬಾಗಿಲುಗಳಿಗೆ ಪ್ಲೇ ಕಾರ್ಡ್ ಗಳನ್ನು ಹಾಕಿ, “ಭೂಮಿ ವಸತಿ ಕೊಡದೆ ನಮ್ಮ ವೋಟು ಕೊಡೆವು” ಎಂಬ ಅಭಿಯಾನದೊಂದಿಗೆ ಹೋರಾಟವನ್ನು ಪ್ರಾರಂಭಿಸಿದ್ದು ನಮ್ಮ ಮತಗಳು ಬೇಕಾದವರು ಗೆದ್ದ ನಂತರ ಭೂಮಿ ವಸತಿ ನೀಡುತ್ತೇವೆಂದು ಕರಾರಿನೊಂದಿಗೆ ಬಂದಲ್ಲಿ ಹಣ ಹೆಂಡ ಪಡೆಯದೆ ನಾವು ನಮ್ಮ ಮತ ನೀಡುತ್ತೇವೆ ಹುಲಿಕುಂಟೆ ಗ್ರಾಮದ ನಿವೇಶನ ವಸತಿರಹಿತ ಅಲೆಮಾರಿ ಕುಟುಂಬಗಳು ತಿಳಿಸಿವೆ.
ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ನ ಮತ್ತಿಬ್ಬರು ಶಾಸಕರು BJP ಯತ್ತ : ಅಮಿತ್ ಪಾಲೇಕರ್