Advertisement

‘ವೆಕ್ಟರ್‌ ಪೈಂಟಿಂಗ್‌’ನಲ್ಲಿ ಸಿದ್ಧವಾದ ಸ್ವಾಮಿ ಕೊರಗಜ್ಜನ ಚಿತ್ರ 

04:34 AM Feb 15, 2019 | |

ಮಹಾನಗರ: ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್‌ ಪೈಂಟಿಂಗ್‌ ಇದೀಗ ಕರಾವಳಿಯಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ, ಈ ಚಿತ್ರವನ್ನು ಬಿಡಿಸಿದವರು ಮಂಗಳೂರು ಮೂಲದ ಎಸ್‌.ಜೆ. ಶಶಾಂಕ್‌ ಆಚಾರ್ಯ.

Advertisement

ಈ ಹಿಂದೆ ಮಂಗಳೂರಿನ ಕರಣ್‌ ಆಚಾರ್ಯ ಅವರ ಆ್ಯಂಗ್ರಿ ಹನುಮಾನ್‌, ರಾಮಾಣನ ರೂಪದ ಚಿತ್ರಗಳು ದೇಶ ವಿದೇಶಗಳಲ್ಲಿ ಖ್ಯಾತಿಗೊಂಡಿದ್ದವು. ಇದೀಗ ಕರಾವಳಿ ಮೂಲದ ಮತ್ತೊಬ್ಬ ಕಲಾವಿದ ಎಸ್‌.ಜೆ. ಶಶಾಂಕ್‌ ಆಚಾರ್ಯ ಅವರು ಅದೇ ರೀತಿ ಕೊರಗಜ್ಜನ ಚಿತ್ರ ನಿರ್ಮಿಸಿ ಶಹಬ್ಟಾಸ್‌ ಎನಿಸಿಕೊಂಡಿದ್ದಾರೆ. ನಗರದ ರಥಬೀದಿಯಲ್ಲಿ ಡಿಸೈನ್‌ ಸ್ಟುಡಿಯೋ ಹೊಂದಿರುವ ಅವರು ಕೊರಗಜ್ಜನ ಪೈಂಟಿಂಗ್‌ ಪೂರ್ಣಗೊಳಿಸಲು
ತೆಗೆದುಕೊಂಡಿರುವುದು ಕೇವಲ ಒಂದು ದಿನ. ಶಶಾಂಕ್‌ ಅವರು ಎಂದಿನಂತೆ ತಮ್ಮ ಕಚೇರಿಗೆ ಬಂದಾಗ ಯೂಟ್ಯೂಬ್‌ನಲ್ಲಿ ಕೊರಗಜ್ಜನ ಮಹಿಮೆ ಸಾರುವ ಹಾಡು ಕೇಳುತ್ತಿದ್ದರು. ಇದೇ ಸಮಯದಲ್ಲಿ ತಮ್ಮ ಕಂಪ್ಯೂಟರ್‌ ಮುಂದೆ ಕೂತು ಮೊದಲಿಗೆ ಫೋಟೊಶಾಪ್‌ನಲ್ಲಿ ಬಿಳಿಯ ಖಾಲಿ ಪುಟಕ್ಕೆ ಕಪ್ಪು ಬಣ್ಣ ಹಾಕಿ ಮೂರು ನಾಮ ಬಿಡಿಸಿದರು. ಆ ಚಿತ್ರವು ಕೊರಗಜ್ಜನನ್ನು ಹೋಲುತ್ತಿತ್ತು. ಈ ಚಿತ್ರಕ್ಕೆ ಮತ್ತಷ್ಟು ಶ್ರಮ ಹಾಕಿ ಕೊರಗಜ್ಜನ ಸುಂದರ ಪೈಂಟಿಂಗ್‌ ಮಾಡುವ ಹಠ ತೊಟ್ಟರು. ಅದರಂತೆಯೇ ಒಂದೇ ದಿನದಲ್ಲಿ ಚಿತ್ರ ಕೂಡ ಸಿದ್ಧವಾಯಿತು.  ಅವರು ಚಿತ್ರ ಬಿಡಿಸಲು ಪ್ರಾರಂಭಿಸಿದ್ದು, ಬೆಳಗ್ಗೆ 8 ಗಂಟೆಗೆ. ಅದೇ ದಿನ ರಾತ್ರಿ 11 ಗಂಟೆಗೆ ಚಿತ್ರ ಪೂರ್ಣಗೊಂಡಿತು.

ಚಿತ್ರವನ್ನು ಬಿಡಿಸಲು ಯಾವುದೇ ಪೈಂಟಿಂಗ್‌, ಫೋಟೋವನ್ನು ಆಧಾರವಾಗಿರಿಸಲಿಲ್ಲ. ಬದಲಾಗಿ, ತಮ್ಮ ಕಲ್ಪನೆಯ ಕೊರಗಜ್ಜನನ್ನು ಚಿತ್ರದ ಮೂಲಕ ಬಟ್ಟಿ ಇಳಿಸಿದ್ದಾರೆ. ಫೋಟೊಶಾಪ್‌ನಲ್ಲಿ ಪೆನ್‌ ಟೂಲ್‌ ಮತ್ತು ಬ್ರಶ್‌ ಟೂಲ್‌ ಉಪಯೋಗಿಸಿ ಚಿತ್ರ ರಚನೆ ಮಾಡಲಾಗಿದೆ.

ಚಿತ್ರಕ್ಕೆ ಕಪ್ಪು, ಹಳದಿ, ಬೂದು, ಬಿಳಿ, ಕೆಂಪು ಬಣ್ಣವನ್ನು ಬಳಸಲಾಗಿದೆ. ತಲೆಯಲ್ಲಿ ಚಿನ್ನದ ಮುಟ್ಟಾಳೆ, ನಾಗನ ಹೆಡೆ, ಕುತ್ತಿಗೆಗೆ ಹೂವಿನ ಮಾಲೆ, ಹಣೆಗೆ ವಿಭೂತಿಯ ನಾಮವನ್ನು ಚಿತ್ರದಲ್ಲಿ ಬಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು, ಮಂತ್ರ ದೇವತೆ, ಭಾರತ ಮಾತೆ ಮತ್ತಿತರ ವೆಕ್ಟರ್‌ ಪೈಂಟಿಂಗ್‌ ರಚನೆ ಮಾಡುವ ಚಿಂತನೆಯಲ್ಲಿದ್ದಾರೆ.

ಪೈಂಟಿಂಗ್‌ಗೆ ಬೇಡಿಕೆ ಹೆಚ್ಚಾಗಿದೆ 
ಶಶಾಂಕ್‌ ಆಚಾರ್ಯ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ವಿಶೇಷತೆಯಿಂದ ಕೂಡಿದ ಕೊರಗಜ್ಜನ ಮುಖವರ್ಣಿಕೆಯ ವೆಕ್ಟರ್‌ ಪೈಂಟಿಂಗ್‌ ಗೆಬೇಡಿಕೆ ಹೆಚ್ಚಾಗುತ್ತಿದೆ. ಈ ಫೋಟೋಗೆ ಫ್ರೇಮ್‌ ಹಾಕಿಕೊಡುವಂತೆಯೂ ಅನೇಕ ಮಂದಿ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವರು ಈ ಚಿತ್ರದ ಮೂಲ ಚಿತ್ರವನ್ನು ಕಳುಹಿಸಿಕೊಡುವಂತೆ ಕೇಳುತ್ತಿದ್ದಾರೆ. ನನ್ನ ಈ ಪ್ರಯತ್ನಕ್ಕೆ ತಂದೆ ಜಗದೀಶ್‌ ಆಚಾರ್‌ ಸಿದ್ದಕಟ್ಟೆ, ತಾಯಿ ಶ್ಯಾಮಲಾ ಅವರು ಪ್ರೋತ್ಸಾಹಿಸುತ್ತಿದ್ದಾರೆ ಎಂದಿದ್ದಾರೆ.

Advertisement

ಮೊದಲ ಪ್ರಯತ್ನ
ನಾನು ಈ ಹಿಂದೆ ಅನೇಕ ಲೋಗೊಗಳನ್ನು, ಜಾಹೀರಾತಿಗಾಗಿ ಚಿತ್ರಗಳನ್ನು ಬಿಡಿಸುತ್ತಿದ್ದೆ. ಪೂರ್ಣಪ್ರಮಾಣದ ಡಿಜಿಟಲ್‌ ಆರ್ಟ್‌ ಮಾಡಿದ್ದು ಇದೇ ಮೊದಲು. ಈ ಚಿತ್ರ ಇಷ್ಟು ಖ್ಯಾತಿ ಪಡೆಯುತ್ತದೆ ಎಂದು ಊಹಿಸಿರಲಿಲ್ಲ. ನಾನು ಬಿಡಿಸಿದ ಚಿತ್ರ ಎಂದು ಗುರುತಿಸುವಾಗ ಖುಷಿಯಾಗುತ್ತದೆ.
– ಶಶಾಂಕ್‌ ಆಚಾರ್ಯ, ಚಿತ್ರ ಕಲಾವಿದ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next