Advertisement

ಕೊರಗರಿಗೆ ಕೃಷಿ ಜಮೀನು ಮಂಜೂರಾತಿ; ತಾ|ಸಮಿತಿ ಪುನರ್‌ ರಚನೆ

08:24 PM Oct 11, 2021 | Team Udayavani |

ವಿಶೇಷ ವರದಿಪುತ್ತೂರು: ಹದಿಮೂರು ವರ್ಷಗಳ ಅನಂತರ ಕೊರಗ ಸಮುದಾಯದವರಿಗೆ ದ.ಕ. ಜಿಲ್ಲೆಯಲ್ಲಿ ಕೃಷಿ ಜಮೀನು ಮಂಜೂರು ಮಾಡುವ ಸಲುವಾಗಿ ತಾಲೂಕು ಮಟ್ಟದ ಸಮಿತಿ ಪುನರ್‌ ರಚಿಸಲು ಜಿಲ್ಲಾಡಳಿತ ನಿರ್ದೇಶನ ನೀಡಿದೆ.

Advertisement

ಬುಟ್ಟಿ ಸೇರಿದಂತೆ ಕಾಡುತ್ಪತ್ತಿ ಸಂಗ್ರಹಿಸುವ ಮೂಲ ಕಸುಬನ್ನೇ ನೆಚ್ಚಿ ಕೊಂಡಿರುವ ಕೊರಗ ಸಮುದಾಯವು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಆ ಕುಟುಂಬಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಜಮೀನು ನೀಡಲು ಹೊಸ ಸಮಿತಿ ರಚನೆಗೆ ಮುಂದಡಿ ಇಡಲಾಗಿದೆ.

ಕೃಷಿ ಜಮೀನು
ತಹಶೀಲ್ದಾರ್‌ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮಿತಿ ರಚಿಸಬೇಕು. ಈ ಸಮಿತಿಯು ಸರಕಾರಿ ಜಮೀನುಗಳನ್ನು ಗುರುತಿಸಿ ಅವುಗಳ ಪೈಕಿ ಕೃಷಿ ಯೋಗ್ಯ ಜಮೀನುಗಳನ್ನು ಕೊರಗ ಸಂಘಟನೆಗಳ ಒಕ್ಕೂಟದ ವಿವಿಧ ತಾಲೂಕುಗಳ ಪದಾಧಿಕಾರಿಗಳು ಮತ್ತು ತಹಶೀಲ್ದಾರ್‌ ಜಂಟಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿ ಮಂಜೂರು ಪ್ರಸ್ತಾವನೆ ಸಲ್ಲಿಸಬೇಕು.

ಹದಿಮೂರು ವರ್ಷದ
ಬಳಿಕ ಪುನರ್‌ ರಚನೆ
ದ.ಕ.ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಮೂಲ ನಿವಾಸಿ ಕೊರಗ ಸಮುದಾಯದ ಕುಟುಂಬಗಳಿಗೆ ಕೃಷಿ ಜಮೀನು ಹಂಚಿಕೆ ಕುರಿತು 2007-08ನೇ ಸಾಲಿನಲ್ಲಿ ಡಾ| ಮಹಮ್ಮದ್‌ ಪೀರ್‌ ವರದಿ ಅನ್ವಯ ಜಿಲ್ಲೆಯ ಕೆಲವೊಂದು ಕುಟುಂಬಗಳಿಗೆ ಕೃಷಿ ಜಮೀನು ಹಂಚಿಕೆ ಮಾಡಿತ್ತು. ಅನಂತರದ ದಿನಗಳಲ್ಲಿ ಕೊರಗ ಸಮುದಾಯದವರಿಗೆ ಕೃಷಿ ಜಮೀನನ್ನು ಹಂಚಿಕೆ ಮಾಡಿಲ್ಲ. ಹಾಗಾಗಿ ಹಳೆ ತಾಲೂಕು ಮಟ್ಟದ ಸಮಿತಿಯನ್ನು ಪುನರ್‌ ರಚಿಸಲು ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿ ನಿರ್ಧರಿಸಿ ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಭಾರಿ ಮಳೆಗೆ ಗೋಡೆ ಕುಸಿತ | ಮೂರು ಮಂದಿಗೆ ಗಾಯ

Advertisement

ಕೊರಗರ ಸಂಖ್ಯೆ ಇಳಿಕೆ
ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದವರು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿದ್ದಾರೆ. ಈ ಸಮುದಾಯದ ಈಗಿರುವ ಒಟ್ಟು ಜನಸಂಖ್ಯೆ ಕೇವಲ 16 ಸಾವಿರ. ದ.ಕ. ಜಿಲ್ಲೆಯಲ್ಲಿ ಇರುವ ಕೊರಗರ ಸಂಖ್ಯೆ ಕೇವಲ 4,818.

ಸ್ವಾತಂತ್ರ್ಯ ಪೂರ್ವದಲ್ಲಿ (ಬ್ರಿಟಿಷ್‌ ಆಡಳಿತದ ದಾಖಲೆಗಳ ಪ್ರಕಾರ) ಕೊರಗರ ಒಟ್ಟು ಜನಸಂಖ್ಯೆ 55,000 ಇತ್ತು. ಸ್ವಾತಂತ್ರ್ಯ ಅನಂತರ ಸರಕಾರ ನಡೆಸಿದ ಜನಗಣತಿಯಲ್ಲಿ ಕೊರಗ ಸಮುದಾಯದ ಜನಸಂಖ್ಯೆ 35 ಸಾವಿರ ಆಗಿತ್ತು. ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಿರುವ ಸಮುದಾಯಗಳಲ್ಲಿ ಕೊರಗ ಸಮುದಾಯ ಮುಂಚೂಣಿಯಲ್ಲಿದೆ.

ಜಮೀನು ಗುರುತು
ಪರಿಶಿಷ್ಟ ಪಂಗಡದ ಮೂಲ ನಿವಾಸಿ ಕೊರಗ ಸಮುದಾಯದವರಿಗೆ ಕೃಷಿ ಜಮೀನು ಮಂಜೂರು ಮಾಡುವ ಸಲುವಾಗಿ ಈ ಹಿಂದೆ ರಚಿಸಿರುವ ಸಮಿತಿಯನ್ನು ಪುನರ್‌ ರಚಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಸಮಿತಿ ರಚಿಸಿ ಜಮೀನು ಗುರುತಿಸಲಾಗುತ್ತದೆ.
ರಮೇಶ್‌ ಬಾಬು,
ತಹಶೀಲ್ದಾರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next