Advertisement

ದಾಸೋಹಕ್ಕೆ ಭಕ್ತರಿಂದ ದವಸ-ಧಾನ್ಯ

10:24 AM Jan 15, 2019 | |

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಮಹಾ ರಥೋತ್ಸವಕ್ಕೆ ಆಗಮಿಸುವ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುವ ಭಕ್ತ ಸಮೂಹದ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಾತ್ರೋತ್ಸವಕ್ಕೂ ಮುನ್ನ ನಡೆಯುವ ತೆಪ್ಪೋತ್ಸವಕ್ಕೆ ಕೆರೆ ಸಿದ್ಧಗೊಳಿಸಲಾಗಿದೆ. ದಾಸೋಹಕ್ಕೂ ಭಕ್ತ ಸಮೂಹದಿಂದ ಧವಸ-ಧಾನ್ಯ ಹರಿದು ಬರುತ್ತಿದೆ.

Advertisement

ಹೊಸಪೇಟೆ, ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗೆ ಕುಟೀರ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದಿಂದ ಗೋಪನಕೊಪ್ಪ ಆಸ್ಪತ್ರೆಯ ಬದಿಯ ಮೂಲಕ ಡಾಲರ್ಸ್‌ ಕಾಲೋನಿಯಿಂದ ನೇರವಾಗಿ ಮಠದ ಹತ್ತಿರ ಬರಲು ಹೊಸ ರಸ್ತೆ ನಿರ್ಮಾಣವಾಗಿದೆ. ಅಲ್ಲಿ ದ್ವಿಚಕ್ರ, ಕಾರು, ಟ್ರ್ಯಾಕ್ಟರ್‌, ಲಾರಿಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ಕುಷ್ಟಗಿ ರೈಲ್ವೆ ಗೇಟ್ ಮತ್ತು ಬಜಾಜ್‌ ಶೋರೂಂ ಹಿಂದುಗಡೆ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಹಳೆಯ ಸಾರ್ವಜನಿಕ ಮೈದಾನ, ಎಪಿಎಂಸಿ ಯಾರ್ಡ್‌ನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕುಣಿಕೇರಿ ಮತ್ತು ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಶ್ರೀಮಠದ ಹಿಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸಿಂದೋಗಿ, ಗೊಂಡಬಾಳ ಕಡೆಯಿಂದ ಗಡಿಯಾರ ಕಂಬದ ಮೂಲಕ ಬರುವ ವಾಹನಗಳಿಗೆ ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವರ್ಷ ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಪಾಲ್ಗೊಳ್ಳುವುದರಿಂದ ರಥೋತ್ಸವ ಜರುಗಲಿರುವ ಮೈದಾನದ ಒಳಗಡೆ ಶಾಂತಿ ಹಾಗೂ ಶಿಸ್ತಿನ ಅಗತ್ಯವಿದೆ. ಆದ್ದರಿಂದ ಎತ್ತಿನ ಬಂಡಿಗಳನ್ನು, ದ್ವಿಚಕ್ರ, ಕಾರು, ಟ್ರ್ಯಾಕ್ಟರ್‌, ಟಂಟಂ ಹಾಗೂ ಲಾರಿಗಳನ್ನು ಆಯಾ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿ ನಂತರ ಮೈದಾನದ ಒಳಗಡೆ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಬೇಕು.

ತೆಪ್ಪೋತ್ಸವಕ್ಕೆ ಕೆರೆ ಸಿದ್ಧ: ಜಾತ್ರಾ ಮಹೋತ್ಸವದ ಅಂಗವಾಗಿ ಜ. 19ರಂದು ಜರುಗುವ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಶ್ರೀ ಗವಿಮಠದ ಕೆರೆಯು ಸಂಪೂರ್ಣ ಸಿದ್ಧಗೊಳ್ಳುತ್ತಿದೆ. 4.20 ಎಕರೆ ವಿಶಾಲವಾದ ಜಾಗೆಯಲ್ಲಿ ಪುನರ್‌ ನಿರ್ಮಾಣಗೊಂಡಿದೆ. 600 ಅಡಿ ಉದ್ದ 280 ಅಡಿ ಅಗಲ ಮತ್ತು 18 ಅಡಿ ಆಳವಿರುವ ಈ ಕೆರೆಯು 4.86 ಕೋಟಿ ಲೀಟರ್‌ಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕಾಸನಕಂಡಿ ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿಯಿಂದ ಕೆರೆಗೆ ನೀರನ್ನು ತುಂಬಿಸಿಕೊಳ್ಳಲಾಗುತ್ತಿದೆ. ತುಂಬಿರುವ ಈ ಕೆರೆಯ ಮಧ್ಯಭಾಗದಲ್ಲಿನ ಮಂದಿರದಲ್ಲಿ ಗವಿಮಠದ 15ನೇ ಪೀಠಾಧಿಪತಿ ಲಿಂ.ಶ್ರೀ ಶಿವಶಾಂತವೀರ ಸ್ವಾಮಿಗಳ ಮೂರ್ತಿಯಿದ್ದು, ದರ್ಶನಕ್ಕೆ ಹೋಗಿ ಬರಲು ಭಕ್ತರಿಗೆ ಸೇತುವೆ ನಿರ್ಮಾಣ ಮಾಡಲಾಗಿದೆ. ನೀರಿನಿಂದ ತುಂಬಿರುವ ಈ ಕೆರೆಯು ಪ್ರಕೃತಿಯ ರಮ್ಯತೆಯನ್ನು ಮೆರೆಯುತ್ತಿದೆ. ಈ ಕೆರೆಯಲ್ಲಿ ಜ. 19ರಂದು ತೆಪ್ಪೋತ್ಸವ ಕಾರ್ಯಕ್ರಮ ಸಂಜೆ 5ಕ್ಕೆ ಜರುಗಲಿದೆ. ಅಂದು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಮತ್ತಷ್ಟು ಮೆರಗನ್ನು ಹೆಚ್ಚಿಸಲಿದೆ.

Advertisement

ಜಾತ್ರೆ ಮಹಾದಾಸೋಹಕ್ಕೆ ಈಗಾಗಲೇ ದವಸ-ಧಾನ್ಯ, ರೊಟ್ಟಿಗಳನ್ನು ಭಕ್ತರು ಅರ್ಪಿಸುತ್ತಿದ್ದಾರೆ. ಸೋಮವಾರ ಕಾಮನೂರಿನ ಭಕ್ತರು 5 ಕ್ವಿಂಟಾಲ್‌ ಜೋಳ, 10 ಸಾವಿರ ರೊಟ್ಟಿ, ದವಸ-ಧಾನ್ಯ, ಚಿಕ್ಕಬೊಮ್ಮನಾಳ ಗ್ರಾಮದ ಭಕ್ತರು 3 ಸಾವಿರ ರೊಟ್ಟಿ, ದವಸ ಧಾನ್ಯಗಳು, ಆಗೋಲಿ ಗ್ರಾಮದ ಭಕ್ತರಿಂದ 500 ರೊಟ್ಟಿ, ದವಸ-ಧಾನ್ಯ, ನಿಡಶೇಸಿ ಗ್ರಾಮದ ಭಕ್ತರು 6 ಸಾವಿರ ರೊಟ್ಟಿಗಳು, ಕೆಸಲಾಪುರ ಗ್ರಾಮದಿಂದ 500 ರೊಟ್ಟಿ, ದವಸ-ಧಾನ್ಯ ಗವಿಮಠದ ಮಹಾದಾಸೋಹಕ್ಕೆ ಸಮರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next