Advertisement

ಬಾಲ್ಯವಿವಾಹ ತಡೆಗೆ ಕೈ ಜೋಡಿಸಿ

10:14 AM Jan 18, 2019 | Team Udayavani |

ಕೊಪ್ಪಳ: ಬಾಲ್ಯವಿವಾಹ ಕಾನೂನು ಬಾಹಿರವಾದ್ದು, ಇದರ ನಿರ್ಮೂಲನೆ ಮತ್ತು ಕೊಪ್ಪಳ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಸಂಕಲ್ಪಕ್ಕೆ ಕೈಜೋಡಿಸಿ ಎಂದು ಜಿಪಂ ಸಿಇಒ ವೆಂಕಟರಾಜಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Advertisement

ಕೊಪ್ಪಳ ಜಿಲ್ಲಾಡಳಿತದಿಂದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಸರ್ಕಾರಿ ಶಾಲೆಗಳ ಉನ್ನತೀಕರಣ ಮತ್ತು ಹಳೇ ವಿದ್ಯಾರ್ಥಿ ಸಂಘಗಳ ಬಲವರ್ಧನೆ ಹಾಗೂ ಸ್ವಚ್ಛ ಭಾರತ್‌ ಆಂದೋಲನ್‌ ಕುರಿತು ಸಂದಿಗ್ಧ ಚಲನಚಿತ್ರ ತಂಡದೊಂದಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯವಿವಾಹದಿಂದ ಅಪೌಷ್ಟಿಕತೆ, ಆರೋಗ್ಯದ ಮೇಲೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಅದನ್ನು ತಡೆಯಲು ವಿದ್ಯಾರ್ಥಿಗಳ ಸಹಕಾರ ಅತಿ ಮುಖ್ಯವಾಗಿದೆ. ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮತ್ತು ಕಾಲೇಜು ಮಕ್ಕಳು ಸಂದಿಗ್ಧ ಚಿತ್ರವನ್ನು ಕಡ್ಡಾಯವಾಗಿ ವೀಕ್ಷಿಸಬೇಕು. ಅಲ್ಲದೇ ತಮ್ಮ ಪಾಲಕರು ಸಹ ಈ ಚಿತ್ರದ ವೀಕ್ಷಣೆ ಮಾಡುವಂತೆ ಅವರಿಗೆ ಮನವರಿಕೆ ಮಾಡಿ. ಜಿಲ್ಲೆಯ ಸಾರ್ವಜನಿಕರೆಲ್ಲರಿಗೂ ಸಂದಿಗ್ಧ ಚಿತ್ರ ವೀಕ್ಷಿಸಬೇಕಾಗಿದ್ದು, ಜಿಲ್ಲೆಯ 22 ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಜ. 30ರೊಳಗಾಗಿ ಸುಮಾರು 1.5 ಲಕ್ಷದಿಂದ 2 ಲಕ್ಷದ ಜನರು ಈ ಚಿತ್ರವನ್ನು ವೀಕ್ಷಣೆ ಮಾಡುವ ನಿರೀಕ್ಷೆಯಿದೆ. ಒಂದು ವರ್ಷದೊಳಗೆ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವುದು ಜಿಲ್ಲಾಡಳಿತ ಹಾಗೂ ಜಿಪಂ ಗುರಿಯಾಗಿದೆ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ| ವನೀತಾ ತೊರವಿ ಮಾತನಾಡಿ, ಬಾಲ್ಯವಿವಾಹದಿಂದ ಮಕ್ಕಳ ಭವಿಷ್ಯ ಮತ್ತು ಶಿಕ್ಷಣ ಕುಂಠಿತವಾಗುತ್ತದೆ. ಬಾಲ್ಯವಿವಾಹದಿಂದ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ ಉಂಟಾಗುತ್ತದೆ. ಜಿಲ್ಲೆಯು ಸ್ವಚ್ಛ ಭಾರತ್‌ ಯೋಜನೆಯಡಿ ದೇಶದ ಗಮನವನ್ನು ಸೆಳದಿದೆ. ಜಿಲ್ಲೆಯಲ್ಲಿ ಸುಮಾರು 1500 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಹಾಗೂ ಈ ಕುರಿತು 11 ಎಫ್‌.ಐ.ಆರ್‌. ದಾಖಲಾಗಿದ್ದು, ಕೊಪ್ಪಳವು ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿದೆ. ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತ ಜಿಲ್ಲೆಯಾಗಬೇಕಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದರು. ಮಕ್ಕಳ ಹಕ್ಕುಗಳು ಉಲ್ಲಂಘನೆಯಾದರೆ ವೆಬ್‌ಸೈಟ್ www.kscpcr.com ಮೂಲಕ ದೂರನ್ನು ಅಥವಾ ಟೋಲ್‌ ಫ್ರೀ ನಂಬರ್‌ 1800-425-2900ಕ್ಕೆ ಕರೆ ಮಾಡಿ” ಎಂಬ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌ ಬಿಡುಗಡೆ ಮಾಡಿದರು. ಸಂದಿಗ್ಧ ಚಲನಚಿತ್ರದ ನಿರ್ದೇಶಕ ಸುಚಿಂದ್ರ ಪ್ರಸಾದ, ಬಾಲ ನಟರಾದ ಸಂದಿಗ್ಧ ಚಿತ್ರದ ಬಾಲ ಕಲಾವಿದರಾದ ನಿಶಾಂತ, ರಂಜಿತಾ, ಸಂಜನಾ, ಕಿರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್‌, ಯುನಿಸೆಫ್‌ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ, ಚಿತ್ರನಟ ಮಹೇಶ ದೇವು ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next