ಕೊಪ್ಪಳ: ಲೋಕಸಭೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಇಂದು ಬೆಂಬಲಿಗರ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಬಿಜೆಪಿ ನಾಯಕರಿಗೆ ಮತ್ತೆ ನಾಲ್ಕು ದಿನದ ಗಡುವು ನೀಡಿದ್ದಾರೆ.
ನಾಲ್ಕು ದಿನ ಕಾದು ನೋಡೋಣ. ನನ್ನೊಂದಿಗೆ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಮದಾಸ್ ಮಾತನಾಡಿದ್ದಾರೆ. ಬೊಮ್ಮಾಯಿ, ರಾಮದಾಸ್ ಅವರು ಅಮಿತ್ ಶಾ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ. ಪ್ರಹ್ಲಾದ ಜೋಷಿ ಅವರು ನನ್ನ ಜೊತೆ ಮಾತನಾಡಿದ್ದಾರೆ. ಸಭೆಯಲ್ಲಿ ಯಾವುದೇ ನಿರ್ಧಾರ ಮಾಡದಂತೆ ಸೂಚನೆ ನೀಡಿದ್ದಾರೆ ಎಂದರು.
ನಾಯಕರ ನಡೆ ಬಗ್ಗೆ ನಾಲ್ಕು ದಿನ ಕಾದು ನೋಡುವೆ. ಎಲ್ಲರೂ ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಾಯಕರು ನನ್ನೊಂದಿಗೆ ಮಾತನಾಡಿದ ವಿಷಯ ಎಲ್ಲವೂ ಬಹಿರಂಗವಾಗಿ ಮಾತನಾಡಲು ಆಗದು. ರಾಜ್ಯ ನಾಯಕರ ನಡೆ ಬಗ್ಗೆ ನಾಲ್ಕು ದಿನ ಕಾದು ನೋಡೋಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನನಗೆ ಟಿಕೆಟ್ ತಪ್ಪಿದ್ದು ನನಗೆ ನೋವು ತರಿಸಿಲ್ಲ. ಆದರೆ ನಮ್ಮ ಲೋಕಸಭಾ ಕ್ಷೇತ್ರದ ಬಿಜೆಪಿ ನಾಯಕರ ನಡವಳಿಕೆ ನನಗೆ ನೋವು ತರಿಸಿದೆ. ಸಂಗಣ್ಣ ಕರಡಿ ಬಿಜೆಪಿ ಬಿಟ್ಟರೆ ಪಕ್ಷಕ್ಕೆ ನಷ್ಟವಿಲ್ಲ ಎಂದು ವಿಪ ಮುಖ್ಯ ಸಚೇತಕರು ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಸಂಸದರು ನಮ್ಮನ್ನು ಯಾವುದಕ್ಕೂ ಸಂಪರ್ಕ ಮಾಡಿಲ್ಲ. ಒಬ್ಬ ಸಂಸದನಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಬಿಜೆಪಿ ಜಿಲ್ಲಾ ಕಚೇರಿ ಸುಸಜ್ಜಿತವಿದ್ದರೂ ಕುಷ್ಟಗಿಯಲ್ಲಿ ನಾಯಕರು ಕೋರ್ ಕಮಿಟಿ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನೊಬ್ಬ ಮೋದಿಯ ಅಭಿಮಾನಿ. ಮೋದಿ ದೇಶದ ಅಭಿವೃದ್ಧಿ ಮಾಡಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಜನ ನಿಮಗೆ ಅನ್ಯಾಯವಾಗಿದೆ ಎಂದಿದ್ದಾರೆ. ನಾನು ರಾಜಕೀಯದಲ್ಲಿ ನಾಲ್ಕು ಬಾರಿ ಶಾಸಕನಾಗಿ, ಎರಡು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ತಾಲೂಕು ಬೋರ್ಡ್ ನಿಂದ ಪಾರ್ಲಿಮೆಂಟ್ ವರೆಗೂ ಜನರು ಗೆಲ್ಲಿಸಿದ್ದಾರೆ. ನನಗೆ ರಾಜಕೀಯ ಜೀವನ ತೃಪ್ತಿಯಿದೆ. ನನ್ನ ಮಕ್ಕಳಿಗೂ ಉದ್ಯೋಗ, ಉದ್ಯಮ ಮಾಡಿಕೊಂಡು ಹೋಗಿ ಎಂದು ಹೇಳಿರುವೆ. ನನಗೆ ಏಳು ಕೋಟಿ ಸಾಲವಿದೆ. ಸಾಲಕ್ಕೆ ಕೊಪ್ಪಳದ ಮನೆಯ ಮಾರುವ ಚಿಂತನೆಯೂ ಇದೆ. ಅದೆಲ್ಲವೂ ನನ್ನ ವೈಯಕ್ತಿಕ ವಿಷಯ ಅದನ್ನು ಹೇಳಲು ಹೋಗಲ್ಲ ಎಂದರು.