ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ 17 ಬಾರಿ ಚುನಾವಣೆಯ ಇತಿಹಾಸದಲ್ಲಿ 9 ಬಾರಿ ಕಾಂಗ್ರೆಸ್ ಗೆಲುವು ಕಂಡಿದ್ದರೆ, ಬಿಜೆಪಿ 3 ಬಾರಿ ಗೆದ್ದು ಬೀಗಿದೆ. 2 ಬಾರಿ ಜೆಡಿಎಸ್ ತನ್ನ ಶಕ್ತಿ ತೋರಿದ್ದರೆ ಇನ್ನುಳಿದಂತೆ ಇತರೆ ಪಕ್ಷಗಳು ಸೇರಿದಂತೆ ಪಕ್ಷೇತರರು ಒಂದೊಂದು ಬಾರಿ ಗೆದ್ದಿದ್ದಾರೆ. ಆದರೆ 2009ರಿಂದ ಕ್ಷೇತ್ರದಲ್ಲಿ ಕಮಲ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಕ್ಷೇತ್ರದ ಇತಿಹಾಸ: ಕೊಪ್ಪಳ ಲೋಕಸಭಾ ಕ್ಷೇತ್ರ ವಿಭಿನ್ನತೆಗೆ ಹೆಸರಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದಲ್ಲಿ 1952ರಲ್ಲಿ ಈ ಕ್ಷೇತ್ರವನ್ನು ಕುಷ್ಟಗಿ ಲೋಕಸಭಾ ಕ್ಷೇತ್ರ ಎಂದು ಹೆಸರಿಸಲಾಗಿತ್ತು. ಆಗ ಶಿವಮೂರ್ತಿಸ್ವಾಮಿ ಅಳವಂಡಿ ಪಕ್ಷೇತರ ಲೋಕಸಭಾ ಸದಸ್ಯರಾಗಿ ಸಂಸತ್ ಮೆಟ್ಟಿಲೇರಿ ದ್ದರು. 1957ರಲ್ಲಿ ಈ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ಬದಲಾವಣೆಯಾಗಿ ಹಲವು ಮೈಲುಗಲ್ಲು ಗಳನ್ನು ಕಂಡಿದೆ.
ಕೊಪ್ಪಳ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಂದಿರಾ ಗಾಂಧಿ ಅವರ ಪರಮಾಪ್ತರಾದ ಎಚ್.ಜಿ. ರಾಮುಲು ಈ ಕ್ಷೇತ್ರದಲ್ಲಿ 4 ಬಾರಿ ಗೆಲುವು ಕಂಡು ದಾಖಲೆ ಬರೆದಿದ್ದು, 1991ರಲ್ಲಿ ಸಿದ್ದರಾಮಯ್ಯ ಒಮ್ಮೆ ಲೋಕಸಭೆಗೆ ಸ್ಪರ್ಧಿಸಿ ಇಲ್ಲಿ ಸೋತಿರುವ ಇತಿಹಾಸವೂ ಈ ಕ್ಷೇತ್ರಕ್ಕಿದೆ.
ಕ್ಷೇತ್ರ ವ್ಯಾಪ್ತಿ ಎಷ್ಟು?: ಕೊಪ್ಪಳ ಲೋಕಸಭಾ ಕ್ಷೇತ್ರ ಒಟ್ಟು 8 ಕ್ಷೇತ್ರ ವ್ಯಾಪ್ತಿ ಹೊಂದಿದ್ದು, ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ ಹಾಗೂ ಬಳ್ಳಾರಿ ಜಿಲ್ಲೆಯ ಶಿರ ಗುಪ್ಪಾ ಮತ್ತು ರಾಯಚೂರು ಜಿಲ್ಲೆಯ ಸಿಂಧ ನೂರು, ಮಸ್ಕಿ ಕ್ಷೇತ್ರದವರೆಗೂ ವ್ಯಾಪ್ತಿಯನ್ನು ಹೊಂದಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ ಈ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿಯಿಂದ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿಯಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆಯೂ ಕ್ಷೇತ್ರದಲ್ಲಿ ಇದೇ ವಾತಾವರಣವಿದ್ದು ಬಿಜೆಪಿ ಆಗ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು.
2009ರಿಂದ ಕಮಲ ಅಧಿಪಥ್ಯ: ಕಾಂಗ್ರೆಸ್ ಭದ್ರಕೋಟೆ ಎಂದೆನಿಸಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2009ರಿಂದ ಕಮಲ ಅರಳಿ ಕಳೆದ 3 ಬಾರಿ ಅಧಿಕಾರದ ಗದ್ದುಗೆ ಹಿಡಿದು ಅಧಿಪಥ್ಯ ಸಾಧಿಸಿದೆ. 2009ರಲ್ಲಿ ಶಿವರಾಮೆಗೌಡ ಗೆದ್ದಿದ್ದರೆ, 2014 ಹಾಗೂ 2019ರಲ್ಲಿ ಹಾಲಿ ಸಂಗಣ್ಣ ಕರಡಿ ಗೆದ್ದು ಬೀಗಿದ್ದರು. ಈ ಬಾರಿ ಬಿಜೆಪಿಯಿಂದ ಡಾ| ಬಸವರಾಜ ಕಣಕ್ಕಿಳಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಪ್ರತಿಸ್ಪರ್ಧಿ ರಾಜಶೇಖರ ಹಿಟ್ನಾಳ 38 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈಗ ಮತ್ತೂಮ್ಮೆ ಕಣಕ್ಕಿಳಿದಿದ್ದಾರೆ. ಒಟ್ಟು 18,41,560 ಮತಗ ಳಿದ್ದು, ಅವುಗಳಲ್ಲಿ ಅಂದಾಜು 5 ಲಕ್ಷಕ್ಕೂ ಹೆಚ್ಚು ಲಿಂಗಾಯತ, 4 ಲಕ್ಷ ಕುರುಬ, 4 ಲಕ್ಷ ಎಸ್‌ಸಿ, ಎಸ್‌ಟಿ, 2 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಅಹಿಂದ ಒಳಗಿನ 3 ಲಕ್ಷ ಮತಗಳು ಇತರೆ ಸಣ್ಣ ಸಣ್ಣ ಜಾತಿ ಮತಗಳಿವೆ. ಲಿಂಗಾಯತರ, ಕುರುಬರ, ದಲಿತರ ಹಾಗೂ ಮುಸ್ಲಿಂ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
-ದತ್ತು ಕಮ್ಮಾರ