Advertisement

ಜಿಲ್ಲೆಯತ್ತ ಸುಳಿಯದ ಕೇಂದ್ರದ ಬರ ಅಧ್ಯಯನ ತಂಡ

04:08 PM Nov 18, 2018 | Team Udayavani |

ಕೊಪ್ಪಳ: ರಾಜ್ಯದಲ್ಲಿನ ಬರದ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರವು ಮೂರು ತಂಡಗಳನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ಆದರೆ ಮೂರು ತಂಡಗಳ ಪ್ರವಾಸ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಗೆ ಕೋಕ್‌ ನೀಡಲಾಗಿದೆ. ಬರ ಅಧ್ಯಯನಕ್ಕೆ ಬಾರದೇ ಇರುವುದು ರೈತ ಸಮೂಹದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕೊಪ್ಪಳ ಜಿಲ್ಲೆ ಸದಾ ಬರಪೀಡಿತ ಜಿಲ್ಲೆ. ಕಳೆದ 18 ವರ್ಷಗಳಲ್ಲಿ 12 ವರ್ಷ ಬರವನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ನೀಡಿದೆ. ಆದರೂ ಜಿಲ್ಲೆಯ ಬಗ್ಗೆ ನಿಷ್ಕಾಳಜಿ ವಹಿಸಲಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೂರು ಬರ ಅಧ್ಯಯನ ತಂಡಗಳನ್ನು ಕಳುಹಿಸಿ ಕೊಟ್ಟಿದೆ. ಆ ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಅಧ್ಯಯನ ಆರಂಭಿಸಿದೆ. ಆದರೆ ಈ ಬಾರಿ ಕೊಪ್ಪಳ ಜಿಲ್ಲೆಯನ್ನೇ ಕಡೆಗಣಿಸಿದೆ. ನ.17ರಿಂದ 19ರವರೆಗೂ ನಡೆಸಲಿರುವ ಬರ ಅಧ್ಯಯನ ಪ್ರವಾಸದಲ್ಲಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿಲ್ಲ.

ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.55 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯ ಪೈಕಿ, 1.28 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿತ್ತು. ಇದರಲ್ಲಿ ಮಳೆ ಕೊರತೆಯಿಂದ 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇಂಥ ಪರಿಸ್ಥಿತಿ ಇದ್ದಾಗ ಕೇಂದ್ರ ಬರ ಅಧ್ಯಯನ ತಂಡವು ಇಲ್ಲಿಗೆ ಬಂದು ವಿವಿಧ ರೈತರ ಜಮೀನಿಗೆ ಭೇಟಿ ನೀಡಿ, ರೈತರಿಂದಲೇ ವಾಸ್ತವದ ಮಾಹಿತಿ ಪಡೆದು ಕೇಂದ್ರಕ್ಕೆ ವರದಿ ಸಲ್ಲಿಸಬೇಕಿತ್ತು. ಆದರೆ ಬರ ಅಧ್ಯಯನದ ಬಗ್ಗೆ ಸುಳಿವೇ ಇಲ್ಲದಂತಾಗಿದೆ. ಇಲಾಖೆ ಅಧಿಕಾರಿಗಳ ಪ್ರಕಾರ ಕೇಂದ್ರದ ತಂಡವು ಬರ ಎದುರಿಸುತ್ತಿರುವ ಜಿಲ್ಲೆಗೆ ಭೇಟಿ ನೀಡುವುದನ್ನು ಅವರೇ ಪೂರ್ವನಿಯೋಜಿತವಾಗಿ ನಿರ್ಧರಿಸುತ್ತಾರೆ. ಇಂಡಿಯನ್‌ ಮೆಟ್ರೋಲಾಜಿಕಲ್‌ ವರದಿ ಆಧಾರದಡಿ ಅವರು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ ಎನ್ನುತ್ತಾರೆ.

ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ತಿಂಗಳು ಕಳೆದಿವೆ. ಆದರೆ ಇನ್ನೂ ಬರದ ಕಾಮಗಾರಿ ಆರಂಭಿಸಿಲ್ಲ. ಬಹುತೇಕ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಆರಂಭಿಸಿಲ್ಲ. ಹೀಗಾಗಿ ಜನರು ದುಡಿಮೆ ಅರಸಿ ಗುಳೆ ಹೊರಡುತ್ತಿದ್ದಾರೆ. ಹಿಂಗಾರು ಮಳೆಗಳ ಸುಳಿವೂ ಇಲ್ಲದಂತಾಗಿದೆ. ಜನರ ಜೀವನೋಪಾಯಕ್ಕೆ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ.

ಜಿಲ್ಲೆಯಲ್ಲಿನ ಬರದ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಎರಡು ತಾಲೂಕು ತೀವ್ರ ಬರವಿದೆ. ಕೇಂದ್ರ ಬರ ಅಧ್ಯಯನ ತಂಡವಂತೂ ಜಿಲ್ಲೆಗೆ ಬರುತ್ತಿಲ್ಲ. ಅವರು ಯಾವ ಲೆಕ್ಕಾಚಾರದ ಮೇಲೆ ಜಿಲ್ಲೆಗೆ ಬರುತ್ತಿಲ್ಲ ಎನ್ನುವ ಮಾಹಿತಿ ನಮಗಿಲ್ಲ. ಬಹುಶಃ 2ನೇ ಸುತ್ತಿನಲ್ಲಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.
. ಪಿ. ಸುನೀಲಕುಮಾರ, ಕೊಪ್ಪಳ ಜಿಲ್ಲಾಧಿಕಾರಿ

Advertisement

ಕೇಂದ್ರ ಬರ ಅಧ್ಯಯನ ತಂಡವು ಕೊಪ್ಪಳ ಜಿಲ್ಲೆಗೆ ಬಾರದಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದರಿಂದಲೇ ರೈತರ ಬಗ್ಗೆ ಕೇಂದ್ರದ ಕಾಳಜಿ ಎಷ್ಟಿದೆ ಎಂದು ಗೊತ್ತಾಗಲಿದೆ. ಬಿಜೆಪಿ ನಾಯಕರು ಇದನ್ನು ನೋಡಿಕೊಂಡು ಸುಮ್ಮನಿದ್ದಾರೆ. ಜಿಲ್ಲೆಯ ಜನರು ಬರದ ಪರಿಸ್ಥಿತಿಯಿಂದ ಗುಳೆ ಹೊರಟಿದ್ದಾರೆ. ರಾಜ್ಯ ಸರ್ಕಾರ ಬರದ ಜಿಲ್ಲೆಯಲ್ಲಿ ಇನ್ನೂ ಕಾಮಗಾರಿ ಆರಂಭಿಸಿಲ್ಲ.
. ಹನುಮಂತಪ್ಪ ಹೊಳೆಯಾಚೆ,
ರೈತ ಸಂಘ ಹಾಗೂ ಹಸಿರು ಸೇನೆ ಹೈಕ ವಿಭಾಗದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next