Advertisement

Koppal: ಅನ್ನದಾತನಿಗೆ ಬರಸಿಡಿಲಾಘಾತ- ಬರ ಪರಿಹಾರಕ್ಕೆ ಅಂಗಲಾಚುತ್ತಿರುವ ರೈತರು

06:30 PM Sep 21, 2023 | Team Udayavani |

ಕೊಪ್ಪಳ: ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ ಕೊಪ್ಪಳ ತಾಲೂಕು ಒಳಗೊಂಡಿದೆ. ಇಲ್ಲಿ ಈವರೆಗೂ ಶೇ. 17ರಷ್ಟು ಮುಂಗಾರು ಮಳೆ ಕೊರತೆ ಎದುರಾಗಿ ಬಿತ್ತನೆ ಮಾಡಿದ ಬಹುಪಾಲು ಬೆಳೆ ಒಣಗಿ ಹೋಗಿದ್ದು, “ಬರ’ಸಿಡಿಲಿಗೆ ರೈತ ಕಂಗಾಲಾಗಿದ್ದಾನೆ.

Advertisement

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ತಾಲೂಕಿನ ರೈತ ಸಮೂಹಕ್ಕೆ ಈ ಬಾರಿ ಮಳೆರಾಯ ದೊಡ್ಡ ಬರೆಯನ್ನೇ ಎಳೆದಿದ್ದಾನೆ. ಕೆಲವು ಮಳೆಗಳು ಸುರಿದರೆ, ಇನ್ನು ಕೆಲವು ಮಳೆಗಳು ಆಗಲೇ ಇಲ್ಲ. ಇದರಿಂದ ಮುಂಗಾರು ಹಂಗಾಮಿನ ಬಹುಪಾಲು ಬೆಳೆ ಈಗಾಗಲೇ ಒಣಗಿವೆ.

ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ ಕೊಪ್ಪಳ ತಾಲೂಕಿನಲ್ಲಿ ಭತ್ತ 7072 ಹೆಕ್ಟೇರ್‌, ಜೋಳ 186 ಹೆಕ್ಟೇರ್‌, ಮೆಕ್ಕೆಜೋಳ 34760 ಹೆಕ್ಟೇರ್‌, ಸಜ್ಜೆ 8450 ಹೆಕ್ಟೇರ್‌, ನವಣೆ 230 ಹೆಕ್ಟೇರ್‌ ಸೇರಿದಂತೆ ದ್ವಿದಳ ಧಾನ್ಯ, ಏಕದಳ ದಾನ್ಯ, ಎಣ್ಣೆಕಾಳು ಬೆಳೆ ಸೇರಿದಂತೆ ಒಟ್ಟಾರೆ 62570 ಹೆಕ್ಟೇರ್‌ ಬಿತ್ತನೆಯ ಗುರಿ ಪೈಕಿ 61009 ಹೆಕ್ಟೇರ್‌ ಬಿತ್ತನೆಯಾಗಿದೆ. ಅಂದರೆ ಶೇ. 98ರಷ್ಟು ಬಿತ್ತನೆಯಾಗಿದೆ. ಈ ಪೈಕಿ 57452 ಹೆಕ್ಟೇರ್‌ ಮುಂಗಾರು ಬೆಳೆಯು ಹಾನಿಯಾಗಿದೆ ಎಂದು ಆಡಳಿತ ವರ್ಗ ಅಂದಾಜಿಸಿದೆ. ಇದರಲ್ಲಿ ಮೆಕ್ಕೆಜೋಳವೇ ಬಹುಪಾಲು ಹಾನಿಗೀಡಾಗಿದೆ.

ರೈತ ಸಮೂಹ ಹತ್ತಾರು ಸಾವಿರ ರೂ. ವೆಚ್ಚ ಮಾಡಿ ಬಿತ್ತನೆ ಮಾಡಿತ್ತು. ಆದರೆ ಮಳೆಯಿಲ್ಲದೇ ಬೆಳೆ ಸಂಪೂರ್ಣ ಹಾನಿಯಾಗಿದೆ. ಹೊಲದಲ್ಲಿ ಬೆಳೆ ಒಣಗುತ್ತಿರುವುದನ್ನು ಕಂಡು ರೈತರು ಕಣ್ಣೀರಿಡುತ್ತಲೇ ಅದನ್ನು ಟ್ರಾಕ್ಟರ್‌ ಹಾಗೂ ಎತ್ತುಗಳ ಮೂಲಕ ನಾಶಪಡಿಸುತ್ತಿದ್ದಾರೆ. ಮಳೆಯ ಅವಕೃಪೆಯಿಂದ ನಮ್ಮ ಬದುಕು ಬರಡಾಯಿತು ಎಂದು ಕಣ್ಣೀರಿಡುತ್ತಿದ್ದಾರೆ. ರಾಜ್ಯ ಸರ್ಕಾರ ಸಹ ಕೊಪ್ಪಳ ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಪರಿಹಾರ ಕಾರ್ಯ ಇನ್ನು ಆರಂಭವಾಗಿಲ್ಲ.

ಶೇ. 17ರಷ್ಟು ಮಳೆ ಕೊರತೆ: ಕೊಪ್ಪಳ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ಲೆಕ್ಕಾಚಾರ ಅವಲೋಕಿಸಿದರೆ ಬರೊಬ್ಬರಿ ಶೇ. 17ರಷ್ಟು ಮಳೆ ಕೊರತೆ ಎದುರಾಗಿದೆ. ವಾಡಿಕೆಯಂತೆ ಜೂನ್‌ನಿಂದ ಸೆ. 18ರವರೆಗೂ 344 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 285 ಮಿ.ಮೀ. ಮಳೆಯಾಗಿದೆ. ಅಂದರೆ 17ರಷ್ಟು ಮಳೆ ಕೊರತೆ ಎದುರಾಗಿದೆ. ಆಗಸ್ಟ್‌ ತಿಂಗಳದಲ್ಲಂತೂ ಮಳೆಯ ಕೊರತೆ ಇನ್ನೂ ಹೆಚ್ಚಾಗಿದೆ. ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ಬಹುಪಾಲು ಒಣಗಿದೆ.

Advertisement

2018ರಲ್ಲೂ ಭೀಕರ ಬರ: ಜಿಲ್ಲೆಯಲ್ಲಿ 2018ರಲ್ಲಿ  ಭೀಕರ ಬರದ ಛಾಯೆ ಆವರಿಸಿ ಜನರಲ್ಲಿ ತಲ್ಲಣ ಮೂಡಿಸಿತ್ತು. ಆಗಲೂ ಕೇಂದ್ರ ಅಧ್ಯಯನ ತಂಡವು ಜಿಲ್ಲೆಗೆ ಆಗಮಿಸಿ ಇಲ್ಲಿನ ಬರದ ಭೀಕರತೆ ಅವಲೋಕಿಸಿ ಕೇಂದ್ರಕ್ಕೆ ವರದಿ ಮಾಡಿತ್ತು. ಈಗಲೂ ರೈತ ಸಮೂಹ ಕೇಂದ್ರ ತಂಡ ಆಗಮನದ ನಿರೀಕ್ಷೆಯಲ್ಲಿದೆ. ಅಲ್ಲದೇ, ಬೆಳೆಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿದ್ದೇವೆ. ಸರ್ಕಾರ ನಮಗೆ ಪರಿಹಾರ ಕೊಡಲಿ ಎಂದು ಮನವಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೊಪ್ಪಳ ತಾಲೂಕಿನ ಬರದ ಭೀಕರತೆಗೆ ರೈತ ಸಮೂಹ ಬೆಚ್ಚಿ ಬೀಳುವಂತೆ ಮಾಡಿದೆ. ಸರ್ಕಾರವು ಬರಿ ಬರವಿದೆ ಎಂದು ಘೋಷಣೆ ಮಾಡಿ ಸುಮ್ಮನೆ ಕೂರದೇ ರೈತರಿಗೆ ಪರಿಹಾರ ಕೊಡಲಿ ಎಂದು ರೈತ ಸಮೂಹ ಮನವಿ ಮಾಡುತ್ತಿದೆ.

ತಾಲೂಕಿನಲ್ಲಿ ಬರದ ಪರಿಸ್ಥಿತಿ ಬಿಗಡಾಯಿಸಿದೆ. ಅದರಲ್ಲೂ ಅಳವಂಡಿ, ಬೆಟಗೇರಿ ಭಾಗದಲ್ಲಂತೂ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬಹುಪಾಲು ಬೆಳೆ ಒಣಗಿ ಹೋಗಿದೆ. ಬಿತ್ತನೆ ಮಾಡಿದ ರೈತರು ತಮ್ಮ ಕೈಯಾರೆ ಬೆಳೆ ನಾಶ ಮಾಡಿದ್ದಾರೆ. ಬಿತ್ತಿದ ಬೆಳೆ ಕಮರಿ ಹೋಗಿದೆ. ಸರ್ಕಾರ ನಮಗೆ ಪರಿಹಾರ ಕೊಡುವ ವ್ಯವಸ್ಥೆ ಮಾಡಲಿ.
ಏಳುಕೋಟೇಶ ಕೋಮಲಾಪುರ, ರೈತರು

ನಾವು 10 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ಆದರೆ ಮಳೆಯಾಗಲೇ ಇಲ್ಲ. ಎಕರೆಗೆ 20-25 ಸಾವಿರ ರೂ. ಖರ್ಚು
ಮಾಡಿದ್ದೆವು. ಮಳೆಯಾಗಿದ್ದರೆ ಕನಿಷ್ಟ 10 ಲಕ್ಷದ ಪೀಕು ಬರುತ್ತಿತ್ತು. ಆದರೆ ಮಳೆಯಾಗದ ಕಾರಣ ಟ್ರಾಕ್ಟರ್‌ನಿಂದ ಹರಗಿಸಿದ್ದೇವೆ. ಸರ್ಕಾರ ರೈತರ ಪರ ಹೆಚ್ಚು ಕಾಳಜಿ ವಹಿಸಿ ಹೆಚ್ಚಿನ ಪರಿಹಾರ ನೀಡುವ ವ್ಯವಸ್ಥೆ ಮಾಡಲಿ.
ಶರಣಪ್ಪ ಗುಳದಳ್ಳಿ, ರೈತರು

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next