ಸುಳ್ಯ: ದಕ್ಷಿಣ ಕನ್ನಡ, ಕೊಡಗು ಜಿಲ್ಲಾ ಗಡಿ ಭಾಗದ ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಭಾಗದಲ್ಲಿ ಶನಿವಾರ ಸಂಜೆ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ್ದಾರೆ ಎಂಬ ಮಾಹಿತಿಯಂತೆ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಆಗಮಿಸಿ, ಕೂಂಬಿಂಗ್ ಆರಂಭಿಸಿದ್ದಾರೆ.
ಕಾರ್ಕಳದಿಂದ ಆಗಮಿಸಿದ ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಮೂರು ಕಡೆಗಳಾದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶಕ್ಕೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದಾರೆ. ಕೂಜಿಮಲೆಯಿಂದ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದರು.
ಶನಿವಾರ ಸಂಜೆ ಕೂಜಿಮಲೆಯ ಅಂಗಡಿಯೊಂದರಿಂದ ಎಂಟು ಮಂದಿಯ ತಂಡ ಭೇಟಿ ನೀಡಿ ನಗದು ನೀಡಿ ಸಾಮಗ್ರಿ ಪಡೆದುಕೊಂಡಿದ್ದು, ನಕ್ಸಲರೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಎಎನ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕಿತ ನಕ್ಸಲರ ತಂಡದಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗುದ್ದು, ಸಶಸ್ತ್ರಧಾರಿಗಳಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.