Advertisement

ಮೇಲ್ದರ್ಜೆಗೆ ಏರದ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ

02:00 AM Jun 20, 2018 | Karthik A |

ಆಸ್ಪತ್ರೆ ಸಂಪರ್ಕ: 08254 258255
ಕೊಲ್ಲೂರು:
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿದ್ದು, ಹಂಬಲವು ಕೂಡಿ ಬರಲು ಕಾಲ ಸನಿಹವಾಗಿಲ್ಲವೇ ಎಂಬ ತುಡಿತದೊಡನೆ ಮತ್ತೆ ಮೌನಕ್ಕೆ ಶರಣಾದ ಕೊಲ್ಲೂರು ಪರಿಸರದ ನಿವಾಸಿಗಳಿಗೆ ಹಿಂದಿನ ಆರೋಗ್ಯ ಕೇಂದ್ರವೇ ಗತಿಯಾಗಿದ್ದು ಇಲ್ಲಿ ಒಂದಿಷ್ಟು ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ.

Advertisement

5 ಗ್ರಾಮಗಳಿಗೊಂದು ಆರೋಗ್ಯ ಕೇಂದ್ರ
ಪ್ರಸ್ತುತ ಹೊರ ರೋಗಿ ತಪಾಸಣಾ ವಿಭಾಗ ಹಾಗೂ ತುರ್ತು ಚಿಕಿತ್ಸೆ ವಿಭಾಗ ಹೊಂದಿರುವ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಜಡ್ಕಲ್‌, ಮುದೂರು, ಗೋಳಿಹೊಳೆ, ಕೊಲ್ಲೂರು ಹಾಗೂ ಯಳಜಿತ್‌ ಗ್ರಾಮಗಳ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ಹೊಂದಿದೆ. ದಿನಕ್ಕೆ ಕನಿಷ್ಠ 60 ರಿಂದ 70 ರೋಗಿಗಳನ್ನು ನೋಡುತ್ತಿರುವ ಇಲ್ಲಿನ ವೈದ್ಯಾಧಿಕಾರಿಗಳು ಕಾರ್ಯನಿಮಿತ್ತ ಬೇರೆ ಕಡೆ ತೆರಳಿದಲ್ಲಿ ಇಲ್ಲಿನ ರೋಗಿಗಳ ಗತಿ ಹೇಳತೀರದು. ಈ ಎಲ್ಲಾ ವಿದ್ಯಮಾನಗಳ ನಡುವೆ ಸದಾ ರೋಗಿಗಳು ತುಂಬಿರುವ ಸರಕಾರಿ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯ ಕೊರತೆಗಳು ಎದ್ದು ಕಾಣುತ್ತಿವೆೆ. ಗೋಳಿಹೊಳೆ, ಎಳಜಿತ್‌ ಸಬ್‌ ಸೆಂಟರ್‌ ಗಳಲ್ಲಿ ಹುದ್ದೆ ಖಾಲಿಯಿದ್ದು ಕೊಲ್ಲೂರು ಬಿ ಯಲ್ಲಿ ಅದೇ ಗತಿ ಕಂಡುಬಂದಿದೆ. ಪುರುಷ ಆರೋಗ್ಯ ಸಹಾಯಕರ 2 ಹುದ್ದೆ ಖಾಲಿ ಇದ್ದು ಈವರೆಗೆ ಅದು ಭರ್ತಿಯಾಗಿಲ್ಲ.

ದುರಸ್ಥಿ ಕಾಣದ ಕ್ವಾರ್ಟರ್ಸ್‌ 
ಪುರಾತನ ಕ್ವಾರ್ಟರ್ಸ್‌ ಹೊಂದಿರುವ ಇಲ್ಲಿ ಒಬ್ಬರು ಸಿಬಂದಿ ಹಾಗೂ ಫಾರ್ಮಾಸಿಸ್ಟ್‌ ಇದ್ದು ತಾತ್ಕಾಲಿಕ ನೆಲೆಯಲ್ಲಿ ಬಳಸಲಾಗುತ್ತಿರುವ ಬಿಇಒ ಕ್ವಾರ್ಟರ್ಸ್‌ ದುರಸ್ಥಿಯಾಗಬೇಕಾಗಿದೆ. ಸಿಬಂದಿಗಳ ಕೊರತೆ ಹೊಂದಿರುವ ಕೊಲ್ಲೂರು ಪ್ರಾಥಮಿಕ ಕೇಂದ್ರದಲ್ಲಿ ಮಹಿಳಾ ಆರೋಗ್ಯ ಸಂದರ್ಶಕಿಯ ಕೊರತೆಯು ಎದ್ದು ಕಾಣುತ್ತಿದೆ. ಒಟ್ಟಾರೆ ಪೂರ್ಣ ಪ್ರಮಾಣದ ಬೃಹತ್‌ ಸರಕಾರಿ ಆಸ್ಪತ್ರೆಯಾಗಿ ಬೆಳಗಬೇಕಾದ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೀಮಿತವಾಗಿ ನಾನಾ ರೀತಿಯ ಅಗತ್ಯಗಳಿಂದ ನಲುಗುತ್ತಿದೆ.

ಗ್ರಾಮಸ್ಥರಿಗೆ ಎಚ್ಚರಿಕೆ 
ಬಹುತೇಕ ರಬ್ಬರ್‌, ಅಡಿಕೆ, ತೆಂಗು, ಬಾಳೆ, ಕೃಷಿಭೂಮಿಯಾಗಿರುವ ಈ ಭಾಗದಲ್ಲಿ ಕೊಳೆತ ರಬ್ಬರ್‌ ಶೀಟುಗಳ ವಿವಿಧ ಎಸ್ಟೇಟ್‌ಗಳ ಪಾರ್ಶ್ವದಲ್ಲಿ  ಕೊಳಚೆ ನೀರು ತುಂಬಿಕೊಂಡಿರುವುದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದರಿಂದ ವೈದ್ಯಾಧಿಕಾರಿಗಳು ಈ ಭಾಗದ ನಿವಾಸಿಗಳಿಗೆ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಜಾಗೃತಿಗೊಳಿಸುತ್ತಿದ್ದಾರೆ.

ಔಷಧ ಕೊರತೆಯಿಲ್ಲ 
ಸರಕಾರದಿಂದ ಒದಗಿಸಲಾಗುತ್ತಿರುವ ಔಷಧವು ವಿವಿಧ ರೋಗಿಗಳ ರೋಗಕ್ಕೆ ಅನುಗುಣವಾಗಿ ಉಪಯೋಗಕ್ಕೆ ಲಭಿಸುತ್ತಿದ್ದು ಆ ಬಗ್ಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ.
– ಡಾ| ರೆನಿಟಾ ಫೆರ್ನಾಂಡಿಸ್‌, ವೈದ್ಯಾಧಿಕಾರಿ

Advertisement

ಮೇಲ್ದರ್ಜೆಗೆ ಏರಿಸಿ
ಕೊಲ್ಲೂರು ಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ದೇಶ ವಿದೇಶಗಳ ಭಕ್ತಿರಿಗೆ ತುರ್ತು ಚಿಕಿತ್ಸೆಗೆ ಸಂಬಂಧಪಟ್ಟಂತೆ ಬೇಕಾದ ವ್ಯವಸ್ಥೆಗಳ ಕೊರತೆ ನಿಭಾಯಿಸುವಲ್ಲಿ ಮೇಲಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ. ಸ್ಥಳೀಯರ ಸಹಿತ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಅನಿವಾರ್ಯವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದರೊಡನೆ 24×7 ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವುದು ಉಚಿತ.
– ಜಯಪ್ರಕಾಶ್‌ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ, ಕೊಲ್ಲೂರು

ದೇಗುಲದಿಂದ ಸಹಕಾರ 
ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯಗಳಿಗೆ  ಪೂರಕವಾದ ವ್ಯವಸ್ಥೆ ಒದಗಿಸುವಲ್ಲಿ ಕೊಲ್ಲೂರು ದೇಗುಲ ತೊಡಗಿಸಿಕೊಳ್ಳುವುದರೊಡನೆ ಆರೋಗ್ಯ ಕೇಂದ್ರದ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ.
– ಹರೀಶ್‌ ಕುಮಾರ್‌ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕೊಲ್ಲೂರು ಮೂಕಾಂಬಿಕಾ ದೇಗುಲ

Advertisement

Udayavani is now on Telegram. Click here to join our channel and stay updated with the latest news.

Next