Advertisement

ಹಾನಿಗೀಡಾದ ಗ್ರಾಮಗಳಲ್ಲಿ ಕನೇರಿ ಶ್ರೀ ಶ್ರಮದಾನ

01:36 PM Jul 31, 2021 | Team Udayavani |

ಹುಬ್ಬಳ್ಳಿ: ಕುಂಭದ್ರೋಣ ಮಳೆ ಹಾಗೂ ಪ್ರವಾಹದಿಂದ ನಲುಗಿರುವ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಆಹಾರಧಾನ್ಯ, ವೈದ್ಯಕೀಯ ಚಿಕಿತ್ಸೆ ಅಲ್ಲದೆ ಬಿದ್ದ ಮನೆಗಳ ತೆರವು-ಸ್ವತ್ಛತೆ ಕಾರ್ಯದಲ್ಲಿ ಕೊಲ್ಲಾಪುರ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸ್ವತಃ ಪಾಲ್ಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆ ಹಾಗೂ ಪ್ರವಾಹ, ಗುಡ್ಡ ಕುಸಿತದಿಂದ ರತ್ನಗಿರಿ ಜಿಲ್ಲೆಯ ಅನೇಕ ಗ್ರಾಮಗಳು ನಲುಗಿವೆ. ಮನೆಗಳ ಕುಸಿತದಿಂದ ಜನರ ಅಕ್ಷರಶಃ ಬೀದಿಪಾಲಾಗಿದ್ದಾರೆ. ಇದನ್ನರಿತ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು, ಶ್ರೀಮಠದ ಭಕ್ತರಿಗೆ ನೆರವು ನೀಡುವಂತೆ ಕರೆ ನೀಡಿದ್ದರು. ಕೇವಲ ಐದಾರು ದಿನಗಳಲ್ಲಿಯೇ ಸುಮಾರು ಐದಾರು ಲಾರಿಗೆ ಆಗುವಷ್ಟು ವಿವಿಧ ಆಹಾರಧಾನ್ಯ, ದಿನಸಿ ಸಾಮಗ್ರಿ, ಉಳ್ಳಾಗಡ್ಡಿ, ಹೊದಿಕೆ, ದಿನಬಳಕೆ ವಸ್ತುಗಳು ಬಂದಿದ್ದವು. ಶ್ರೀಮಠದಲ್ಲಿ ಅವುಗಳನ್ನು ಕಿಟ್‌ಗಳಾಗಿ ರೂಪಿಸಿ, ಲಾರಿಗಳಲ್ಲಿ ತೆಗೆದುಕೊಂಡು ಹೋಗಿ ಹಂಚಲಾಗಿದೆ.

ಗ್ರಾಮಗಳು ಸಂಪೂರ್ಣ ರಾಡಿಮಯವಾಗಿದ್ದು, ಗ್ರಾಮದ ಬಹುತೇಕ ಮನೆಗಳು ನೆಲಕ್ಕುರುಳಿದ್ದರಿಂದ ಅವುಗಳ ಸ್ವತ್ಛತಾ ಕಾರ್ಯ ಹಾಗೂ ಇದ್ದ ಸ್ಥಿತಿಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಗ್ರಾಮಗಳಿಗೆ ತೆರಳಿರುವ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಗ್ರಾಮ, ಮನೆಗಳ ಮುಂದೆ ತುಂಬಿಕೊಂಡಿರುವ ಕೆಸರು ತೆಗೆಯುವ, ಬಿದ್ದ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸ್ವತಃ ತೊಡಗಿದ್ದಾರೆ. ಬೀಳುವ ಮಳೆ ಲೆಕ್ಕಿಸದೆ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಸ್ವತಃ ಸ್ವಾಮೀಜಿಯವರೇ ಕೆಸರು ತೆಗೆಯಲು, ಬಿದ್ದ ಮನೆಗಳ ತೆರವು ಕಾರ್ಯಕ್ಕೆ ಮುಂದಾಗಿರುವುದನ್ನು ಕಂಡು ಅನೇಕ ಸ್ವಯಂ ಸೇವಕರು, ಮಠದ ಭಕ್ತರು ಕೈ ಜೋಡಿಸಿದ್ದಾರೆ.

ಸಂತ್ರಸ್ತರಿಗೆ ಆಹಾರಧಾನ್ಯಗಳು, ದಿನಬಳಕೆ ವಸ್ತುಗಳ ನೀಡುವುದಲ್ಲದೆ, ಶ್ರೀಮಠದ ಆಸ್ಪತ್ರೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಆಂಬ್ಯುಲೆನ್ಸ್‌, ಅಗತ್ಯ ಔಷಧಗಳೊಂದಿಗೆ ಗ್ರಾಮಗಳಿಗೆ ತೆರಳಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ಜತೆಗೆ ಔಷಧ ನೀಡತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next