ಹೈದರಾಬಾದ್: ಕೋಲ್ಕತಾ ನೈಟ್‌ರೈಡರ್ ತಂಡವು ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ಲೇ ಆಫ್ಗೆ ತೇರ್ಗಡೆಯಾಯಿತು.
ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು 9 ವಿಕೆಟಿಗೆ 172 ರನ್ ಗಳಿಸಿತು. ಇದಕ್ಕುತ್ತರವಾಗಿ ಕೆಕೆಆರ್ ತಂಡವು ಇನ್ನೆರಡು ಎಸೆತ ಬಾಕಿ ಇರುವಂತೆ 5 ವಿಕೆಟಿಗೆ 173 ರನ್ ಗಳಿಸಿ ಜಯಭೇರಿ ಬಾರಿಸಿತು. ಕ್ರಿಸ್ ಲಿನ್ ಮತ್ತು ಉತ್ತಪ್ಪ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಈ ಗೆಲುವಿನಿಂದ ಕೆಕೆಆರ್ ಒಟ್ಟು 16 ಅಂಕ ಸಂಪಾದಿಸಿ ಮೂರನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಿತು. ಈ ಮೊದಲು ಚೆನ್ನೈ ಮತ್ತು ಹೈದರಾಬಾದ್ ಪ್ಲೇ ಆಫ್ಗೆ ತೇರ್ಗಡೆಯಾಗಿತ್ತು.
ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮತ್ತು ಶ್ರೀವಸ್ತ್ ಗೋಸ್ವಾಮಿ ತಂಡಕ್ಕ ಭರ್ಜರಿ ಆರಂಭ ಒದಗಿಸಿದರು. ಬಿರುಸಿನ ಆಟವಾಡಿದ ಅವರಿಬ್ಬರು ಮೊದಲ ವಿಕೆಟಿಗೆ 8.4 ಓವರ್‌ಗಳಲ್ಲಿ 79 ರನ್ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಗೋಸ್ವಾಮಿ 35 ರನ್ ಗಳಿಸಿ ಔಟಾದರು. ಆಬಳಿಕ ಧವನ್ ಮತ್ತು ವಿಲಿಯಮ್ಸನ್ ರನ್‌ವೇಗವನ್ನು ಹೆಚ್ಚಿಸಿದರು.
ಭರ್ಜರಿಯಾಗಿ ಆಡಿದ ವಿಲಿಯಮ್ಸನ್ 17 ಎಸೆತಗಳಿಂದ 36 ರನ್ ಗಳಿಸಿದರು. 1 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ ಅವರು ದ್ವಿತೀಯ ವಿಕೆಟಿಗೆ ಧವನ್ ಜತೆಗೂಡಿ 48 ರನ್ ಪೇರಿಸಿದರು. ಇವರಿಬ್ಬರ ಆಟವನ್ನು ಗಮನಿಸಿದಾಗ ಹೈದರಾಬಾದ್ ಮೊತ್ತ 200ರ ಗಡಿ ದಾಟಬಹುದೆಂದು ಭಾವಿಸಲಾಗಿತ್ತು.
ಧವನ್ ಮೂರನೆಯವರಾಗಿ ಔಟ್ ಆದಾಗ ತಂಡ 15.1 ಓವರ್‌ಗಳಲ್ಲಿ 141 ರನ್ ತಲುಪಿತ್ತು. ಆಬಳಿಕ ತಂಡ ನಾಟಕೀಯ ಕುಸಿತ ಕಂಡಿತು. 20 ಓವರ್ ಮುಗಿದಾಗ ಮತ್ತೆ ಆರು ವಿಕೆಟ್ ಕಳೆದುಕೊಂಡಿದ್ದು ಕೇವಲ 31 ರನ್ ಪೇರಿಸಿತ್ತು.