ಕೋಲ್ಕತಾ: ಈಡನ್ ಗಾರ್ಡನ್‌ನಲ್ಲಿ ಅಮೋಘ ದಾಖಲೆ ಕಾಯ್ದುಕೊಂಡು ಬಂದಿರುವ ಕೋಲ್ಕತಾ ನೈಟ್‌ರೈಡರ್ ಶನಿವಾರ ಹಾಲಿ ಚಾಂಪಿಯನ್ ಸನ್‌ರೈಸರ್ ಹೈದರಾಬಾದ್ ವಿರುದ್ಧ ಆಡಲಿಳಿಯಲಿದೆ.
ಎರಡೂ ತಂಡಗಳಲ್ಲಿ ಉತ್ತಮ ದರ್ಜೆಯ ಬೌಲರ್‌ಗಳಿರುವುದರಿಂದ ಇದು ಅಗ್ರ ಬೌಲರ್‌ಗಳ ಹೋರಾಟ ಎನಿಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ. ಈಡನ್‌ನಲ್ಲಿ ಸತತ 11 ಚೇಸಿಂಗ್ ಪಂದ್ಯಗಳಲ್ಲಿ ವಿಜಯಿಯಾದ ಹಿರಿಮೆ ಗಂಭೀರ್ ಪಡೆಯದ್ದು. ಇದಕ್ಕೆ ಗುರುವಾರವಷ್ಟೇ ತಾಜಾ ಉದಾಹರಣೆ ಲಭಿಸಿದೆ. 21 ಎಸೆತ ಬಾಕಿ ಇರುವಾಗಲೇ ಪಂಜಾಬ್‌ಗ ಈ ಋತುವಿನ ಮೊದಲ ಪಂಚ್ ಕೊಟ್ಟದ್ದು ಕೆಕೆಆರ್ ಹೆಗ್ಗಳಿಕೆ. ಇನ್ನೊಂದೆಡೆ ಕಳೆದ ಬಾರಿಯ ಚಾಂಪಿಯನ್ ಹೈದರಾಬಾದ್ ತವರಿನಂಗಳದಲ್ಲಿ ಸತತ 2 ಪಂದ್ಯ ಗೆದ್ದರೂ ಮುಂಬೈನಲ್ಲಿ ಆಡಿದ ಹಿಂದಿನ ಮುಖಾಮುಖೀಯನ್ನು 4 ವಿಕೆಟ್‌ಗಳಿಂದ
ಕಳೆದುಕೊಂಡಿತ್ತು.
ಪಂಜಾಬ್ ವಿರುದ್ಧ ಸುನೀಲ್ ನಾರಾಯಣ್‌ಗೆ ಆರಂಭಿಕನ ಜವಾಬ್ದಾರಿ ವಹಿಸಿ ಯಶಸ್ಸು ಕಂಡದ್ದು ಗಂಭೀರ್ ಅವರ ಜಾಣ್ಮೆಯ ನಾಯಕತ್ವಕ್ಕೆ ಸಾಕ್ಷಿ. ಸ್ವತಃ ಗಂಭೀರ್ ಬ್ಯಾಟಿಂಗ್ ಮುಂಚೂಣಿಯಲ್ಲಿ ನಿಂತು ಅಮೋಘ ಇನಿಂಗ್ಸ್ ಪ್ರದರ್ಶಿಸಿದ್ದು, ಈ ಋತುವಿನ ಮೊದಲ ಪಂದ್ಯವಾಡಿದ ಉಮೇಶ್ ಯಾದವ್ 33 ರನ್ನಿಗೆ 4 ವಿಕೆಟ್ ಹಾರಿಸಿದ್ದೆಲ್ಲ ಕೋಲ್ಕತಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ಸನ್‌ರೈಸರ್ ಬೌಲಿಂಗ್ ಐಪಿಎಲ್ ತಂಡಗಳಲ್ಲೇ ಹೆಚ್ಚು ವೈವಿಧ್ಯಮಯ ಎಂಬುದರಲ್ಲಿ ಎರಡು ಮಾತಿಲ್ಲ. ಭುವನೇಶ್ವರ್ ಮತ್ತು ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಈವರೆಗೆ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಕಳೆದ ವರ್ಷ ಹೈದರಾಬಾದ್ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ ಮುಸ್ತμಜುರ್ ಮೊದಲ ಪಂದ್ಯದಲ್ಲೇನೋ ವಿಫಲರಾಗಿದ್ದಾರೆ. ಆದರೆ ಒಮ್ಮೆ ಲಯ ಸಾಧಿಸಿದರೆ ಈ ಬಾಂಗ್ಲಾ ಬೌಲರ್‌ನನ್ನು ನಿಭಾಯಿಸುವುದು ಕಷ್ಟವಾದೀತು. ಅಂದಹಾಗೆ, ಹೈದರಾಬಾದ್ ವಿರುದ್ಧ ಕೆಕೆಆರ್ 6-3 ಗೆಲುವು-ಸೋಲಿನ ದಾಖಲೆ ಹೊಂದಿದೆ.
ಅಂಕಣ ಹೇಗಿದೆ?
ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳು ವಿಕೆಟ್ ಪಡೆಯುವ ಅವಕಾಶ ಹೆಚ್ಚಿದೆ. 2ನೇ ಅವಧಿಯಲ್ಲಿ ಸ್ಪಿನ್ ಬೌಲರ್‌ಗಳಿಗೂ ಪಿಚ್ ನೆರವಾಗಬಹುದು.