Advertisement

Case: ಅತ್ಯಾಚಾರಕ್ಕೆ ಕಾನೂನು ಕುಣಿಕೆ, ಕಠಿನ ಕಾನೂನಿದ್ದರೂ ಶಿಕ್ಷೆ ಪ್ರಮಾಣ 1%ಮಾತ್ರ!

07:49 AM Sep 02, 2024 | Team Udayavani |

ಕೋಲ್ಕತಾದ ಆರ್‌ಜಿಕಾರ್‌ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿನ ಕಾನೂನು ಜಾರಿ ಮಾಡುವಂತೆ ದೇಶಾದ್ಯಂತ ಕೂಗುಗಳು ಹೆಚ್ಚಿವೆ. ಇದರ ನಡುವೆಯೇ ಅತ್ಯಾಚಾರಿಗಳಿಗೆ 7 ದಿನಗಳೊಳಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿ ಮಾಡುವುದಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದು, ಈ ಸಂಬಂಧ ಇಂದೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಅತ್ಯಾಚಾರದ ಕಾನೂನು ಏನಿದೆ? ವಿವಿಧ ದೇಶಗಳಲ್ಲಿ ಇಂತಹ ಹೀನ ಕೃತ್ಯ ಎಸಗಿದವರಿಗೆ ಏನು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಭಾರತ ಕಾನೂನು ಏನು ಹೇಳುತ್ತದೆ?
ಅತ್ಯಾಚಾರವೊಂದು ಅಪರಾಧ ಎಂಬುದಾಗಿ 1860ರಲ್ಲಿ ಮೊದಲ ಬಾರಿ ಕಾನೂನಿನಲ್ಲಿ ಸೇರ್ಪಡೆ ಮಾಡಲಾಯಿತು. 1861ರಲ್ಲಿ ಮೊದಲ ಬಾರಿ ಪ್ರತ್ಯೇಕ ಕಾನೂನು ರಚನೆ ಮಾಡಲಾಯಿತು. ಅತ್ಯಾಚಾರದ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಆರಂಭಿಸಲಾಯಿತು. 1972ರ ಬಳಿಕ ಈ ಕಾನೂನನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಕ್ರಿಮಿನಲ್‌ ಕಾನೂನಿಗೆ ತಿದ್ದುಪಡಿ ತಂದು ಮತ್ತಷ್ಟು ಕಠಿನ ನಿಯಮಗಳನ್ನು ಅಳವಡಿಕೆ ಮಾಡಲಾಯಿತು.

1983ರಲ್ಲಿ ಭಾರತದಲ್ಲಿನ ಆತ್ಯಾಚಾರ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಲಾಯಿತು. ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ ಆರಂಭವಾಯಿತು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ರೂಪುಗೊಂಡಿದ್ದು, ಶಿಕ್ಷೆ ಪ್ರಮಾಣ ಕೂಡ ಹೆಚ್ಚಿತು. ಎಫ್ಐಆರ್‌ ದಾಖಲಿಸದ ಪೊಲೀಸ್‌ ಅಧಿಕಾರಿಗೂ ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ಬಂದಿತು. ಪ್ರಸ್ತುತ ಭಾರತದಲ್ಲಿ ಕನಿಷ್ಠ 10 ವರ್ಷ ಜೈಲಿನಿಂದ ಹಿಡಿದು ಗಲ್ಲುಶಿಕ್ಷೆಯನ್ನು ವಿಧಿಸಲಾಗುತ್ತದೆ.

ನಿರ್ಭಯಾ ಕಾಯ್ದೆ ಜಾರಿ
2012ರಲ್ಲಿ ಯುವತಿ “ನಿರ್ಭಯಾ’ ಮೇಲೆ ದಿಲ್ಲಿಯಲ್ಲಿ ನಡೆದ ಬರ್ಬರ ಅತ್ಯಾಚಾರ, ದೇಶದಲ್ಲಿ ಅತ್ಯಾಚಾರ ಕಾಯ್ದೆಗೆ ಮತ್ತೂಂದು ಸ್ವರೂಪ ನೀಡಲು ಕಾರಣವಾಯಿತು. 2013ರಲ್ಲಿ ನಿರ್ಭಯಾ ಕಾಯ್ದೆಯನ್ನು ಜಾರಿ ಮಾಡಲಾಯಿತು. ನಿರ್ಭಯಾ ಕಾವು ಜೋರಾಗಿದ್ದ ಹಿನ್ನೆಲೆಯಲ್ಲಿ ಈ ಕಾನೂನಿಗೆ ನಿರ್ಭಯಾ ಎಂದೇ ಹೆಸರಿಡಲಾಯಿತು. ಈ ಕಾನೂನಿನ ಪ್ರಕಾರ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ, ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ವಿಧಿಸುವ ಕಾನೂನನ್ನು ಜಾರಿ ಮಾಡಲಾಯಿತು.

ಶಿಕ್ಷೆ ಪ್ರಮಾಣ 0.76% ಮಾತ್ರ
ದೇಶದಲ್ಲಿ ಅತ್ಯಾಚಾರದ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂಬ ಕೂಗುಗಳು ಕೇಳಿ ಬರುತ್ತಲೇ ಇವೆ. ಆದರೆ, ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ಮಾತ್ರ ಶೇ.1ಕ್ಕಿಂತ ಕಡಿಮೆ ಇದೆ. 2013ರಿಂದ 2023ರ ವರೆಗೆ ಬೆಂಗಳೂರು ನಗರವೊಂದ ರ ಲ್ಲೇ 1,322 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.

Advertisement

ಆದರೆ ಇವುಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ಮಾತ್ರ ಶೇ.0.76. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹಲವು ಪ್ರಕರಣಗಳಲ್ಲಿ ಸಂತ್ರಸ್ತೆಯೇ ಪ್ರತಿಕೂಲ ಸಾಕ್ಷಿಯಾಗಿ ಬದಲಾಗುತ್ತಾರೆ. ಹೀಗಾಗಿ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದುಹೋಗುತ್ತದೆ ಎಂದು ಹೇಳಿದ್ದಾರೆ. ಪ್ರಪಂಚದ ಹಲವು ದೇಶಗಳಲ್ಲೂ ಸಹ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ.5ನ್ನು ದಾಟಿಲ್ಲ. ಕೆಲವು ದೇಶಗಳಲ್ಲಿ ಮಾತ್ರ ಕಠಿನ ಕಾನೂನುಗಳಿವೆ.

ರೇಪಿಸ್ಟ್‌ ಜತೆ ಮದುವೆ ಕಾನೂನು!
ಅತ್ಯಾಚಾರ ಕೃತ್ಯ ಎಸಗಿದವರನ್ನೇ ಮದುವೆಯಾಗಿ ಎನ್ನುವಂತಹ ಕಾನೂನು ಸಹ ಭಾರೀ ಚರ್ಚೆಯಲ್ಲಿದೆ. ಹಲವು ದೇಶಗಳು ಇದಕ್ಕೆ ಆಸ್ಪದ ಕೊಟ್ಟಿವೆ. ಆದರೆ ಇದೊಂದು ಅಮಾನುಷ ಕಾನೂನಾಗಿದ್ದು, ಇದನ್ನು ತೆಗೆದುಹಾಕಬೇಕು ಎಂದು ಹಲವು ದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ವಿಶ್ವದ ಬಹುತೇಕ ದೇಶಗಳು ಈ ಕಾನೂನನ್ನು ರದ್ದು ಮಾಡಿವೆ. ರಷ್ಯಾ ಹಾಗೂ ಪೂರ್ವ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಈಗಲೂ ಈ ಕಾನೂನು ಜಾರಿಯಲ್ಲಿದೆ. ಬೊಲಿವಿಯಾ, ವೆನಿಜುವೆಲಾ ಮತ್ತು ಪರಾಗ್ವೆ ಹೊರತುಪಡಿಸಿ ಉಳಿದ ದೇಶಗಳು ಈ ಕಾನೂನನ್ನು ರದ್ದು ಮಾಡಿವೆ. ಭಾರತದಲ್ಲಿ ಈ ಕಾನೂನು ಜಾರಿಯಲ್ಲಿಲ್ಲ.

ಯಾವ ದೇಶದಲ್ಲಿ ಏನು ಶಿಕ್ಷೆ?

ಚೀನ: ಗಲ್ಲು ಶಿಕ್ಷೆ / ವೃಷಣ ಹರಣ
ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಚೀನದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಕನಿಷ್ಠ 4 ವರ್ಷದಿಂದ ಗರಿಷ್ಠ 20 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಕೆಲವು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಮತು ವೃಷಣ ಹರಣದಂತಹ ಶಿಕ್ಷೆಗಳನ್ನೂ ವಿಧಿಸಲಾಗುತ್ತದೆ.

ಪಾಕಿಸ್ಥಾನ: ಗಲ್ಲು / ಜೀವಾವಧಿ ಶಿಕ್ಷೆ
ಪಾಕಿಸ್ಥಾನದಲ್ಲಿ ಅತ್ಯಾಚಾರಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನವರು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಇದರೊಂದಿಗೆ ಜೀವಾವಧಿ ಶಿಕ್ಷೆ ವಿಧಿಸುವ ಪ್ರಕರಣಗಳಲ್ಲಿ ದಂಡವನ್ನು ಸಹ ವಿಧಿಸಲಾಗುತ್ತದೆ.

ಜಪಾನ್‌: 20 ವರ್ಷ ಜೈಲು
ಜಪಾನ್‌ನಲ್ಲಿ ಅತ್ಯಾಚಾರ ಎಸಗಿದವರಿಗೆ ಕನಿಷ್ಠ 5 ವರ್ಷದಿಂದ ಹಿಡಿದು 20 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಅತ್ಯಾಚಾರ ನಡೆಸಿದ ಸಮಯದಲ್ಲಿ ಮನೆ ದರೋಡೆಯನ್ನೂ ನಡೆಸಿದ್ದರೆ ಅಂಥವರನ್ನು ಗಲ್ಲಿಗೇರಿಸಲಾಗುತ್ತದೆ.

ಸೌದಿ ಅರೇಬಿಯಾ: ತಲೆ ಕಡಿಯುವ ಶಿಕ್ಷೆ
ಸೌದಿ ಅರೇಬಿಯಾದಲ್ಲಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿನ ಶಿಕ್ಷೆ ವಿಧಿಸಲಾಗುತ್ತದೆ. ಆರೋಪ ಸಾಬೀತಾದರೆ ಅಪ­­ ರಾ­ಧಿಯ ತಲೆ ಕಡಿಯಲಾಗುತ್ತದೆ. ಬಹುಪಾಲು ಅತ್ಯಾ ಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಲ್ಲಿ ವೈವಾಹಿಕ ಅತ್ಯಾಚಾರ ತಡೆಯುವ ಕಾನೂನಿಲ್ಲ.

ಉತ್ತರ ಕೊರಿಯಾ: ಗುಂಡು ಹೊಡೆದು ಹತ್ಯೆ
ಅತ್ಯಾಚಾರ ಎಸಗಿದವರನ್ನು ಉತ್ತರ ಕೊರಿಯಾದಲ್ಲಿ ಗುಂಡು ಹೊಡೆದು ಸಾಯಿಸಲಾಗುತ್ತದೆ. 2015ರ ವರೆಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತಿತ್ತು. ಈಗ ಶಿಕ್ಷೆಯ ವ್ಯವಸ್ಥೆ ಬದಲಾಗಿದೆ ಎಂದು ವರದಿಗಳು ತಿಳಿಸಿವೆ. ಹಾಗೆಯೇ 10 ವರ್ಷ ಜೈಲು ಶಿಕ್ಷೆಯನ್ನು ಮಾತ್ರ ವಿಧಿಸಲಾಗುತ್ತದೆ ಎಂದು ಕೆಲವು ವರದಿಗಳು ತಿಳಿಸಿವೆ.

ಅಫ್ಘಾನಿಸ್ಥಾನ: ತಲೆಗೆ ಗುಂಡು ಹೊಡೆದು ಹತ್ಯೆ
ಅತ್ಯಾಚಾರಿಗಳಿಗೆ ಈಗಲೂ ಸಾವಿನ ಶಿಕ್ಷೆ ವಿಧಿಸುತ್ತಿರುವ ಕೆಲವೇ ದೇಶಗಳಲ್ಲಿ ಅಫ್ಘಾನಿಸ್ಥಾನ ಸಹ ಒಂದಾಗಿದೆ. ಅತ್ಯಾಚಾರಿಗಳಿಗೆ ತಲೆಗೆ ಗುಂಡು ಹೊಡೆಯುವ ಮೂಲಕ ಕೊಲ್ಲಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕವಾಗಿ ನೇಣು ಹಾಕಲಾಗುತ್ತದೆ.

ಈಜಿಪ್ಟ್: ಗಲ್ಲು ಶಿಕ್ಷೆ
ಅತ್ಯಾಚಾರದಂತಹ ಹೀನ ಕೃತ್ಯ ಎಸಗಿದವರಿಗೆ ಈಗಲೂ ಈಜಿಪ್ಟ್ನಲ್ಲಿ ನೇಣು ಹಾಕಲಾಗುತ್ತದೆ. ಮಹಿಳೆಯರೊಂದಿಗೆ ಅನುಚಿತ ವರ್ತನೆ, ಅಪಹರಣ ಕೃತ್ಯಗಳಿಗೂ ಸಹ ಈಜಿಪ್ಟ್ನಲ್ಲಿ ಜೀವಾವಧಿಯಂತಹ ಗಂಭೀರ ಶಿಕ್ಷೆ ವಿಧಿಸಲಾಗುತ್ತದೆ.

ಇರಾನ್‌: ಸಾರ್ವಜನಿಕವಾಗಿ ನೇಣು
ಇರಾನ್‌ನಲ್ಲಿ ಅತ್ಯಾಚಾರದ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣು ಹಾಕಲಾಗುತ್ತದೆ. ಕೆಲವೊಮ್ಮೆ ಕಲ್ಲು ಹೊಡೆದು ಸಾಯಿಸಲಾಗುತ್ತದೆ ಎಂದೂ ವರದಿಯಾ ಗಿವೆ.

ಅಮೆರಿಕ: ಜೀವಾವಧಿ ಶಿಕ್ಷೆ
ಅಪರಾಧಿಗಳ ವಯಸ್ಸು, ಅವರ ಕ್ರಿಮಿನಲ್‌ ಇತಿಹಾಸ ಮುಂತಾದವುಗಳನ್ನು ಗಮನಿಸಿ ಅಮೆರಿಕದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದರೆ, ಕೆಲವೆಡೆ 25 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ರಷ್ಯಾ: 3ರಿಂದ 20 ವರ್ಷ ಜೈಲು
ರಷ್ಯಾದಲ್ಲಿ ಅತ್ಯಾಚಾರ ಎಸಗಿದವರಿಗೆ ಕನಿಷ್ಠ 3 ವರ್ಷದಿಂದ ಗರಿಷ್ಠ 20 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಲವು ಪ್ರಕರಣದಲ್ಲಿ ಭಾರೀ ಮೊತ್ತದ ದಂಡ ವಿಧಿಸುವ ಜತೆಗೆ 3 ವರ್ಷ ಶಿಕ್ಷೆ ವಿಧಿಸಲಾಗುತ್ತದೆ.

ಇಸ್ರೇಲ್‌: 16 ವರ್ಷ ಜೈಲು
ಇಸ್ರೇಲ್‌ ಎಲ್ಲ ಮಾದರಿಯ ಅತ್ಯಾಚಾರ ಪ್ರಕರಣಗಳಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅತ್ಯಾಚಾರದೊಂದಿಗೆ ಕೊಲೆಯೂ ನಡೆದಿದ್ದರೆ ಶಿಕ್ಷೆಯ ಪ್ರಮಾಣ ಬದಲಾಗುತ್ತದೆ. ಲೈಂಗಿಕ ಕಿರುಕುಳವನ್ನೂ ಸಹ ಅತ್ಯಾಚಾರ ವ್ಯಾಪ್ತಿಯಲ್ಲೇ ನೋಡಲಾಗುತ್ತದೆ.

ಫ್ರಾನ್ಸ್‌: 15 ವರ್ಷ ಜೈಲು
ಫ್ರಾನ್ಸ್‌ನಲ್ಲಿ ಅತ್ಯಾಚಾರ ಎಸಗಿದವರಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅತ್ಯಾಚಾರದ ವೇಳೆ ಹತ್ಯೆ ಅಥವಾ ರಾಕ್ಷಸೀಯ ಪ್ರವೃತ್ತಿ ತೋರಿಸಿದ್ದರೆ ಅಂಥವರ ಶಿಕ್ಷೆಯನ್ನು 30 ವರ್ಷಕ್ಕೆ ವಿಸ್ತರಿಸಲಾಗುತ್ತದೆ.

ನಾರ್ವೆ: 4ರಿಂದ 15 ವರ್ಷ ಜೈಲು
ಒಪ್ಪಿಗೆಯಿಲ್ಲದೆ ಯಾವುದೇ ರೀತಿಯ ಲೈಂಗಿಕ ಕೃತ್ಯಗಳನ್ನು ಎಸಗಿದರೂ ಅದನ್ನು ನಾರ್ವೆಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಅಪರಾಧಿಗೆ ಕನಿಷ್ಠ 4 ವರ್ಷದಿಂದ ಗರಿಷ್ಠ 15 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.