ಮುಂಬೈ: ಟೀಂ ಇಂಡಿಯಾದ ಟಿ20 ತಂಡದ ನಾಯಕ, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಇದೀಗ ಬೇರೆ ಐಪಿಎಲ್ (IPL) ಫ್ರಾಂಚೈಸಿಗಳಿಂದ ಆಫರ್ ಬರುತ್ತಿದೆ. ಯಶಸ್ವಿ ಐಪಿಎಲ್ ಫ್ರಾಂಚೈಸಿಯೊಂದು ತಮ್ಮ ತಂಡಕ್ಕೆ ಬಂದರೆ ನಾಯಕತ್ವ ನೀಡುವ ಆಫರ್ ನೀಡಿದೆ ಎಂದು ವರದಿಯಾಗಿದೆ.
ಕಳೆದ ವರ್ಷವಷ್ಟೇ ಮುಂಬೈ ಇಂಡಿಯನ್ಸ್ (Mumbai Indians) ತಂಡವು ತನ್ನ ನಾಯಕತ್ವದಲ್ಲಿ ಬದಲಾವಣೆ ಮಾಡಿಕೊಂಡಿತ್ತು. ಐದು ಬಾರಿಯ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಕ್ಕಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತ್ತು. ಇದು ಭಾರೀ ಹಿನ್ನಡೆಗೂ ಕಾರಣವಾಗಿತ್ತು. ಆದರೆ ಈ ಭಾರಿ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಬಯಸಿಲ್ಲ ಎಂದು ಸುದ್ದಿಯಾಗಿದೆ. ಹಾರ್ದಿಕ್ ರನ್ನು ಕೈಬಿಟ್ಟು ಸೂರ್ಯಕುಮಾರ್ ಗೆ ಪಟ್ಟ ಕಟ್ಟಲು ಅಂಬಾನಿ ಒಡೆತನದ ಫ್ರಾಂಚೈಸಿ ಮುಂದಾಗಿದೆ ಎಂಬ ಬಗ್ಗೆ ವರದಿಯಾಗಿತ್ತು. ಇದೀಗ ಸೂರ್ಯಕುಮಾರ್ ಗೆ ಬೇರೆ ತಂಡಗಳು ಗಾಳ ಹಾಕುತ್ತಿವೆ ಎಂದು ವರದಿ ಹೇಳಿದೆ.
ಕಳೆದ ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ಸೂರ್ಯಕುಮಾರ್ ಯಾದವ್ ಅವರನ್ನು ಸಂಪರ್ಕಿಸಿದೆ ಎನ್ನುತ್ತಿದೆ ವರದಿ.
ಕೆಕೆಆರ್ ತಂಡದಲ್ಲಿ ಇದೀಗ ಶ್ರೇಯಸ್ ಅಯ್ಯರ್ ಅವರು ನಾಯಕರಾಗಿದ್ದಾರೆ. 2024ರ ಸೀಸನ್ ನಲ್ಲಿ ಅವರ ನಾಯಕತ್ವದಲ್ಲಿ ಕೆಕೆಆರ್ ಕಪ್ ಗೆದ್ದುಕೊಂಡಿತ್ತು.
ಕೆಕೆಆರ್ ಶ್ರೇಯಸ್ ಅಯ್ಯರ್ ಅವರನ್ನು ತೆಗೆದು ಹಾಕಲು ಮತ್ತು ಹೊಸ ನಾಯಕನನ್ನು ನೇಮಿಸಲು ನಿರ್ಧರಿಸಿದರೂ, ಐಪಿಎಲ್ 2025 ರ ಮೆಗಾ-ಹರಾಜಿನ ಮೊದಲು ಸೂರ್ಯಕುಮಾರ್ ಯಾದವ್ ಅವರನ್ನು ಸಹಿ ಹಾಕಲು ಸಾಧ್ಯವಾಗುವುದಿಲ್ಲ. ಮೆಗಾ-ಹರಾಜಿನ ಮೊದಲು ಯಾವುದೇ ವ್ಯಾಪಾರ ಮಾಡಲು ಸಾಧ್ಯವಿಲ್ಲ.