Advertisement

ವೈಜ್ಞಾನಿಕ ಕೃಷಿ ಲಾಭದಾಯಕ: ಪಾಟೀಲ

04:30 PM Feb 01, 2020 | Naveen |

ಕೊಲ್ಹಾರ: ಯುವ ಸಮೂಹವು ಶೈಕ್ಷಣಿಕ ಪ್ರಗತಿ ಜೊತೆಗೆ ಉದ್ಯೋಗ ಆರಿಸಿಕೊಳ್ಳುವಲ್ಲಿ ವಿಫಲವಾದಾಗ ದೃತಿಗೆಡದೇ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಗತಿಯತ್ತ ಸಾಗಬೇಕು ಎಂದು ಶಾಸಕ ಶಿವಾನಂದ ಎಸ್‌. ಪಾಟೀಲ ಹೇಳಿದರು.

Advertisement

ತಾಲೂಕಿನ ಮುಳವಾಡ ಗ್ರಾಮದ ಸಾಹಿತಿ ಪ.ಗು. ಸಿದ್ದಾಪುರ ಅವರ ತೋಟದಲ್ಲಿ ನಡೆದ ಒಣ ದ್ರಾಕ್ಷಿ ಸಂಸ್ಕರಣಾ ಕೇಂದ್ರ ಉದ್ಘಾಟನೆ ಹಾಗೂ “ಹಣತೆ ಹಚ್ಚಿದವರು’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಕೃಷಿ ಪದ್ಧತಿಯಡಿ ಬೆಳೆಯನ್ನು ಬೆಳೆಯುವುದರಿಂದ ರೈತನಿಗೆ ಒಂದು ರೀತಿ ಲಾಭದಾಯಕ ಎನಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತನು ಮತ್ತು ಅವರ ಮಕ್ಕಳು ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಒಯ್ಯುವುದರ ಜೊತೆಗೆ ಕುಟುಂಬ ನಿರ್ವಹಣೆಗೆ ತೊಂದರೆಯಾಗದಂತ ಲಾಭದಾಯಕ ಬೆಳೆಗಳನ್ನು ಬೆಳೆಯಲು ಗಮನಹರಿಸಬೇಕು ಎಂದರು.

ಏಷ್ಯಾ ಖಂಡದಲ್ಲಿಯೇ ಅತ್ಯಂತ ಬೃಹತ್‌ ಪ್ರಮಾಣದ ಮುಳವಾಡ ಏತ ನೀರಾವರಿ ಯೋಜನೆಯು ಕೊನೆಯ ಹಂತಕ್ಕೆ ತಲುಪಿದ್ದು, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕನಸು ನನಸಾಗುವುದರ ಮೂಲಕ ಬರಗಾಲದ ಭವನೆಯ ಹಣೆಪಟ್ಟಿ ಹೊತ್ತ ವಿಜಯಪುರ ಜಿಲ್ಲೆಯ ಬರಡು ಭೂಮಿಗಳು ಹಸುರಿನಿಂದ ಕಂಗೊಳಿಸಿ ಮಡ್ಡಿ ಜಮೀನು ಬಂಗಾರದ ಕಡ್ಡಿಯಾಗಿ ಪರಿವರ್ತನೆಯಾಗಬೇಕು. ಇದು ರೈತರ ಶ್ರಮದಿಂದ ದುಡಿದಾಗ ಮಾತ್ರ  ಸಾಧ್ಯ ಎಂದರು.

ಗದಗ ಜಿಲ್ಲೆಯ ಕಪ್ಪತಗುಡ್ಡ ಗ್ರಾಮದ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮಿಗಳು ಮಾತನಾಡಿ, ಮಳೆ ಕೊಯ್ಲು ಪದ್ಧತಿಯನ್ನು ಅಳವಡಸಿಕೊಳ್ಳಲು ರೈತನು ತಮ್ಮ ಜಮೀನಿನಲ್ಲಿ ಒಡ್ಡು ಹಾಕುವುದರ ಜೊತೆಗೆ ಸಸಿಗಳನ್ನು ಬೆಳೆಸುವುದರಿಂದ ಮಳೆರಾಯನನ್ನು ಸ್ವಾಗತಿಸಲು ರಣಿಕರ್ತನಾಗಬೇಕು ಎಂದರು.

ಮಸೂತಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮತ್ತು ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್‌.ಆರ್‌. ಪಾಟೀಲ ವಹಿಸಿದ್ದರು. ಸಾಹಿತಿಗಳಾದ ಹ.ಮ. ಪೂಜಾರ, ಸಂಗಮೇಶ ಪೂಜಾರಿ, ಮಹಾಂತ ಪ್ರಸಾದ ಬಿರಾದಾರ, ಶಂಕರಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಮ್‌ದಾರ, ಬಸವನ ಬಾಗೇವಾಡಿಯ ಎಸ್‌ಎಡಿಎಚ್‌ ರವಿ ಪೊಲೀಸಪಾಟೀಲ ಉಪಸ್ಥಿತರಿದ್ದರು.

Advertisement

ಹಣತೆ ಹಚ್ಚಿದವರು ಗ್ರಂಥವನ್ನು ಡಾ| ಸಿದ್ದಣ್ಣ ಉತ್ನಾಳ ಪರಿಚಯಿಸಿ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ಸಲಹಾ ಸಮಿತಿ ಸದಸ್ಯ ಸಿದ್ದಣ್ಣ ಉತ್ನಾಳ ಹಾಗೂ ಕನ್ನಡ ಪುಸ್ತಕ ಪ್ರಾ ಧಿಕಾರದ ಸಂಗಮೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಪ.ಗು. ಸಿದ್ದಾಪುರ ಸ್ವಾಗತಿಸಿದರು. ಬಿ.ಕೆ. ಗೋಟ್ಯಾಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next