Advertisement
ವಿಶೇಷವೆಂದರೆ ಬರೀ ಆರು ಮಂದಿ ಮಾತ್ರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 3 ಬಾರಿ ದೊಡ್ಡತಿಮ್ಮಯ್ಯ, 4 ಬಾರಿ ಜಿ.ವೈ. ಕೃಷ್ಣನ್ ಹಾಗೂ 7 ಸಲ ಕೆ.ಎಚ್. ಮುನಿಯಪ್ಪ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಳೆದ ಸಲ ಬಿಜೆಪಿಯ ಎಸ್. ಮುನಿಸ್ವಾಮಿ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಮುನಿಯಪ್ಪ ಅವರ 8ನೇ ಗೆಲುವಿಗೆ ಅಡ್ಡಗಾಲಾದರು. ಈ ಸಲವೂ ಇವರಿಬ್ಬರು ಕಣಕ್ಕಿಳಿಯುವ ಉಮೇದು ತೋರಿಸುತ್ತಿದ್ದಾರೆ. ಈ ಸಲ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಗೊಂದಲ ಮುನಿಸ್ವಾಮಿಗೆ ಅವರಿಗೆ ವರವಾಗಬಹುದೇ ಅಥವಾ ಶಾಪವಾಗುವುದೇ ಎಂದು ಕಾದುನೋಡಬೇಕು. ಇನ್ನೊಂದೆಡೆ ಗುಂಪುಗಾರಿಕೆ ಸಂಘರ್ಷದಲ್ಲಿರುವ ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಆಯ್ಕೆ ಸರಳವಾಗೇನೂ ಇಲ್ಲ.
Related Articles
Advertisement
ಈ ಬಾರಿಯೂ ಕೋಲಾರ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶಮನಗೊಂಡಿಲ್ಲ. ಮತ್ತೆ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಕೆ.ಎಚ್.ಮುನಿಯಪ್ಪರನ್ನು ಒಂದು ಗುಂಪು ವಿರೋಧಿಸುತ್ತಲೇ ಇದೆ. ರಮೇಶ್‌ಕುಮಾರ್ ಬಣದ ಪರವಾಗಿ ಸಿ.ಎಂ. ಮುನಿಯಪ್ಪ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಮಾಲೂರು ತಾಲೂಕಿನ ಸಂಪಂಗೆರೆ ವಿ. ಮುನಿರಾಜು , ಹಿರಿತನದ ಆಧಾರದಲ್ಲಿ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಮಹಿಳಾ ಕೋಟಾದಡಿ ಶಾಂತಕುಮಾರಿ, ಮುದ್ದುಕೃಷ್ಣ ಸೇರಿದಂತೆ ಒಂಭತ್ತು ಮಂದಿ ಇತರರು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಎಸ್. ಮುನಿಸ್ವಾಮಿ ಪ್ರಚಾರ ಆರಂಭಿಸಲು ಮೈತ್ರಿ ಗೊಂದಲ ಅಡ್ಡಿಯಾಗಿದೆ. ಜೆಡಿಎಸ್ ಕೋಲಾರ ಕ್ಷೇತ್ರಕ್ಕಾಗಿ ಹಕ್ಕು ಪ್ರತಿಪಾದಿಸಿದೆ. ಆದರೂ ಮುನಿಸ್ವಾಮಿ ಮತ್ತೆ ಸ್ಪರ್ಧಿಸುವ ಪ್ರಯತ್ನದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಮತದಾನ ಲೆಕ್ಕಾಚಾರವೂ ಜೆಡಿಎಸ್‌ಗೆ ವರದಾನವಾಗಿದೆ. ಆದ್ದರಿಂದ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ನಿಸರ್ಗನಾರಾಯಣಸ್ವಾಮಿ ಹಾಗೂ ಹಾಲಿ ಅಧಿಕಾರದಲ್ಲಿರುವ ಐಎಎಸ್ ಅಧಿಕಾರಿಯೊಬ್ಬರನ್ನು ಕಣಕ್ಕಿಳಿಸಬಹುದು. ಭೋವಿ ಸಮುದಾಯದ ಹಿರಿಯ ಅಧಿಕಾರಿಯೊಬ್ಬರು ಮೈತ್ರಿ ಅಭ್ಯರ್ಥಿಯಾಗುವ ಉತ್ಸಾಹ ತೋರಿಸುತ್ತಿದ್ದಾರೆ. ಮತ್ತೂರ್ವ ಐಪಿಎಸ್ ಅಧಿಕಾರಿಯೊಬ್ಬರ ಕುಟುಂಬದವರು ಚುನಾವಣೆಗೆ ಇಳಿಯುವ ಸಾಧ್ಯತೆ ಇದೆ. ಮುನಿಯಪ್ಪರಿಗೆ ಟಿಕೆಟ್ ಸಿಗದಿದ್ದರೆ ಅವರ ಕುಟುಂಬದಿಂದ ಕೆಎಎಸ್ ಮತ್ತು ಹಿರಿಯ ಅಧಿಕಾರಿಗಳಾಗಿದ್ದವರು ಕಣಕ್ಕಿಳಿಯಬಹುದು.
ಜಾತಿವಾರು ಲೆಕ್ಕಾಚಾರ
ಇಲ್ಲಿ ಪರಿಶಿಷ್ಟ ಜಾತಿ ವರ್ಗದ ಮತದಾರರ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ. 30ರಿಂದ 35ರಷ್ಟಿದೆ. ಅಲ್ಪಸಂಖ್ಯಾಕ ಮತದಾರರ ಸಂಖ್ಯೆ ಶೇ. 15ರಷ್ಟಿದೆ. ದಲಿತ, ಅಲ್ಪಸಂಖ್ಯಾಕರ ಮತ ಶೇ. 50ರಷ್ಟಿದೆ. ದಲಿತ ಮತದಾರರಲ್ಲಿ ಎಡ, ಬಲ, ಭೋವಿ, ಬಲಗೈ ಸಮುದಾಯದಲ್ಲಿ ಚಿಕ್ಕತಾಳಿ, ದೊಡ್ಡತಾಳಿ ಎಂಬ ಗುಂಪುಗಳಿವೆ. ಕೆ.ಎಚ್. ಮುನಿಯಪ್ಪ ಎಡಗೈ, ಎಸ್. ಮುನಿಸ್ವಾಮಿ ಬಲಗೈ ಸಮುದಾಯಕ್ಕೆ ಸೇರಿದವರು. ಬಲಗೈ ಮತಗಳು ಹೆಚ್ಚಾಗಿರುವುದರಿಂದ ನೇರ ಸ್ಪರ್ಧೆಯಲ್ಲಿ ಮುನಿಸ್ವಾಮಿಗೆ ಗೆಲುವು ಸುಲಭವಾಗಿತ್ತು. ಈ ಬಾರಿಯೂ ಬಿಜೆಪಿ ಜೆಡಿಎಸ್ ಮೈತ್ರಿ ಇರುವುದರಿಂದ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಎಡಗೈಗೆ ಕಾಂಗ್ರೆಸ್ ಟಿಕೆಟ್ ದೊರೆತರೆ ಬಿಜೆಪಿ, ಜೆಡಿಎಸ್ ಬಲಗೈ ಅಭ್ಯರ್ಥಿಗೆ ಒತ್ತು ನೀಡುತ್ತದೆ. ಕಾಂಗ್ರೆಸ್ ಬಲಗೈಗೆ ಟಿಕೆಟ್‌ಗೆ ನೀಡಿದರೆ ಬಿಜೆಪಿ ಜೆಡಿಎಸ್ ಭೋವಿ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಬಲಗೈನಲ್ಲಿ ಚಿಕ್ಕತಾಳಿ, ದೊಡ್ಡತಾಳಿ ಸಮುದಾಯಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಸ್ಪರ್ಧೆಯಲ್ಲಿ ಸಮಗ್ರ ಬಲಗೈ ಅಭ್ಯರ್ಥಿ ಒಂದು ಕಡೆ ಇದ್ದು, ಮತ್ತೂಂದು ಕಡೆ ಎಡಗೈ ಅಥವಾ ಭೋವಿ ಅಭ್ಯರ್ಥಿ ಇರುವ ಸಾಧ್ಯತೆ ಇದೆ. ಮೈತ್ರಿಯಲ್ಲಿ ಕೋಲಾರ ಯಾರದು ಎಂಬುದು ಇತ್ಯರ್ಥವಾದ ನಂತರವಷ್ಟೇ ಈ ಲೆಕ್ಕಾಚಾರಕ್ಕೆ ಮಹತ್ವ ಸಿಗಲಿದೆ.
ಕೆ.ಎಸ್. ಗಣೇಶ್