Advertisement
ಬಿಜೆಪಿಗೆ ಮೊದಲ ಜಯದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ್ದೇ ಗೆಲುವಿನ ಪ್ರಾಬಲ್ಯ. ಇದುವರೆಗೂ ನಡೆದಿರುವ ಚುನಾವಣೆಗಳಲ್ಲಿ ಒಮ್ಮೆ ಜನತಾ ಪಕ್ಷ, ಒಮ್ಮೆ ಬಿಜೆಪಿ ಗೆದ್ದಿದೆ. ಉಳಿದಂತೆ ಕಾಂಗ್ರೆಸ್‌ನದ್ದೇ ಪ್ರಾಬಲ್ಯ. 1991ರಿಂದ ಈವರೆಗೆ ನಡೆದಿರುವ 8 ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಕೆ.ಎಚ್.ಮುನಿಯಪ್ಪ 7 ಬಾರಿ ಗೆಲುವಿನ ಪತಾಕೆ ಹಾರಿಸಿದ್ದಾರೆ. 2019ರ ಚುನಾವಣೆಯಲ್ಲಿ ಎಸ್.ಮುನಿಸ್ವಾಮಿ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದರು.
ಕುಡಿಯುವ ನೀರು, ಕೃಷಿ, ರೇಷ್ಮೆ, ಹೈನು ಗಾರಿಕೆ, ಕೃಷಿ ಮಾರುಕಟ್ಟೆ ಮುಂತಾದ ಸಮಸ್ಯೆ ಗಳು ಕ್ಷೇತ್ರವನ್ನು ಕಾಡುತ್ತಿವೆ. ಇಲ್ಲಿ ಜಾತಿ, ಹಣ ಬಲವು ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ಎಂಬ ಮಾತಿದೆ. ಕಳೆದ ಬಾರಿ ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಮೈತ್ರಿ ಸಾಧಿಸಿತ್ತು. ಈ ಬಾರಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಸಾಧಿಸಿದೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಕ್ಷೇತ್ರದ ಬಲಾಬಲ
ಕೋಲಾರ ಲೋಕಸಭಾ ಕ್ಷೇತ್ರವು ಕೋಲಾರ ಜಿಲ್ಲೆಯ 6 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಸಹಿತ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಇವುಗಳ ಪೈಕಿ ಕೋಲಾರ, ಬಂಗಾರಪೇಟೆ, ಕೆಜಿಎಫ್, ಮಾಲೂರು ಮತ್ತು ಚಿಂತಾಮಣಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಶಿಡ್ಲಘಟ್ಟದಲ್ಲಿ ಜೆಡಿಎಸ್ ಗೆದ್ದಿದೆ. ಬಿಜೆಪಿಯದ್ದು ಶೂನ್ಯ ಸಂಪಾದನೆ.
Related Articles
8 ಮಂದಿ ಮಾತ್ರ!
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 17 ಚುನಾವಣೆಗಳು ನಡೆದಿದ್ದರೂ ಆರಂಭದ ಎರಡು ಚುನಾವಣೆಗಳು ದ್ವಿಸದಸ್ಯವಾಗಿದ್ದವು. ಈವರೆಗೆ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದವರು ಕೇವಲ 8 ಮಂದಿ ಮಾತ್ರ. ದೊಡ್ಡತಿಮ್ಮಯ್ಯ ಮೂರು ಬಾರಿ, ಇವರೊಂದಿಗೆ ದ್ವಿಸದಸ್ಯ ಕ್ಷೇತ್ರಗಳನ್ನು ಹಂಚಿಕೊಂಡ ಎಂ.ವಿ.ಕೃಷ್ಣಪ್ಪ, ಕೆ.ಚಂಗಲರಾಯರೆಡ್ಡಿ, ಬಳಿಕ ನಾಲ್ಕು ಬಾರಿ ಗೆದ್ದ ಜಿ.ವೈ.ಕೃಷ್ಣನ್, ತಲಾ ಒಂದು ಬಾರಿ ಗೆದ್ದ ಡಾ| ಜಿ. ವೆಂಕಟೇಶ್, ವೈ.ರಾಮಕೃಷ್ಣ ಬಳಿಕ ಕೆ.ಎಚ್.ಮುನಿಯಪ್ಪ ಸತತ ಏಳು ಗೆಲುವುಗಳನ್ನು ದಾಖಲಿಸಿದ್ದರು. ಪ್ರಸ್ತುತ ಎಸ್.ಮುನಿಸ್ವಾಮಿ ಸಂಸದರಾಗಿದ್ದಾರೆ.
Advertisement
ಜಾತಿ ಲೆಕ್ಕಾಚಾರಮೀಸಲು ಕ್ಷೇತ್ರವಾಗಿರುವುದರಿಂದಲೇ ದಲಿತ ಮತಗಳದ್ದೇ ಮೇಲುಗೈ. ದಲಿತರಲ್ಲಿ ಬಲಗೈ, ಎಡಗೈ, ಬೋವಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ದಲಿತ ಬಲಗೈ ಸಮುದಾಯದಲ್ಲೇ ಚಿಕ್ಕತಾಳಿ ಮತ್ತು ದೊಡ್ಡತಾಳಿ ವಿಭಜನೆಯಾಗಿವೆ. ಈವರೆಗೆ ಗೆದ್ದವರ ಪೈಕಿ ಬಿಜೆಪಿಯ ಎಸ್.ಮುನಿಸ್ವಾಮಿ ಮಾತ್ರ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು. ಇವರು ಬಲಗೈ ದೊಡ್ಡತಾಳಿ ಸಮುದಾಯದವರು. ಈಗ ದಲಿತ ಬಲಗೈ ಚಿಕ್ಕತಾಳಿಗೂ ಯಾವುದಾದರೂ ಪಕ್ಷದಲ್ಲಿ ಅವಕಾಶ ನೀಡಬೇಕೆಂಬ ಬೇಡಿಕೆ ಎದ್ದಿದೆ. ಅಲ್ಪಸಂಖ್ಯಾಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತ ಅಲ್ಪಸಂಖ್ಯಾಕ ಮತಗಳು ಒಗ್ಗೂಡಿದರೆ ಗೆಲುವು ಸುಲಭ. ಆದರೆ ಒಳಪಂಗಡಗಳ ಕಾರಣ ದಲಿತ ಮತಗಳು ಒಗ್ಗೂಡುತ್ತಿಲ್ಲ. ಉಳಿದಂತೆ ಒಕ್ಕಲಿಗ, ಕುರುಬ, ಇತರ ಹಿಂದುಳಿದ ವರ್ಗಗಳ ಮತದಾರರಿದ್ದಾರೆ. – ಕೆ.ಎಸ್.ಗಣೇಶ್