Advertisement
ಈ ಮೂರು ದಶಕಗಳಲ್ಲಿ ದಿವಂಗತ ಬೈರೇಗೌಡರು ಮಂತ್ರಿಯಾದಾಗಿನಿಂದಲೂ ಹಲವು ಬಾರಿ ನಗರ ಸಾರಿಗೆಯನ್ನು ಆರಂಭಿಸಲಾಗಿದೆ, ಆದರೆ, ಅಷ್ಟೇ ವೇಗವಾಗಿ ನಷ್ಟದ ನೆಪವೊಡ್ಡಿ ನಗರ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.
Related Articles
Advertisement
ನಷ್ಟದ ನೆಪ: ನಗರ ಸಾರಿಗೆ ನಿಲ್ಲಿಸಲು ಕೊಟ್ಟ ನೆಪವೇ ನಷ್ಟ ಎಂದು. ಸಂಸ್ಥೆಗೆ ಸುಮಾರು 3 ಕೋಟಿ ರೂ. ನಷ್ಟವಾಯಿತೆಂದು ಆರ್‌ಟಿಐ ಮಾಹಿತಿಯಲ್ಲಿ ಒಪ್ಪಿಕೊಂಡಿದೆ. ಈಗ ಜಿಲ್ಲಾಧಿಕಾರಿ ಅಕ್ರಂಪಾಷಾ ಕೋಲಾರ ಬಸ್ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಬಂದು ಹೋಗಲು ಅನುಕೂಲವಾಗುವಂತೆ ನಗರ ಸಾರಿಗೆಯನ್ನು ಆರಂಭಿಸುವಂತೆ ಮಾಡಿದ್ದಾರೆ. ಈ ಬಸ್ ಕೋಲಾರ ಬಸ್ ನಿಲ್ದಾಣದಿಂದ ವಡಗೂರು ಗೇಟ್‌ವರೆಗೂ ಹೋಗಿ ಮತ್ತದೇ ಮಾರ್ಗದಲ್ಲಿ ವಾಪಸ್ ಬರುತ್ತಿದೆ. ಇದು ಪೂರ್ಣ ಪ್ರಮಾಣದ ನಗರ ಸಾರಿಗೆಯಲ್ಲ. ಈ ಹಿನ್ನೆಲೆಯಲ್ಲಿ ನಗರವಾಸಿಗಳು ಮೂರು ದಶಕ ಕಳೆದರೂ ನಗರ ಸಾರಿಗೆ ಸೇವೆಯಿಂದ ವಂಚಿತರಾಗಬೇಕಾಗಿದೆ.
ದುಬಾರಿ ಆಟೋ ಸೇವೆ: ನಗರದಲ್ಲಿ ಸೂಕ್ತ ಸಾರಿಗೆಯಿಲ್ಲದ ಕಾರಣ ಜನ ಆಟೋದಲ್ಲಿ ಸಾಗಬೇಕಿದೆ. ಆಟೋ ಸಂಚಾರ ಬಲುದುಬಾರಿ. ಆದರೂ, ಅದೇ ಅನಿವಾರ್ಯ ಎಂಬಂತಾಗಿದೆ. ರಾಜ್ಯದಲ್ಲಿ ಕೆಲವು ತಾಲೂಕು ಕೇಂದ್ರಗಳು ನಗರ ಸಾರಿಗೆ ಸೇವೆಯನ್ನು ಹೊಂದಿರುವಾಗ ಕೋಲಾರ ಜಿಲ್ಲಾ ಕೇಂದ್ರ ಸ್ವಾತಂತ್ರ್ಯಬಂದು 75 ವರ್ಷ ಕಳೆದರೂ ಆಟೋ ಸೇವೆಯಲ್ಲಿ ಜನ ಓಡಾಟ ನಡೆಸಬೇಕಿದೆ.
ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ: 3 ದಶಕಗಳಲ್ಲಿ ನಡೆದಿರುವ ವಿವಿಧ ಸಾರಿಗೆ ಪ್ರಾಧಿಕಾರದ ಸಭೆಗಳಲ್ಲಿ ಹಾಗೂ ನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಜನರ ಪರವಾಗಿ ನಗರ ಸಾರಿಗೆ ಕುರಿತಂತೆ ಹಲವಾರು ಮನವಿಗಳನ್ನು ನೀಡಲಾಗಿದೆ. ಯಾವುದಕ್ಕೂ ಗಂಭೀರ ಸ್ಪಂದನೆ ದೊರೆತಿಲ್ಲ. ಕೋಲಾರ ನಗರ ಸಾರಿಗೆ ಪ್ರತ್ಯೇಕ ಬಣ್ಣದ ಬಸ್‌ಗಳಿಂದ ಕೋಲಾರ ವರ್ತುಲ ದಿಕ್ಕಿನಲ್ಲಿ ಸಂಚರಿಸುವಂತೆ ಆರಂಭಿಸಬೇಕು, ಪ್ರತ್ಯೇಕ ನಿಲ್ದಾಣ ಮತ್ತು ನಿಲುಗಡೆ ವೇಳಾಪಟ್ಟಿ ಅಳವಡಿಸಿಕೊಳ್ಳಬೇಕು, ನಿಗದಿತ ವೇಳಾಪಟ್ಟಿ ಪ್ರಕಾರ ಬಸ್ ಸಂಚರಿಸಬೇಕು, ಈಗ ಕೋಲಾರ ನಗರಸಭೆಯನ್ನು ಐದು ಗ್ರಾಪಂಗಳನ್ನು ಸೇರಿಸಿಕೊಂಡು ಮಹಾನಗರಪಾಲಿಕೆಯನ್ನಾಗಿಸುವ ಪ್ರಸ್ತಾಪನೆ ಇರುವುದರಿಂದ 5 ಪಂಚಾಯ್ತಿಗಳ ಕೇಂದ್ರದಿಂದ ನಗರ ಸಾರಿಗೆ ಆರಂಭವಾಗಬೇಕು. ಆಗ ನಷ್ಟವಾಗುವ ಸಾಧ್ಯತೆ ಇರುವುದಿಲ್ಲ. ಸಾರಿಗೆ ಸಂಸ್ಥೆಗೆ ನಗರಸಾರಿಗೆಯಿಂದ ನಷ್ಟವಾಗುವುದಾದರೆ ಆಟೋ ಸೇವೆಯಂತೆ ನಗರ ಸಾರಿಗೆ ಸೇವೆಯನ್ನು ಖಾಸಗಿಗೆ ನೀಡಬೇಕೆಂಬ ಬೇಡಿಕೆಯೂ ಇದೆ.
ಜಿಲ್ಲೆಗೆ ವಿದ್ಯುತ್ ಚಾಲಿತ ಬಸ್ ಸೇವೆ! :
ಕೋಲಾರ ಸಾರಿಗೆ ಸಂಸ್ಥೆಗೆ ಗಣರಾಜ್ಯೋತ್ಸವ ಅಂಗವಾಗಿ 45 ಎಲೆಕ್ಟ್ರಿಕ್ ಬಸ್‌ಗಳು ಬರುತ್ತಿದ್ದು, ಈ ಬಸ್‌ಗಳನ್ನು ಸದ್ಬಳಕೆ ಮಾಡಿಕೊಂಡು ನಗರ ಸಾರಿಗೆಯನ್ನು ಈಗಲಾದರೂ ವ್ಯವಸ್ಥಿತವಾಗಿ, ನಿರಂತರವಾಗಿ, ಸಮರ್ಪಕವಾಗಿ ನಡೆಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಲು ಅವಕಾಶವಿದೆ. ಇತ್ತ ಸಾರಿಗೆ ಸಂಸ್ಥೆ, ಡಿಸಿ, ಜನಪ್ರತಿನಿಧಿಗಳು ಗಮನಹರಿಸಬೇಕಷ್ಟೆ. ಈ ಕುರಿತು ಹೆಚ್ಚಿನ ಪ್ರಚಾರ ನೀಡಿ, ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ನಿಲ್ದಾಣಕ್ಕೆ ವ್ಯವಸ್ಥೆ ಮಾಡಿ, ಕೋಲಾರ ನಗರದಲ್ಲಿ ವರ್ತುಲಾಕಾರದಲ್ಲಿ ನಗರದ ಒಳಗೆ ಮತ್ತು ಹೊರಭಾಗದ ಗ್ರಾಮಾಂತರ ಪ್ರದೇಶದಲ್ಲಿ ಬಸ್ ಸಂಚಾರ ಆರಂಭಿಸಲು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಡಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂಬ ಒತ್ತಾಯ ಜನರಿಂದ ಕೇಳಿಬರುತ್ತಿದೆ.
ಕೋಲಾರ ನಗರಕ್ಕೆ ವ್ಯವಸ್ಥಿತ ನಗರ ಸಾರಿಗೆ ಬೇಕೆಂಬುದು ಮೂರು ದಶಕಗಳ ಬೇಡಿಕೆ. ಕೋಲಾರವನ್ನು ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಪ್ರಾಧಿಕಾರವು ನಗರವನ್ನಾಗಿ ಒಪ್ಪಿಕೊಳ್ಳದ ಮೇಲೆ ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಇರುವುದಾದರೂ ಏಕೆ? ನಗರಸಭೆ ಕಂದಾಯದಲ್ಲಿ ನಗರ ಸಾರಿಗೆ ಸೆಸ್ ವಸೂಲು ಮಾಡುತ್ತಿರುವುದೇಕೆ? ಎನ್ನುವುದಕ್ಕೆ ಸರ್ಕಾರ ಕೋಲಾರ ಜನತೆಗೆ ವಿವರಣೆ ನೀಡಬೇಕಿದೆ. ಜಿಲ್ಲೆಗೆ ವಿದ್ಯುತ್ ಚಾಲಿತ ಬಸ್‌ಗಳು ಬರುತ್ತಿರುವಾಗಲಾದರೂ ನಿರಂತರ ನಗರ ಸಾರಿಗೆ ಸೇವೆ ಕೋಲಾರ ನಗರಕ್ಕೆ ಸಿಗುವಂತಾಗಲಿ.-ನಾಗರಾಜ ಶೆಣೈ, ನಗರಸಾರಿಗೆ ಹೋರಾಟಗಾರ, ಕೋಲಾರ.
– ಕೆ.ಎಸ್.ಗಣೇಶ್