Advertisement

ಕೊಹ್ಲಿಗೆ ಪಟ್ಟ ,ಯುವಿ-ನೆಹ್ರಾಗೆ ಅದೃಷ್ಟ

03:45 AM Jan 07, 2017 | |

ಮುಂಬಯಿ: ಟೆಸ್ಟ್‌ ನಾಯಕ ವಿರಾಟ್‌ ಕೊಹ್ಲಿ ಏಕದಿನ ಹಾಗೂ ಟಿ-20 ತಂಡಗಳಿಗೂ ಸಾರಥಿ ಆಗುವುದರೊಂದಿಗೆ ಭಾರತೀಯ ಕ್ರಿಕೆಟ್‌ ನವ ಮನ್ವಂತರದತ್ತ ಮುಖ ಮಾಡಿತು. ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಇದೇ ತಿಂಗಳು ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಗಾಗಿ ಶುಕ್ರವಾರ ಹೆಸರಿಸಲಾದ ತಂಡಗಳಿಗೆ ನಿರೀಕ್ಷೆಯಂತೆ ಕೊಹ್ಲಿ ಅವರನ್ನೇ ನಾಯಕರನ್ನಾಗಿ ನೇಮಿಸಲಾಯಿತು. ಇವೆರಡೂ ಸಶಕ್ತ ಹಾಗೂ ಪರಿಪೂರ್ಣ ತಂಡಗಳೆಂದು ಗೋಚರಿಸುತ್ತಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

Advertisement

ಕಳೆದ ಅನೇಕ ವರ್ಷಗಳಿಂದ ಟೀಮ್‌ ಇಂಡಿಯಾದ ಸಾರಥಿಯಾಗಿ, ಭಾರತೀಯ ಕ್ರಿಕೆಟನ್ನು ನೂತನ ಎತ್ತರಕ್ಕೆ ಏರಿಸಿದ ಮಹೇಂದ್ರ ಸಿಂಗ್‌ ಧೋನಿ ಬುಧವಾರ ದಿಢೀರನೇ ನಾಯಕತ್ವ ತೊರೆದ ಬಳಿಕ ಈ ತಂಡಗಳ ಆಯ್ಕೆ ತೀವ್ರ ಕುತೂಹಲ ಹುಟ್ಟಿಸಿತ್ತು. ಧೋನಿ ನಡೆಯ ಬಗ್ಗೆಯೂ ಕಾತರವೊಂದು ಮನೆ ಮಾಡಿಕೊಂಡಿತ್ತು. ಆದರೀಗ ಧೋನಿಯೇ ನುಡಿದಂತೆ, ಅವರೀಗ ಸಾಮಾನ್ಯ ಆಟಗಾರರಾಗಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಎರಡೂ ತಂಡಗಳಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ.

ಕೀಪಿಂಗ್‌ನಲ್ಲಿ ಧೋನಿ ಉತ್ತರಾಧಿ ಕಾರಿ ಯಾರಾಗಬಹುದು ಎಂಬ ಕೌತುಕಕ್ಕೂ ಈಗ ತೆರೆ ಬಿದ್ದಿದೆ. ಈ ಅದೃಷ್ಟ ದಿಲ್ಲಿಯ ಉದಯೋನ್ಮುಖ ಕೀಪರ್‌ ಕಂ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ ಅವರದ್ದಾಗಿದೆ. ಪಂತ್‌ ಟಿ-20 ತಂಡದ ನೂತನ ಸದಸ್ಯರಾಗಿದ್ದಾರೆ.

ಯುವಿ, ನೆಹ್ರಾ ಪುನರಾಗಮನ ಗತ ಕಾಲದ ಕ್ರಿಕೆಟ್‌ ಹೀರೋಗಳಾದ ಯುವರಾಜ್‌ ಸಿಂಗ್‌ ಮತ್ತು ಆಶಿಷ್‌ ನೆಹ್ರಾ ಅವರನ್ನು ಮರಳಿ ಆಹ್ವಾನಿಸಿದ್ದು ಆಯ್ಕೆಯ ವಿಶೇಷವೆನಿಸಿತು. ಪ್ರಸಕ್ತ ರಣಜಿ ಋತುವಿನಲ್ಲಿ 84ರ ಸರಾಸರಿ ಯಲ್ಲಿ 672 ರನ್‌ ಪೇರಿಸಿದ್ದು ಯುವಿಗೆ ನೆರವಾಯಿತು. ಬರೋಡ ವಿರುದ್ಧ 260 ರನ್‌ ಬಾರಿಸುವ ಮೂಲಕ ಯುವರಾಜ್‌ ಸುದ್ದಿಗೆ ಬಂದಿದ್ದರು. 

“ಯುವರಾಜ್‌ ಆಡಿದ ರೀತಿಯನ್ನು ನಾವು ಪ್ರಶಂಸಿಸಲೇ ಬೇಕು. ದೇಶಿ ಕ್ರಿಕೆಟ್‌ನಲ್ಲಿ ಅವರ ನಿರ್ವಹಣೆ ಅತ್ಯು ತ್ತಮವಾಗಿತ್ತು…’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಮಾಧ್ಯಮದವರಲ್ಲಿ ಹೇಳಿದರು. ಯುವರಾಜ್‌ ಕಳೆದ ಟಿ-20 ವಿಶ್ವಕಪ್‌ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಅನಂತರ 9 ತಿಂಗಳ ವಿಶ್ರಾಂತಿ. ಈ ನಡುವೆ ವೈವಾಹಿಕ ಬದುಕಿಗೂ ಕಾಲಿಟ್ಟರು. ಈಗ 3ನೇ ಇನ್ನಿಂಗ್ಸ್‌ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಎರಡೂ ತಂಡಗಳಲ್ಲಿ ಯುವಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಯುವರಾಜ್‌ ಸಿಂಗ್‌ ಕೊನೆಯ ಏಕದಿನ ಪಂದ್ಯವಾಡಿದ್ದು 2013ರ ಡಿಸೆಂಬರ್‌ನಲ್ಲಿ. ಅದು ದಕ್ಷಿಣ ಆಫ್ರಿಕಾ ಪ್ರವಾಸದ ಸೆಂಚುರಿಯನ್‌ ಪಂದ್ಯವಾಗಿತ್ತು.

Advertisement

37ರ ಹರೆಯದ ಆಶಿಷ್‌ ನೆಹ್ರಾ ಟಿ-20 ತಂಡದ ಎಡಗೈ ಸೀಮ್‌ ಬೌಲರ್‌ನ ಕೊರತೆಯನ್ನು ನೀಗಿಸಲಿದ್ದಾರೆ. ಕಳೆದ ಐಪಿಎಲ್‌ ವೇಳೆ ಗಾಯಾಳಾಗಿ ಹೊರಬಿದ್ದ ನೆಹ್ರಾ ಅನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಿಳಿ ಕುಕಬುರಾ ಚೆಂಡಿನಲ್ಲಿ ನೆಹ್ರಾ ಮ್ಯಾಜಿಕ್‌ ನಡೆಸಬಹುದೆಂಬ ನಿರೀಕ್ಷೆ ಇದೆ.

ಧವನ್‌ ಏಕದಿನಕ್ಕೆ ಮಾತ್ರ
ಅಷ್ಟೇನೂ ಫಾರ್ಮ್ನಲ್ಲಿಲ್ಲದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಏಕದಿನಕ್ಕೆ, ಒಂದು ಕಾಲದ ಅನಿವಾರ್ಯ ಆಟಗಾರ ಸುರೇಶ್‌ ರೈನಾ ಟಿ-20 ತಂಡಕ್ಕೆ ಮರಳಿದ್ದಾರೆ. ಗಾಯಾಳಾಗಿ ವಿಶ್ರಾಂತಿಯಲ್ಲಿದ್ದ ಅಜಿಂಕ್ಯ ರಹಾನೆ ಏಕದಿನ ತಂಡದಲ್ಲಷ್ಟೇ ಕಾಣಿಸಿಕೊಂಡಿದ್ದಾರೆ. 

ಸ್ಪಿನ್ನರ್‌ಗಳಿಗೆ ವಿಶ್ರಾಂತಿ ಇಲ್ಲ
ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಭಾರತದ ಐತಿಹಾಸಿಕ ಗೆಲುವಿನ ರೂವಾರಿಗಳಾಗಿ ಮೂಡಿಬಂದ ಸ್ಪಿನ್‌ದ್ವಯರಾದ ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಭಾರೀ ಸುದ್ದಿ ಹಬ್ಬಿತ್ತು. ಆದರೆ ಇದು ಹುಸಿಯಾಗಿದೆ. ಇವರು ಎರಡೂ ತಂಡಗಳಲ್ಲಿ ಮುಂದುವರಿದಿದ್ದಾರೆ. ತೃತೀಯ ಸ್ಪಿನ್ನರ್‌ಗಳಾಗಿ ಏಕದಿನಕ್ಕೆ ಅಮಿತ್‌ ಮಿಶ್ರಾ, ಚುಟುಕು ಕ್ರಿಕೆಟಿಗೆ ಯಜ್ವೇಂದ್ರ ಚಾಹಲ್‌ ಅವರನ್ನು ಆರಿಸಲಾಗಿದೆ. ಉಳಿದಿಬ್ಬರು ಸ್ಪಿನ್ನರ್‌ಗಳಾದ ಅಕ್ಷರ್‌ ಪಟೇಲ್‌ ಮತ್ತು ಜಯಂತ್‌ ಯಾದವ್‌ ಆಯ್ಕೆ ವ್ಯಾಪ್ತಿಯಿಂದ ಹೊರಗುಳಿದರು.

ವೇಗದ ವಿಭಾಗದಲ್ಲಿ ಬದಲಿಲ್ಲ
ಇತ್ತಂಡಗಳ ವೇಗದ ವಿಭಾಗದಲ್ಲಿ ಸಂಭವಿಸಿದ್ದು ಒಂದೊಂದು ಬದಲಾವಣೆ ಮಾತ್ರ. ಭುವನೇಶ್ವರ್‌ ಕುಮಾರ್‌, ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ, ಸೀಮರ್‌-ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎರಡೂ ತಂಡಗಳಲ್ಲಿದ್ದಾರೆ. ಏಕದಿನದಲ್ಲಿ ನೆಹ್ರಾ ಬದಲು ಉಮೇಶ್‌ ಯಾದವ್‌ ಅವರೇ ಮುಂದುವರಿದಿದ್ದಾರೆ.

ಮೂರೂವರೆ ಗಂಟೆ ವಿಳಂಬ
ಲೋಧಾ ಶಿಫಾರಸು, ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆಜ್ಞೆಯ ಹಿನ್ನೆಲೆಯಲ್ಲಿ ಶುಕ್ರವಾರದ ಆಯ್ಕೆ ಸಭೆಗೂ ಮುನ್ನ ಬಹಳಷ್ಟು ಗಂಭೀರ ಹಾಗೂ ನಾಟಕೀಯ ವಿದ್ಯಮಾನಗಳು ಘಟಿಸಿದವು. ಹೀಗಾಗಿ ಆಯ್ಕೆ ಪ್ರಕ್ರಿಯೆ ಸುಮಾರು ಮೂರೂವರೆ ಗಂಟೆ ವಿಳಂಬವಾಗಿ ಮೊದಲ್ಗೊಂಡಿತು.

ಧೋನಿ ಭಾಯ್‌ ನೀವೇ ನಮ್ಮ ನಾಯಕ
ಹೊಸದಿಲ್ಲಿ: ಯಶಸ್ವಿ ನಾಯಕನಾಗಿ ಗುರುತಿಸಿಕೊಂಡ ಮಹೇಂದ್ರ ಸಿಂಗ್‌ ಧೋನಿ ಏಕದಿನ ಮತ್ತು ಟಿ20 ಪಂದ್ಯಗಳ ನಾಯಕ ಸ್ಥಾನಕ್ಕೆ ನಿವೃತ್ತಿ ಘೋಷಿಸಿರುವುದಕ್ಕೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಭಾರತ ಟೆಸ್ಟ್‌ ತಂಡದ ನಾಯಕ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಕೂಡ ಧೋನಿ ಬಗ್ಗೆ ಮೆಚ್ಚುಗೆಯ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಿಂದ ರಾಹುಲ್‌, ಪಾಂಡೆ
ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್‌. ರಾಹುಲ್‌ ಮತ್ತು ಮನೀಷ್‌ ಪಾಂಡೆ ಎರಡೂ ತಂಡಗಳಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆದರೆ ಚೆನ್ನೈ ಟೆಸ್ಟ್‌ ತ್ರಿಶತಕವೀರ ಕರುಣ್‌ ನಾಯರ್‌ ಆಯ್ಕೆಗೆ ಕಾಲ ಕೂಡಿ ಬರಲಿಲ್ಲ. ಏಕದಿನ ಮಧ್ಯಮ ಕ್ರಮಾಂಕದಲ್ಲಿ ಕೇದಾರ್‌ ಜಾಧವ್‌ ಮುಂದುವರಿದಿದ್ದಾರೆ. ರೋಹಿತ್‌ ಶರ್ಮ ಗೈರಲ್ಲಿ ರಾಹುಲ್‌ ಎರಡರಲ್ಲೂ ಆರಂಭಿಕನ ಜವಾಬ್ದಾರಿ ನಿಭಾ ಯಿಸಬೇಕಿದೆ. ಏಕದಿನದಲ್ಲಿ ಅವರಿಗೆ ಧವನ್‌ ಜತೆಗಾರನಾದರೆ, ಟಿ-ಟ್ವೆಂಟಿಯಲ್ಲಿ ಮನ್‌ದೀಪ್‌ ಸಿಂಗ್‌ ಜತೆಗೂಡಬಹುದು.

ತಂಡಗಳು
ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ಮಹೇಂದ್ರ ಸಿಂಗ್‌ ಧೋನಿ, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಯುವರಾಜ್‌ ಸಿಂಗ್‌, ಅಜಿಂಕ್ಯ ರಹಾನೆ, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಮಿತ್‌ ಮಿಶ್ರಾ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌.

ಟಿ-20 ತಂಡ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಮನ್‌ದೀಪ್‌ ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಮನೀಷ್‌ ಪಾಂಡೆ, ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಯಜ್ವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಆಶಿಷ್‌ ನೆಹ್ರಾ.

Advertisement

Udayavani is now on Telegram. Click here to join our channel and stay updated with the latest news.

Next