Advertisement
ಗ್ರಾಮದ ಕೇಂದ್ರವಾದ ಪುಟ್ಟ ಕೋಡಿಂಬಾಳ ಪೇಟೆಯು ಉಪ್ಪಿನಂಗಡಿಯಿಂದ ಸುಮಾರು 33 ಕಿ.ಮೀ, ಪಂಜದಿಂದ 7 ಕಿ.ಮೀ. ಹಾಗೂ ಸುಬ್ರಹ್ಮಣ್ಯದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಮಂಗಳೂರು ಲೋಕಸಭಾ ಕ್ಷೇತ್ರ, ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. ಕಡಬ ಗ್ರಾಮಕ್ಕೆ ಹೋಲಿಸಿದರೆ ವಿಸ್ತೀರ್ಣದಲ್ಲಿ ಹಿರಿದು. ಹೆಚ್ಚಿನ ಜನಸಂಖ್ಯೆಯನ್ನೂ ಹೊಂದಿದೆ. ಗ್ರಾಮದ ಒಂದು ಪಾರ್ಶ್ವದಲ್ಲಿ ಕುಮಾರಧಾರ ನದಿ ಹರಿಯುತ್ತದೆ. ಜಿಲ್ಲಾ ಮುಖ್ಯರಸ್ತೆಯಾದ ಕಡಬ-ಪಂಜ ರಸ್ತೆ ಹಾಗೂ ಮಂಗಳೂರು-ಬೆಂಗಳೂರು ರೈಲು ಮಾರ್ಗ ಗ್ರಾಮದಲ್ಲಿ ಹಾದು ಹೋಗುತ್ತಿದ್ದು, ಕೋಡಿಂಬಾಳದಲ್ಲಿ ರೈಲು ನಿಲ್ದಾಣವಿದೆ. ಹೆಚ್ಚಿನ ಕಚ್ಚಾ ರಸ್ತೆಗಳೀಗ ಕಾಂಕ್ರೀಟ್ ರಸ್ತೆಗಳಾಗಿವೆ. ಹಾಗೆಂದು ಅಭಿವೃದ್ಧಿಗೊಳ್ಳಬೇಕಾದ ರಸ್ತೆಗಳು ಇನ್ನೂ ಇವೆ ಎನ್ನುವುದು ಗ್ರಾಮಸ್ಥರ ಆಗ್ರಹ.
Related Articles
Advertisement
ಪಾಳು ಬದ್ದಿದೆ ಸುವರ್ಣ ಭವನ
2009-10ನೇ ಸಾಲಿನಲ್ಲಿ ಈ ಗ್ರಾಮಕ್ಕೆ ಸೀಮಿತವಾಗಿ ಲಭಿಸಿದ ಸುವರ್ಣ ಗ್ರಾಮೋದಯ ಯೋಜನೆಯ 1 ಕೋಟಿ ರೂ. ಅನುದಾನದಲ್ಲಿ ಉಂಡಿಲದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಆದರೆ ಅದು ಬಳಕೆಯಾಗದೇ ಭೂತ ಬಂಗಲೆಯಂತೆ ಪಾಳು ಬಿದ್ದಿದೆ. ಇದರ ಬಳಕೆಗೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕಿದೆ. ವಿವಿಧ ಅಂಗನವಾಡಿಗಳ ದುರಸ್ತಿ ಹಾಗೂ ಅವರಣ ಗೋಡೆ ನಿರ್ಮಿಸಲಾಗಿದೆ. ವಿವಿಧ ಸೇತುವೆ ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಸರಕಾರಿ ಕೆರೆಗಳು
ಬಸ್ತಿ (ಅರ್ಪಾಜೆ) ಕೆರೆ, ದೇರೋಡಿ ಕೆರೆ, ಪಾಜೋವು ಕೆರೆ, ಮಂಜೋಟಿ ಕೆರೆ, ಪುಳಿಕುಕ್ಕು ಕೆರೆ, ಕುಕ್ಕೆರೆಬೆಟ್ಟು (ಪೊಸವಳಿಕೆ) ಕೆರೆ ಗ್ರಾಮದಲ್ಲಿದೆ. ಇವುಗಳ ಅಭಿವೃದ್ಧಿಗೂ ಗಮನಹರಿಸಬೇಕಿದೆ.
ಧಾರ್ಮಿಕ ಕೇಂದ್ರಗಳು
ಶ್ರೀ ದುರ್ಗಾಂಬಿಕಾ (ಅಮ್ಮನವರು)ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿವೆ. ಗ್ರಾಮದ ನಾಕೂರು ಎಂಬಲ್ಲಿ ಕುಮಾರಧಾರ ನದಿಯೊಳಗೆ ಮುಳಗಡೆಯಾಗಿರುವ ಶ್ರೀ ಗೋಪಾಲಕೃಷ್ಣ ದೇವಾಲಯ ಇದೆ ಎಂಬ ಪ್ರತೀತಿ ಇದ್ದು, ಅಲ್ಲಿ ಮನುಷ್ಯರು ಹಾಗೂ ದನ ಕರುಗಳ ರೋಗ ನಿವಾರಣೆಗೆ ಹರಕೆ ಸಲ್ಲಿಸುವ ಸಂಪ್ರದಾಯವಿದೆ.
ಅಭಿವೃದಿಗೆ ವೇಗ: ಕೋಡಿಂಬಾಳ ಗ್ರಾಮವು ಹೆಚ್ಚಿನ ವಿಸ್ತೀರ್ಣ ಮತ್ತು ಜನಸಂಖ್ಯೆಯನ್ನು ಹೊಂದಿರುವ ಗ್ರಾಮ. ಪ.ಪಂ. ವ್ಯವಸ್ಥೆಯಲ್ಲಿ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಗಳು ಸಿಗುವುದರಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ. ಗ್ರಾಮೀಣ ರಸ್ತೆಗಳು ಹಾಗೂ ಕೆರೆಗಳ ಅಭಿವೃದ್ಧಿಗೂ ಅನುದಾನ ಲಭ್ಯ. -ಪಕೀರ ಮೂಲ್ಯ, ಮುಖ್ಯಾಧಿಕಾರಿ, ಕಡಬ ಪ.ಪಂ.
ಅಭಿವೃದಿಗೆ ವೇಗ: ಕೋಡಿಂಬಾಳ ಗ್ರಾಮದ ಹೆಚ್ಚಿನ ಭಾಗವು ಕೃಷಿ ಭೂಮಿಯಾಗಿದ್ದು, ತೆರಿಗೆ ಹಾಗೂ ಇತರ ಶುಲ್ಕಗಳ ವಿಚಾರದಲ್ಲಿ ಪ.ಪಂ.ಗೆ ಸಂಬಂಧಿಸಿದ ಶುಲ್ಕವನ್ನು ಪೇಟೆಯಿಂದ ದೂರ ದಲ್ಲಿರುವ ಗ್ರಾಮಸ್ಥರಿಗೆ ವಿಧಿಸಬಾರದು. ಈಗ ಗ್ರಾಮಸ್ಥರಿಗೆ ಪ.ಪಂ.ನ ತೆರಿಗೆಯ ಹೊರೆ ಜಾಸ್ತಿ ಯಾದದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಹೆಚ್ಚಿನ ಬದಲಾವಣೆ ಕಾಣುತ್ತಿಲ್ಲ. -ಶರೀಫ್ ಕೋಡಿಂಬಾಳ, ಕೃಷಿಕ -ನಾಗರಾಜ್ ಎನ್.ಕೆ.