ಮಣಿಪಾಲ: ಕೋಡಿಬೆಟ್ಟು ಗ್ರಾ.ಪಂ. ವ್ಯಾಪ್ತಿ ಪೆರ್ಣಂಕಿಲ 1ನೇ ವಾರ್ಡ್‌ನ ವರ್ವಾಡಿ ಪೊದ್ದಲಕಟ್ಟ ಕಾಲುಸಂಕ ಕಿರು ಸೇತುವೆ ದುಃಸ್ಥಿತಿಯಲ್ಲಿದ್ದು, ತೀರಾ ಹದಗೆಟ್ಟು ಹೋಗಿದೆ. ಸುತ್ತಮುತ್ತ 100ಕ್ಕೂ ಅಧಿಕ ಮನೆಗಳಿಗೆ ಓಡಾಡಲು ಸಂಪರ್ಕ ಕೊಂಡಿಯಾಗಿರುವ ಈ ಕಿರು ಸೇತುವೆ ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು, ಇನ್ನೇನು ಬೀಳುವ ಪರಿಸ್ಥಿತಿಯಲ್ಲಿ ಜನರು ಆತಂಕದಿಂದ ಸಂಚರಿಸುವಂತಾಗಿದೆ.
ಸೇತುವೆ ಮೇಲೆ ಸುತ್ತಮುತ್ತಲಿನ ಶಾಲೆಯ ನೂರಾರು ಮಂದಿ ಮಕ್ಕಳು ಇದರಲ್ಲಿ ನಡೆದುಕೊಂಡು ಹೋಗಬೇಕಿದೆ. ವಾರ್ಷಿಕವಾಗಿ ನಡೆಯುವ ಕೊಡಿಮಣಿತ್ತಾಯ ದೈವದ ಕಂಬಳ ಕೋಲದ ಬಾಲುಭಂಡಾರ ಮೆರವಣಿಗೆ ಇದೇ ಸೇತುವೆಯಿಂದ ಹೋಗುತ್ತದೆ. ಇದರ ಸಮೀಪದಲ್ಲಿ ಜನ ಓಡಾಟದ ಕೇಂದ್ರಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಲಿನ ಡೇರಿ, ಕೊಡಿಮಣಿತ್ತಾಯ ದೈವಸ್ಥಾನವು ಇದೆ.
ಸೇತುವೆ ಎರಡು ಬದಿ ತಡೆಯಾಗಿ ಬಳಸಿರುವ ಕಬ್ಬಿಣದ ಪೈಪುಗಳು ತುಕ್ಕು ಹಿಡಿದು ಅಲ್ಲಲ್ಲಿ ತುಂಡಾಗಿ ಬಿದ್ದಿದೆ. ಮೇಲಾºಗದ ಕಾಂಕ್ರೀಟ್ ಪಿಲ್ಲರ್‌ಗಳು ಅಲುಗಾಡುತ್ತಿದ್ದು, ಇನ್ನೇನು ತುಂಡಾಗಿ ಬೀಳುವ ಸ್ಥಿತಿಯಲ್ಲಿದೆ. ಸೇತುವೆ ತಳಭಾಗದಲ್ಲಿ ಕಾಂಕ್ರಿಟ್‌ಗೆ ಬಳಸಿದ ಕಬ್ಬಿಣದ ರಾಡುಗಳು ಗೋಚರವಾಗುತ್ತಿದ್ದು, ಇದು ಸಂಪೂರ್ಣ ತುಕ್ಕು ಹಿಡಿದು ಮುಟ್ಟಿದರೆ ತುಂಡುತುಂಡಾಗಿ ಕೆಳಗೆ ಬೀಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು, ಮಕ್ಕಳು ನಡೆದಾಡುವಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಲ್ಲದೆ ಪ್ರತೀ ಮಳೆಗಾಲದಲ್ಲಿ ಇಲ್ಲಿ ನೀರು ತುಂಬಿ ಹರಿಯುತ್ತದೆ. ಈ ಮಳೆಗಾಲವು ಜೀವ ಭಯದಲ್ಲೆ ಕಳೆದಿದ್ದೇವೆ ಎನ್ನುತ್ತಾರೆ ನಾಗರಿಕರು. ಈ ಸೇತುವೆ ಯಾವುದೇ ಕ್ಷಣದಲ್ಲಿಯಾದರೂ ಕುಸಿದು ಬೀಳಬಹುದು. ಪ್ರಾಣಹಾನಿಯಂತಹ ಅನಾಹುತ ಆಗುವ ಮುಂಚೆ ಗ್ರಾ.ಪಂ., ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಗಮನಹರಿಸಿ ಶೀಘ್ರವಾಗಿ ಸೇತುವೆಯನ್ನು ನಿರ್ಮಿಸಿ ಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವೆಂಟೆಡ್ ಡ್ಯಾಂಗೆ ಪ್ರಸ್ತಾವನೆ
ಈ ಕಿರು ಸೇತುವೆ 50ಕ್ಕೂ ಅಧಿಕ ವರ್ಷವಾಗಿದೆ. ಇಲ್ಲಿನ ಜನರಿಗೆ ಚಿತ್ರಬೈಲು, ಮೂಡುಬೆಳ್ಳೆ, ಕಣಂಜಾರು, ಹಿರಿಯಡಕ ಸಾಗಲು ಇದುವೇ ಸಂಪರ್ಕ ಸೇತುವೆಯಾಗಿದೆ. ಇದರ ಅಭಿವೃದ್ಧಿಗೆ ಕೋಡಿಬೆಟ್ಟು ಗ್ರಾ. ಪಂ. ಎರಡು ವರ್ಷಗಳ ಹಿಂದೆ ಪ್ರಸ್ತಾವನೆ ಸಿದ್ಧªಪಡಿಸಿ ಶಾಸಕರಿಗೆ, ಸಂಬಂಧಪಟ್ಟ ಇಲಾಖೆಗೆ ನೀಡಿದೆ. 50ರಿಂದ 60 ಲಕ್ಷ ರೂ., ಅಂದಾಜು ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸುವುದು ಯೋಜನೆ. ಇದರಲ್ಲಿ 9 ಅಡಿ ಅಗಲದ ವ್ಯವಸ್ಥಿತ ರಸ್ತೆ ನಿರ್ಮಾಣ ಜತೆಗೆ ಹರಿಯುವ ನೀರನ್ನು ಸಂರಕ್ಷಿಸುವುದು. ಇದರಿಂದ ಸುತ್ತಮುತ್ತಲಿನ 300 ಎಕ್ರೆಗೆ ಕೃಷಿಗಾಗಿ ನೀರಾವರಿ ಸೌಲಭ್ಯ, ಗ್ರಾಮದ ಅಂತರ್ಜಲ ವೃದ್ಧಿ, ಸ್ಥಳೀಯ ಜನವಸತಿ ಕಾಲನಿಗಳಿಗೆ ನೀರು ಪೂರೈಕೆಗೆ ದೂರದೃಷ್ಟಿ ಯೋಜನೆಯಾಗಿತ್ತು. ಆದರೆ ಇದು ಪ್ರಸ್ತಾವನೆ ಹಂತದಲ್ಲಿಯೇ ಯೋಜನೆ ಬಾಕಿಯಾಗಿದ್ದು, ಶಾಸಕರು, ಜಿ.ಪಂ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ಪ್ರಸ್ತಾವನೆ ಸಲ್ಲಿಕೆ: ದುಃಸ್ಥಿತಿಯಲ್ಲಿರುವ ವರ್ವಾಡಿ ಪೊದ್ದಲಕಟ್ಟ ಕಿರು ಸೇತುವೆ ಅಭಿವೃದ್ಧಿಗೆ ಗ್ರಾ. ಪಂ. ವತಿಯಿಂದ ವೆಂಟೆಡ್ ಡ್ಯಾಂ ಯೋಜನೆಗೆ ಪ್ರಸ್ತಾವನೆ ರೂಪಿಸಿ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಸಲ್ಲಿಸಿದ್ದೇವೆ. ಶೀಘ್ರದಲ್ಲೆ ಅನುದಾನ ಒದಗಿಸಿ, ಕಿರು ಸೇತುವೆ ಅಭಿವೃದ್ಧಿಗೊಳಿಸುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. –
ಸದಾನಂದ ಪ್ರಭು ವರ್ವಾಡಿ, ಉಪಾಧ್ಯಕ್ಷರು, ಕೋಡಿಬೆಟ್ಟು ಗ್ರಾ. ಪಂ.