ಕೊಲ್ಲೂರು: ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಫೆ. 20ರಂದು ಇಲ್ಲಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳಿ ಗುಹೆ ಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೊಡಚಾದ್ರಿ ಬೆಟ್ಟಕ್ಕೆ ತೆರಳಿದ ಸ್ವಾಮೀಜಿಯವರು ಅಲ್ಲಿನ ಸರ್ವಜ್ಞಪೀಠದಲ್ಲಿ ಧ್ಯಾನಾಸಕ್ತರಾಗಿ ಒಂದು ತಾಸು ಕಾಲ ಶ್ರೀದೇವಿ ಯನ್ನು ಆರಾಧಿಸಿ ಅಲ್ಲಿನ ಪರಿಸರವನ್ನು ವೀಕ್ಷಿಸಿದರು.
ಫೆ. 20ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಚಂದ್ರಮೌಳೇಶ್ವರ ಪೂಜೆಯ ಅನಂತರ ಶ್ರೀಗಳು ಕೊಡಚಾದ್ರಿ ಬೆಟ್ಟಕ್ಕೆ ತೆರಳಿದರು. ಅವರೊಂದಿಗೆ ದೇಗುಲದ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ಶ್ರೀ ಕುಂದೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಕೃಷ್ಣಾನಂದ ಚಾತ್ರ ಮುಂತಾದವರು ಉಪಸ್ಥಿತರಿದ್ದರು.
ಫೆ. 19ರ ರಾತ್ರಿ ದೇಗುಲಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ತಂತ್ರಿ ನಿತ್ಯಾನಂದ ಅಡಿಗ, ಅರ್ಚಕರಾದ ಡಾ| ಕೆ. ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ, ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ, ರಾಮಚಂದ್ರ ಅಡಿಗ ಮುಂತಾದವರು ಉಪಸ್ಥಿತರಿದ್ದರು.
ಇಂದು ಆಶೀರ್ವಚನ
ಶ್ರೀ ಮೂಕಾಂಬಿಕಾ ದೇವಿಗೆ ಫೆ. 21ರಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ಅನಂತರ ಪಾದಪೂಜೆ, ಆಶೀರ್ವಚನ, ಫಲಮಂತ್ರಾಕ್ಷತೆ ವಿತರಣೆ ನಡೆದ ಬಳಿಕ ಮಧ್ಯಾಹ್ನ ಅವರು ಪ್ರಯಾಣ ಮುಂದುವರಿಸಿದರು.