Advertisement

ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನ ಸಿಗುತ್ತಿಲ್ಲ

12:18 PM Dec 11, 2017 | |

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿಂದು ಸರ್ಟಿಫಿಕೆಟ್‌ ಸಿಗುತ್ತಿವೆಯೇ ಹೊರತು, ಜ್ಞಾನ ದೊರೆಯುತ್ತಿಲ್ಲ. ಜೀವನದ ಆರಮಭದಿಂದಲೂ ಕೌಶಲ್ಯ ಪಡೆಯುತ್ತಲೇ ಬಂದರೆ, ಕೌಶಲ್ಯಾಭಿವೃದ್ಧಿ ಸಚಿವಾಲಯದ ಅಗತ್ಯವೇ ಇರುವುದಿಲ್ಲ ಎಂದು ಕೇಂದ್ರ ಕೌಶಲ್ಯ ಸಚಿವ ಅನಂತ ಕುಮಾರ್‌ ಹೆಗಡೆ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಆರ್ಯ ವೈಶ್ಯ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಭಾನುವಾರ ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಆಯೋಜಿಸಿದ್ದ “ವಾರ್ಷಿಕ ವಿದ್ಯಾರ್ಥಿ ವೇತನ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪದವಿಗಳು ಸಿಗುತ್ತಿವೆ. ಆದರೆ, ಜ್ಞಾನ ದೊರೆಯುತ್ತಿಲ್ಲ. ಹೀಗಾಗಿ ಕೌಶಲ್ಯಾಭಿವೃದ್ಧಿ ಸಚಿವಾಲಯ ಆರಂಭಿಸಿ, ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.

ಶಿಕ್ಷಣ ಸಂಸ್ಥೆಗಳಿಂದ ಎಂಕಾಂ ಪಡೆದು ಬಂದವರಿಗೆ ಬ್ಯಾಲೆನ್ಸ್‌ ಶೀಟ್‌ ಹಾಕಲು ಬರುವುದಿಲ್ಲ. ಎಂಎಸ್‌ಸಿ ಅಗ್ರಿಕಲ್ಚರ್‌ ಮಾಡಿದವರಿಗೆ ಮಣ್ಣಿನ ಗುಣಮಟ್ಟದ ಬಗ್ಗೆ ತಿಳಿದಿಲ್ಲ. ಬಿ.ಟೆಕ್‌ ಮುಗಿಸಿಕೊಂಡು ಬಂದವರಿಗೆ ಟೆಕ್ನಾಲಜಿ ಪೇಪರ್‌ನಲ್ಲಿ ಮಾತ್ರ ಗೊತ್ತು. ಪ್ರಾಕ್ಟಿಕಲ್‌ ಕೊಟ್ಟರೆ ಲಾಗ ಹೊಡೆಯುತ್ತಾರೆ. ಕೈಯಲ್ಲಿ ಪಿಎಚ್‌ಡಿ ಇದ್ದರೂ ಕೆಲಸಕ್ಕಾಗಿ ತಡಕಾಡುತ್ತಲೇ ಇರುತ್ತಾರೆ. ನಮ್ಮ ಬಳಿ ಕಾಗಗದ ಚೂರು ಮಾತ್ರ ಇರುತ್ತವೆ, ತಲೆಯಲ್ಲಿ ಏನೂ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಸಮಾಜದಲ್ಲಿ ಈ ಮೊದಲು ಮನೆಯಲ್ಲೇ ತರಬೇತಿ ನಡೆಯುತ್ತಿತ್ತು. ಅಕ್ಕಸಾಲಿಗನ ಕೈಕೆಳಗೆ ಕೆಲಸ ಮಾಡುವವರಿಗೆ ಪಠ್ಯ ಇರುತ್ತಿರಲಿಲ್ಲ. ನೇರ ವ್ಯಾಪಾರ, ವ್ಯವಹಾರ ಮಾಡುವ ಜನ ಲಾಭ-ನಷ್ಟ ಲೆಕ್ಕಚಾರ ಮಾಡುತ್ತಿದ್ದರು. ಆದರಿಂದು ಎಂಕಾಂ ಪದವಿ ಪಡೆದವರಿಗೆ ಬ್ಯಾಲೆನ್ಸ್‌ ಶೀಟ್‌ ಹಾಕಲು ಬರುವುದಿಲ್ಲ. ಇದು ಆಧುನಿಕ ಶಿಕ್ಷಣ ನಮಗೆ ನೀಡಿರುವ ಬಹು ದೊಡ್ಡ ಕೊಡುಗೆ ಎಂದು ಟೀಕಿಸಿದರು.

ಇಂಗ್ಲಿಷ್‌ ಕಲಿತ ಹಾಗೂ ವಿದೇಶಕ್ಕೆ ಹೋದ ತಕ್ಷಣ ನಾವು ಬೇರೆಯವರ ತತ್ವಾದರ್ಶಗಳನ್ನು ಕಲಿಯಲು ಮುಂದಾಗಿ, ನಮ್ಮ ತತ್ವಾದರ್ಶಗಳನ್ನು ಮರೆಯುತ್ತಿದ್ದೇವೆ. ಭಾರತ ಜಗತ್ತಿನ ವಿಶ್ವಕೋಶವಾಗಿದ್ದು, ಇಲ್ಲಿ ದೊರೆಯದಿರುವುದು ವಿಶ್ವದ ಬೇರೆಲ್ಲಿಯೂ ದೊರೆಯಲು ಸಾಧ್ಯವಿಲ್ಲ. ಭಾರತೀಯರ ಬದುಕು ಪ್ರಯೋಗಾತ್ಮಕವಾಗಿತ್ತೇ ಹೊರತು, ಪಠ್ಯ ಆಧಾರಿತವಾಗಿರಲಿಲ್ಲ ಎಂದು ಹೇಳಿದರು. 

Advertisement

ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್‌ ರಾವ್‌, ಹಿಂದೆ ರಾಜ್ಯಗಳನ್ನು ಆಳಿದ್ದ ಬಲಿಷ್ಟ ಸಮುದಾಯಗಳು ಇಂದು ಮೀಸಲಾತಿ ಕೇಳುತ್ತಿವೆ. ಆದರೆ, ಆರ್ಯ ವೈಶ್ಯರು ಮಾತ್ರ ಮೀಸಲಾತಿ ಕೋರಿಲ್ಲ. ಸುಮಾರು ಐದು ಸಾವಿರ ವರ್ಷಗಳಿಂದ ಅವರು ಸ್ವಾವಲಂಬಿಗಳಾಗಿ ಉದ್ಯಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಜತೆಗೆ ದೇಶದ ಅಭಿವೃದ್ಧಿ ಹಾಗೂ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ವ್ಯಾಸಂಗದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ದಾನಿಗಳು ವಿದ್ಯಾರ್ಥಿ ವೇತನ ವಿತರಿಸಿದರು. ಈ ವೇಳೆ ಜಿಎಂಆರ್‌ ಗ್ರೂಪ್‌ ಮುಖ್ಯಸ್ಥ ಜಿ.ಮಲ್ಲಿಕಾರ್ಜುನ ರಾವ್‌, ಟ್ರಸ್ಟ್‌ ಅಧ್ಯಕ್ಷ ಐ.ಎಸ್‌.ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

ನಿದ್ದೆ ಕೆಡಿಸುವ ಕನಸು ಕಾಣಿ: “ಚಿಕ್ಕ ಕನಸುಗಳನ್ನು ಕಾಣುವವರಿಗೆ ಸಮಾಜದಲ್ಲಿ ಆದರ್ಶವಾಗಿ ಬದುಕಲು ಅವಕಾಶವಿರುವುದಿಲ್ಲ. ಹಿಮಾಲಯದಷ್ಟು ಎತ್ತರದ ಕನಸುಗಳನ್ನು ಕಾಣಬೇಕು. ಆಗ ಮಾತ್ರ ಕನಿಷ್ಠ ಹಿಮಾಲಯದ ಬುಡಕ್ಕಾದರೂ ತಲುಪಬಹುದು.

ಒಂದೊಮ್ಮೆ ಕಾಲ ಸಹಕರಿಸಿದರೆ ಹಿಮಾಲಯದಂತಹ ಕನಸೂ ನನಸಾಗಬಹುದು,’ ಎಂದ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ, ಎಲ್ಲರೂ ಸುಂದರ, ಬಣ್ಣ ಬಣ್ಣದ ಕನಸು ಕಾಣುತ್ತಾರೆ. ಕನಸು ಕಂಡು ಖುಷಿಪಡುತ್ತಾರೆ. ಮತ್ತೆ ನಿದ್ರಿಸುತ್ತಾರೆ. ಆದರೆ, ನಿದ್ರೆ ಹಾರಿಸುವಂತಹ ಕನಸುಗಳನ್ನು ಕಾಣಬೇಕು. ಅಂತಹ ಕನಸುಗಳು ಎಲ್ಲರಿಗೂ ಬೀಳುವುದಿಲ್ಲ. ಅದಕ್ಕೊಂದು ಯೋಗ್ಯತೆ, ಸಂಸ್ಕಾರ ಇರಬೇಕು,’ ಎಂದರು.

ಉಪೇಂದ್ರ ಕನಸು: “ಉಪೇಂದ್ರ ಅವರ ಸಿನಿಮಾ ನೋಡಿದಾಕ್ಷಣ ಮಹತ್ವಾಕಾಂಕ್ಷಿ ಕನಸುಗಳು ಬೀಳುತ್ತವೇ ಎಂದುಕೊಂಡರೆ ಕಷ್ಟ. ಚಂದ್ರಶೇಖರ್‌ ಅಜಾದ್‌, ಭಗತ್‌ಸಿಂಗ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಬಾಲಗಂಗಾಧರ ತಿಲಕ್‌ ಅವರಂತಹ ಮಹನೀಯರ ಕುರಿತು ತಿಳಿದುಕೊಳ್ಳಬೇಕು. ಆಗ ಮಾತ್ರ ಮಹತ್ವಾಕಾಂಕ್ಷಿ ಕನಸುಗಳು ಬೀಳುತ್ತವೆ. ಸಿನಿಕತನದ ಕನಸುಗಳಿಗೆ ದಮ್‌ ಇರುವುದಿಲ್ಲ’ ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next