Advertisement

“ಸೌಲಭ್ಯಕ್ಕಾಗಿ ಅರಿವು ಮೂಡಿಸಿ’

11:43 AM Oct 14, 2017 | Team Udayavani |

ದೇವನಹಳ್ಳಿ: ಅಪೌಷ್ಟಿಕತೆ, ತಾಯಿ ಮರಣ, ಶಿಶು ಮರಣ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವಾರು ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸುವಂತೆ ಜಿಪಂ ಅಧ್ಯಕ್ಷ ವಿ. ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸೌಲಭ್ಯ ಪಡೆಯಲು ಅರಿವು ಮೂಡಿಸಿ: ಅಕ್ಟೋಬರ್‌ 2 ರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯ 13,800 ಫ‌ಲಾನುಭವಿಗಳ ಪೈಕಿ,ದಿನವೊಂದಕ್ಕೆ ಏಳರಿಂದ ಎಂಟು ಸಾವಿರ ಫ‌ಲಾನುಭವಿಗಳು ಮಾತ್ರ ಬಿಸಿಯೂಟ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನುಳಿದ ಫ‌ಲಾನುಭವಿಗಳು ಈ ಸೌಲಭ್ಯ ಪಡೆಯುವಂತೆ ಅರಿವು ಮೂಡಿಸಬೇಕು. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಇಂತಹ ಯೋಜನೆಗಳ ಪ್ರಚಾರ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಶೇ.94 ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ವಾರ್ಷಿಕ ವಾಡಿಕೆಗಿಂತ ಶೇ.41 ರಷ್ಟು ಹೆಚ್ಚು
ಮಳೆಯಾಗಿದ್ದು, ಶೇ.94 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿ
ದರು. ಆಗ ಅಧ್ಯಕ್ಷರು ಹೆಚ್ಚು ಮಳೆಯಿಂದಾಗಿ ಬೆಳೆ ಹಾನಿಯಾದ ರೈತರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ.ದಯಾನಂದ್‌ ಮಳೆಯಿಂದ ಬೆಳೆ ಹಾನಿಯಾದ ರೈತರ ಬಗ್ಗೆ ಕೂಡಲೇ ಬೆಳೆ ವಿಮೆ ಕಂಪನಿಗಳಿಗೆ ಮಾಹಿತಿ ನೀಡುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.

ದೇವನಹಳ್ಳಿಯ ಬೂದಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ ಬಗ್ಗೆ ಸದಸ್ಯರೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ ಪ್ರಸ್ತಾಪವಿಲ್ಲ. ಈ ಕುರಿತು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಮಳೆ ನೀರು ನಿಂತ ಆಸ್ಪತ್ರೆ: ಇತ್ತೀಚೆಗೆ ಉದ್ಘಾಟನೆಯಾದ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸುತ್ತಿಲ್ಲ ಹಾಗೂ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಮಳೆನೀರು ನಿಂತಿದೆ ಎಂದು ದೊಡ್ಡಬಳ್ಳಾಪುರ ಜಿಪಂ ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಶೀಘ್ರವಾಗಿ ಆರೋಗ್ಯ ಸೌಲಭ್ಯ ನೀಡಲಾಗುವುದು ಹಾಗೂ ಆಸ್ಪತ್ರೆಯಲ್ಲಿ ನೀರು ನಿಲ್ಲದಂತೆ ಆಸ್ಪತ್ರೆ ಎದುರು ಚರಂಡಿ ನಿರ್ಮಿಸಲು ಎಂಜಿನಿಯರ್‌ ಅವರಿಗೆ ತಿಳಿಸಲಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.

Advertisement

ಸಾಂಪ್ರದಾಯಕ ಮೀನುಮರಿ ಬಿಡಿ: ಜಿಲ್ಲೆಯಲ್ಲಿ ಅಕ್ರಮವಾಗಿ ಸಾಕಾಣಿಕೆ ಮಾಡಲಾಗುತ್ತಿರುವ ಕ್ಯಾಟ್‌ಫಿಶ್‌ ದಂಧೆ ನಿಯಂತ್ರಿಸಲು ವಿಫ‌ಲರಾದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷ ಪ್ರಸಾದ್‌, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಹಕಾರ ಪಡೆದು ಕೂಡಲೇ ಕ್ಯಾಟ್‌ಫಿಶ್‌ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. 
ಅಲ್ಲದೇ ಉತ್ತಮ ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ ತುಂಬಿರುವ ಕೆರೆಗಳ ಮಾಹಿತಿ ಪಡೆದು, ಸಾಂಪ್ರದಾಯಕ ಮೀನುಮರಿ ತಳಿಗಳನ್ನು ಕೆರೆಗಳಿಗೆ ಬಿಡಬೇಕೆಂದು ತಿಳಿಸಿದರು. 

ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಹಲವಾರು ಓವರ್‌ಹೆಡ್‌ ಟ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪಂಪು ಮೋಟಾರು ಸಮಸ್ಯೆ, ಪೈಪ್‌ಲೈನ್‌ ಸಮಸ್ಯೆ, ವಿದ್ಯುತ್‌ ಸಮಸ್ಯೆ ಹೀಗೆ ಯಾವುದಾದರೂ ಸಮಸ್ಯೆ ಹೇಳಿ ಜನರಿಗೆ ನೀರಿನ ಸೌಲಭ್ಯ ಕಲ್ಪಿಸದೇ ಅಧಿಕಾರಿಗಳು ವಂಚಿಸುತ್ತಿದ್ದಾರೆಂದು ಸದಸ್ಯರು ಒಕ್ಕೊರಲಿನಿಂದ ಪ್ರಶ್ನಿಸಿದರು. 

ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ: ಈ ವೇಳೆ ಅಧ್ಯಕ್ಷರು ಮಾತನಾಡಿ, ಎಲ್ಲಾ ಓವರ್‌ ಹೆಡ್‌ ಟ್ಯಾಂಕ್‌ಗಳ ಬಳಕೆಗೆ ಬೇಕಾದ ಸೌಲಭ್ಯ ಒದಗಿಸುವಂತೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್‌ಗಳಿಗೆ ಸೂಚಿಸಿದರು. ಕೆಲಸ ನಿರ್ವಹಿಸದಿದ್ದಲ್ಲಿ ಸಂಬಂಧಿಸಿದ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ಎನ್‌. ಅನಂತಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಉಪಕಾರ್ಯದರ್ಶಿ ಕಾಂತರಾಜ್‌, ಮುಖ್ಯ ಯೋಜಾನಾಧಿಕಾರಿ ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ, ತಾಪಂ ಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next