Advertisement

ಜ್ಞಾನ ಸಂಪಾದನೆಯ ಛಲವಿದ್ದಲ್ಲಿ ಯಶಸ್ಸು

05:41 PM Aug 18, 2017 | |

ಕಲಬುರಗಿ: ಮನುಷ್ಯ ಹುಟ್ಟುತ್ತಲೇ ಬುದ್ದಿವಂತನಾಗಿರುವುದಿಲ್ಲ. ಯಾವುದೇ ವಿಷಯದಲ್ಲಿ ಆಳವಾದ ಆಸಕ್ತಿ ಹಾಗೂ ಜ್ಞಾನ ಸಂಪಾದನೆಗೆ ಹೆಚ್ಚಿನ ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಮಾನವ ಕಂಪ್ಯೂಟರ್‌ ಖ್ಯಾತಿ ಪಡೆದ ಅಥಣಿಯ ಬಸವರಾಜ ಉಮರಾಣಿ ಹಾಗೂ ಪ್ರಭಾವಿ ಪ್ರೇರಕ ಕೋತಿಗುಡ್ಡದ ರಮೇಶ ಬಲ್ಲಿದ ಹೇಳಿದರು. ಗುರುವಾರ ನಗರದ ಕೆಸರಟಗಿ ರಸ್ತೆಯ ಕಾಯಕ ವಸತಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ನೀಡಿದ ಅವರು, ಸ್ವ ಸಾಮರ್ಥ್ಯದಿಂದ ಸಾಧನೆ ಮೆಟ್ಟಿಲೇರಿರುವುದನ್ನು ಸಾವಿರಾರು ವಿದ್ಯಾರ್ಥಿಗಳಿಗೆ ವಿವರಿಸಿದರು. ಹುಟ್ಟುತ್ತಲೇ ಬುದ್ಧಿವಂತರು ಯಾರೂ ಇರೋದಿಲ್ಲ. ಕಲಿಯುತ್ತ ಹೋದದಂತೆ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ಕಲಿಕೆ ಮತ್ತು ಜ್ಞಾನವೊಂದೇ ನಮ್ಮನ್ನು ಮುನ್ನಡೆಸುವ ಗುರು. ಆದ್ದರಿಂದ ಪ್ರತಿಯೊಬ್ಬರು ಜ್ಞಾನ ಬೆಳೆಸಿಕೊಳ್ಳಬೇಕು. ಆ ಮೂಲಕ ತಮ್ಮ ಸಾಧನೆ ಮೆರೆಯಲು ವೇದಿಕೆಗಳನ್ನು ರೂಪಿಸಿಕೊಳ್ಳಬೇಕು
ಎಂದು ಸಲಹೆ ನೀಡಿದರು. ಮಾನವ ಕಂಪ್ಯೂಟರ್‌ ಬಸವರಾಜ ಉಮರಾಣಿ, ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಹೇಳಿದ ತಕ್ಷಣವೇ, ಹುಟ್ಟಿದ ವಾರ, ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದರೆ ಗಡಿಯಾರದ ಸಹಾಯವಿಲ್ಲದೆ ನಿಖರವಾಗಿ ಸಮಯ ಹೇಳುವ, ಬೋರ್ಡ್‌ ಮೇಲೆ ಎಂಥದೇ ಕಠಿಣ ಲೆಕ್ಕ ಹಾಕಿದರೂ ತಕ್ಷಣವೇ ಉತ್ತರ ಹೇಳುವ ಮೂಲಕ ಮಕ್ಕಳನ್ನು ನಿಬ್ಬೆರಗಾಗಿಸಿದರು. ಯುನೈಟೆಡ್‌ ಆಸ್ಪತ್ರೆಯ ಮುಖ್ಯಸ್ಥ ಡಾ| ವಿಕ್ರಮ ಸಿದ್ಧಾರೆಡ್ಡಿ ಮಾತನಾಡಿ, ಸಮಸ್ಯೆಗಳು ಮನುಷ್ಯರಿಗಲ್ಲದೆ ಮತ್ತಾರಿಗೆ ಬರುತ್ತವೆ. ಹಾಗೆ ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಸ್ವಪ್ರಯತ್ನದಿಂದ ಮೇಲೇರಿ ಸಾಧನೆ ಮೆರೆಯುವುದೇ
ಸಾಧಕತನ ಎಂದು ಹೇಳಿದರು. ಕಾಯಕ ಫೌಂಡೇಶನ್‌ ವಸತಿ ಹೈಸ್ಕೂಲ್‌ ಮತ್ತು ಕಾಯಕ ಫೌಂಡೇಷನ್‌ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳ ಸಂಸ್ಥಾಪಕ ಶಿವರಾಜ ಟಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿವಾಂಶ ಪ್ರಕಾಶನದ ಎಸ್‌.ಎಸ್‌. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯರಾದ ವಿಜಯಕುಮಾರ ಕಟ್ಟಿಮನಿ, ವಿನಾಯಕ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next